– ಅಪ್ಪು ಕುಟುಂಬ, ಅಭಿಮಾನಿಗಳಿಗೆ ಇರುವ ನೋವು ನಮ್ಮ ಕುಟುಂಬಕ್ಕೂ ಆಗಿದೆ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆಯ ದುಃಖವನ್ನು ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ 12 ದಿನಗಳ ನಂತರ ಸೋಶಿಯಲ್ ಮೀಡಿಯಾದಲ್ಲಿ ತೋಡಿಕೊಂಡಿದ್ದರು, ಆದರೆ ಈ ಪೋಸ್ಟ್ ಮಾಡುತ್ತಿದ್ದಂತೆ ಬಂದಿರುವ ಕಾಮೆಂಟ್‍ಗಳಿಗೆ ರಾಧಿಕಾ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ಅಪ್ಪು ಸರ್ ನೀವು ಇನ್ನು ಮುಂದೆ ಇಲ್ಲ ಎಂಬುದನ್ನು ಇನ್ನೂ ನಮ್ಮ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ಇದು ನಂಬಲಾಗದ ವಿಷಯವಾಗಿದೆ. ನೀವು ಇಲ್ಲದ ಇಂಡಸ್ಟ್ರಿ ಬರಡಾಗಿದೆ. ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡು ಅಪ್ಪು ಜೊತೆಗೆ ಇರುವ ಕೆಲವು ಫೋಟೋವನ್ನು ಶೇರ್ ಮಾಡಿ ಬೇಸರ ವ್ಯಕ್ತಪಡಿಸಿದ್ದರು. ಇದನ್ನು ಗಮನಿಸಿದ ನೆಟ್ಟಿಗರು, ಅಭಿಮಾನಿಗಳು ಆದರೆ ನೀವು ಯಾಕೆ ಅಪ್ಪು ಅಂತಿಮ ದರ್ಶನ ಮಾಡಲು ಬಂದಿಲ್ಲ ಎಂದು ಪ್ರಶ್ನಿಸಿ ಕಾಮೆಂಟ್ ಮಾಡುತ್ತಿದ್ದರು. ಇದಕ್ಕೆ ರಾಧಿಕಾ ಒಂದೇ ಸಂದೇಶದಲ್ಲಿ ಉತ್ತರಿಸಿದ್ದಾರೆ.
ಅಭಿಮಾನಿ ಪ್ರಶ್ನೆಗೆ ರಾಧಿಕಾ ಉತ್ತರ: ಜೀವನದಲ್ಲಿ ಆದಷ್ಟು ಒಬ್ಬರ ಮೇಲೆ ಕೋಪ ಇದ್ದರು ಪ್ರೀತಿ ಹಂಚಿ, ತಾಳ್ಮೆಯಿರಲಿ. ನಾನು ಅಂತಿಮ ದರ್ಶನ ಪಡೆದೆನೋ ಇಲ್ವೋ ಎಂಬುದು ಅವರ ಕುಟುಂಬಕ್ಕೆ ತಿಳಿದಿದೆ, ನಮಗೆ ತಿಳಿದಿದೆ. ಕ್ಯಾಮೆರಾ ಮುಂದೆ ಬಂದು ಮಾತನಾಡುವ ಶಕ್ತಿ ನನಗಿರಲಿಲ್ಲ. ಕ್ಯಾಮೆರಾ ಮುಂದೆ ಬಂದು ಮಾತನಾಡದೆ ಇರುವುದು ದೊಡ್ಡ ತಪ್ಪು ಎಂದು ನಾನು ಭಾವಿಸಲಿರಲಿಲ್ಲ. ಅವರ ಮೇಲಿರುವ ಪ್ರೀತಿಗೆ ನೀವು ಹೀಗೆ ಮಾತನಾಡುತ್ತಿರುವುದು ಸಹಜ. ಅಪ್ಪು ಸರ್ ಅಗಲಿಕೆ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಾದ ನಿಮಗೆ ಎಷ್ಟು ನೋವು ನೀಡುತ್ತಿದೆಯೋ, ಅಷ್ಟೇ ನೋವು ನನಗೂ ನಮ್ಮ ಕುಟುಂಬಕ್ಕೂ ಆಗಿದೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಸರ್ ಅಗಲಿಕೆ ಎಂದೆಂದಿಗೂ ನಮ್ನನ್ನು ಕಾಡುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇವೆ: ರಾಧಿಕಾ ಪಂಡಿತ್
View this post on Instagram
ಅಕ್ಟೋಬರ್ 29ರಂದು ಶುಕ್ರವಾರ ಬೆಳಗ್ಗೆ ಮನೆಯಲ್ಲಿ ವರ್ಕೌಟ್ ಮಾಡಿದ ಸಂದರ್ಭದಲ್ಲಿ ಅಪ್ಪುಗೆ ಆಯಾಸ ಕಾಣಿಸಿಕೊಂಡಿತು. ಹಾಗೆಯೇ ಸ್ಟೀಮ್ ಬಾತ್ ಮಾಡಿಕೊಂಡು ಪತ್ನಿ ಜೊತೆ ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಹೊರಡುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಾದರೂ, ಅದು ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ: ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!
ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ವಿಧಿ ವಿಧಾನಗಳ ಮೂಲಕವಾಗಿ ಅಪ್ಪು ಅಂತ್ಯಕ್ರಿಯೆ ಮಾಡಲಾಯಿತ್ತು. ಅಪ್ಪು ಅವರ ಸಮಾಧಿ ನೋಡಲು ಸಾಗರೋಪಾದಿಯಲ್ಲಿ ಅಭಿಮಾನಿಗಳ ಸಾಗರವೇ ಹರಿದು ಬರುತ್ತಿದೆ. ನಿನ್ನೆ ಅವರ ಸ್ಮರಣಾರ್ಥಕವಾಗಿ ರಾಜ್ ಕುಟುಂಬಸ್ಥರು ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡಿದ್ದಾರೆ.
ಅಪ್ಪು ಅಗಲಿಕೆಯ ನೋವನ್ನು ಅಭಿಮಾನಿಗಳು, ಸ್ಯಾಂಡಲ್‍ವುಡ್, ಕಲಾವಿದರು, ಕುಟುಂಬದವರಿಗೆ ಮರೆಯಲು ಸಾಧ್ಯವಾಗುತ್ತಿಲ್ಲ. ಇದೀಗ ರಾಧಿಕಾ ಪಂಡಿತ್ ಅವರು ತಮ್ಮ ನೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ತಾವು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಕಾಮೆಂಟ್ ಮಾಡುತ್ತಿದ್ದಾರೆ.