ಚೇಸ್ ಟೀಸರ್ ರಿಲೀಸ್ ಮಾಡಿದ ದಿಗ್ಗಜರು

Public TV
2 Min Read
Chase Movie Tease

ಬೆಂಗಳೂರು: ಮಹಿಳೆಯರು ರಾತ್ರಿ ಹೊತ್ತು ಕ್ಯಾಬ್‍ಗಳಲ್ಲಿ ಪ್ರಯಾಣಿಸುವುದು ಅದೆಷ್ಟು ಸೂಕ್ತ ಎಂಬ ವಿಷಯವನ್ನಿಟ್ಟುಕೊಂಡು ಒಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೆಣೆದಿರುವ ಚಿತ್ರ ಚೇಸ್. ವಿಲೋಕ್ ಶೆಟ್ಟಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಎಸ್.ಕೆ. ಭಗವಾನ್, ಓಂ ಸಾಯಿಪ್ರಕಾಶ್ ಹಾಗೂ ಬರಗೂರು ರಾಮಚಂದ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಯುವ ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದು ವಿಶೇಷವಾಗಿತ್ತು. ಚೇಸ್ ಚಿತ್ರತಂಡ ಈ ಮೂವರು ದಿಗ್ಗಜರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿತು. ಈಗಿನ ಕಾಲದ ಜನರಿಗೆ ಹಿಡಿಸುವಂಥ ಹೊಸ ಶೈಲಿಯಲ್ಲಿ ಚಿತ್ರವನ್ನು ನಿರ್ಮಿಸಿರುವ ಈ ಯುವ ತಂಡಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರಲಿ ಎಂಬ ಶುಭ ಹಾರೈಕೆಯ ಮಾತುಗಳು ದಿಗ್ಗಜರಿಂದ ಕಾಣಿಕೆಯಾಗಿ ಸಿಕ್ಕಿತು.

Chase B

ಕ್ರೈಂ, ಥ್ರಿಲ್ಲರ್, ಮಿಸ್ಟ್ರಿ ಕಥಾನಕ ಒಳಗೊಂಡ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಅರವಿಂದರಾವ್, ಪ್ರಮೋದ್ ಶೆಟ್ಟಿ, ರಾಜೇಶ್ ನಟರಂಗ, ರೆಹಮಾನ್ ಹಾಗೂ ಬಾಲಿವುಡ್‍ನ ಎಬಿಸಿಡಿ ಚಿತ್ರದಲ್ಲಿ ನಟಿಸಿದ ಸುಶಾಂತ್ ಪೂಜಾರಿ ಸಹ ನಟಿಸಿದ್ದಾರೆ.

Chase C

ನಿರ್ದೇಶಕ ವಿಲೋಕ್ ಶೆಟ್ಟಿ ಮಾತನಾಡಿ, ಈ ಚಿತ್ರ ನಮ್ಮ ತಂಡದ 2 ವರ್ಷಗಳ ಪ್ರಯತ್ನದ ಫಲ. ನಮ್ಮ ಚಿತ್ರದ ಟೀಸರನ್ನು ಹಿರಿಯ ನಿರ್ದೇಶಕರಿಂದಲೇ ಬಿಡುಗಡೆ ಮಾಡಿಸಿದರೆ ಅರ್ಥಪೂರ್ಣವಾಗಿರುತ್ತೆ ಎಂದು ಆಹ್ವಾನಿಸಿದಾಗ ಅವರೆಲ್ಲ ಪ್ರೀತಿಯಿಂದ ಬಂದು ಹರಸಿದ್ದಾರೆ. ಬಹಳಷ್ಟು ಕಲಾವಿರು ಈ ಚಿತ್ರದಲ್ಲಿ ಅಭಿನಯಿಸಿರುವುದರಿಂದ ಅವರೆಲ್ಲರ ಡೇಟ್ಸ್ ಹೊಂದಿಸಿಕೊಂಡು ಶೂಟ್ ಮಾಡುವುದು ಸ್ವಲ್ಪ ತಡವಾಯಿತು ಎಂದು ಹೇಳಿದರು.

Chase A

ನಾಯಕಿ ರಾಧಿಕಾ ನಾರಾಯಣ್ ಮಾತನಾಡಿ, ನನ್ನ ಕೆರಿಯರ್‍ನಲ್ಲೇ ಇಂಥ ಪಾತ್ರ ಮಾಡಿಲ್ಲ, ಇದು ನನಗೆ ತುಂಬಾ ವಿಶೇಷ ಪಾತ್ರ. ಪೊಲೀಸ್ ಇನ್‍ಸ್ಪೆಕ್ಟರ್ ಟ್ರೈನಿಂಗ್ ಪಡೆಯುತ್ತಿರುವ ಯುವತಿಯಾಗಿ ನಾನು ಅಭಿನಯಿಸಿದ್ದೇನೆ ಎಂದು ಹೇಳಿದರು. ನಂತರ ನಟ ಸುಶಾಂತ್ ಪೂಜಾರಿ ಮಾತನಾಡಿ ನನ್ನ ತಾಯಿ ಉಡುಪಿಯವರು, ನಾನು ಇಲ್ಲೇ ಹುಟ್ಟಿದ್ದರೂ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ನನಗೆ ತುಂಬಾ ಸ್ಪೆಷಲ್ ರೋಲ್ ಈ ಚಿತ್ರದಲ್ಲಿದೆ ಎಂದು ಹೇಳಿದರು.

Chase D

ನಟ ಅರವಿಂದರಾವ್ ಮಾತನಾಡಿ ಬರೀ ಇನ್‍ಸ್ಪೆಕ್ಟರ್ ಪಾತ್ರಗಳನ್ನೇ ಮಾಡಿ ಬೇಸತ್ತಿದ್ದ ನನಗೆ ಈ ಚಿತ್ರದಲ್ಲಿ ಒಬ್ಬ ಡಾಕ್ಟರ್ ಪಾತ್ರ ಕೊಟ್ಟಿದ್ದರು. ಕನ್ನಡದಲ್ಲಿ ಈ ಥರದ ಸಿನಿಮಾ ಬಂದಿಲ್ಲ ಎಂದು ಹೇಳಿದರು. ಈ ಚಿತ್ರಕ್ಕೆ ಕಾರ್ತಿಕ್ ಆಚಾರ್ಯ ಅವರ ಸಂಗೀತವಿದ್ದು, ಅನಂತರಾಜ ಅರಸ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಿಂಪ್ಲಿ ಫನ್ ಮೀಡಿಯಾ ನೆಟ್‍ವರ್ಕ್ ಮೂಲಕ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಅವರ ನಿರ್ಮಾಣದ ಚೇಸ್ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *