ನವದೆಹಲಿ: ಸದಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾಗುವ ಬಾಲಿವುಡ್ ಬೆಡಗಿ ರಾಧಿಕಾ ಆಪ್ಟೆ ಇದೀಗ ನಿರ್ದೇಶಕರ ವಿರುದ್ಧ ಅಸಮಾಧಾನ ಹೊರ ಹಾಕುವ ಮೂಲಕ ಸುದ್ದಿಯಾಗಿದ್ದಾರೆ. ಬಹುತೇಕ ನಟ, ನಟಿಯರಿಗೆ ಸಿನಿಮಾ ಸೆಟ್‍ಗಳಲ್ಲಿ ಕಹಿ ಅನುಭವಗಳು ಆಗಿರುತ್ತವೆ. ಕೆಲವರು ಇವನ್ನು ಬಹಿರಂಗಪಡಿಸುತ್ತಾರೆ, ಇನ್ನೂ ಕೆಲವರು ಹೇಳಿಕೊಳ್ಳುವುದಿಲ್ಲ. ಇದೀಗ ರಾಧಿಕಾ ಆಪ್ಟೆ ಅವರು ಸೆಟ್‍ನಲ್ಲಿ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ರಾಧಿಕಾ ಆಪ್ಟೆ ಬಾಲಿವುಡ್‍ನ ಬದ್ಲಾಪುರ್, ಪಾಚ್ರ್ಡ್ ಹಾಗೂ ಅಂಧಾದುನ್ ಸಿನಿಮಾಗಳಲ್ಲಿ ನಟಿಸಿದ್ದು, ಈ ಸಿನಿಮಾಗಳ ಮೂಲಕವೇ ಅವರು ಪ್ರತಿಭಾನ್ವಿತ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಈ ಚಿತ್ರಗಳಲ್ಲಿನ ಅವರ ನಟನೆಯನ್ನು ಮೆಚ್ಚದವರಿಲ್ಲ. ಸಾಲು ಸಾಲು ಬಾಲಿವುಡ್ ಸಿನಿಮಾ ಮಾತ್ರವಲ್ಲದೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದಲ್ಲಿ ಸಹ ನಟಿಸಿದ್ದಾರೆ. ಹೀಗೆ ಯಶಸ್ವಿ ಚಿತ್ರಗಳಲ್ಲಿ ನಟಿಸಿದರೂ ರಾಧಿಕಾ ಹೆಚ್ಚು ಸುದ್ದಿಯಾಗುವುದು ವಿವಾದಗಳಿಂದಲೇ ಎನ್ನುವುದು ಬೇಸರದ ಸಂಗತಿ.
ತಮ್ಮ ಮಾತುಗಳಿಂದಲೇ ಆಗಾಗ ವಿವಾದದ ಸುಳಿಗೆ ರಾಧಿಕಾ ಸಿಲುಕುತ್ತಾರೆ. ಇದೀಗ ದಕ್ಷಿಣ ಭಾರತ ಚಿತ್ರರಂಗದಲ್ಲಿನ ಲಿಂಗ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ನಿರ್ದೇಶಕರ ವಿರುದ್ಧ ಹರಿಹಾಯ್ದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಬಹುತೇಕ ನಿರ್ದೇಶಕರು `ಎ’ ಗ್ರೇಡ್ ಕಂಟೆಂಟ್ ಇರುವ ಸಿನಿಮಾಗಳಿಗೇ ಆಫರ್ ನೀಡುತ್ತಾರೆ. ಸಿನಿಮಾದ ಸ್ಕ್ರಿಪ್ಟ್ ಬೇಡಿದರಷ್ಟೇ ಮಾದಕ ದೃಶ್ಯಗಳಲ್ಲಿ ನಟಿಸುತ್ತೇನೆ. ಆದರೆ ನಿರ್ದೇಶಕರು ನನಗೆ ಅಂತಹದ್ದೇ ಆಫರ್ ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ ಲಿಂಗ ತಾರತಮ್ಯ ಅಂದರೆ ಹೀರೋ, ಹೀರೋಯಿನ್‍ಗಳನ್ನು ಸೆಟ್‍ನಲ್ಲಿ ನಡೆಸಿಕೊಳ್ಳುವುದರ ಕುರಿತು ಸಹ ಅವರು ಮಾತನಾಡಿದ್ದಾರೆ. ಎಲ್ಲ ಸಿನಿಮಾಗಳಲ್ಲಿ ಲಿಂಗ ತಾರತಮ್ಯ ಇರುವುದಿಲ್ಲ. ಆದರೆ ನಾನು ನಟಿಸಿರುವ ಸಿನಿಮಾಗಳಲ್ಲಿ ಇಂತಹ ಅನುಭವವಾಗಿದೆ. ಹೀರೊಗಳೇ ಪವರ್‍ಫುಲ್ ಆಗಿರುತ್ತಾರೆ. ಶೂಟಿಂಗ್ ಆರಂಭವಾಗುವುದಕ್ಕೂ ಎರಡು ಗಂಟೆ ಮೊದಲೇ ನಟಿಯರನ್ನು ಸೆಟ್‍ಗೆ ಕರೆಸುತ್ತಾರೆ. ಹೀರೋ ಬರೋವರೆಗೂ ಕಾಯಿಸುತ್ತಾರೆ. ಅಲ್ಲದೆ ನಟಿಯರೊಂದಿಗೆ ನಡೆದುಕೊಳ್ಳುವ ವಿಧಾನದಲ್ಲಿಯೇ ವ್ಯತ್ಯಾಸವಿರುತ್ತದೆ ಅಸಮಾಧಾನ ಹೊರ ಹಾಕಿದ್ದಾರೆ.
ಅಲ್ಲದೆ ಸಿನಿಮಾ ರಂಗದಲ್ಲಿ ತಾವು ಪಟ್ಟ ಕಷ್ಟದ ಕುರಿತು ಸಹ ಮಾತನಾಡಿರುವ ಅವರು, ಬಣ್ಣದ ಲೋಕದಲ್ಲಿ ಕೆಲಸ ಮಾಡಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಚಿತ್ರರಂಗ ಪ್ರವೇಶಿಸಿದ ಆರಂಭದ ದಿನಗಳು ಕಠಿಣವಾಗಿದ್ದವು. ಹೀಗೆ ಕಷ್ಟ ಪಟ್ಟು ಈ ಮಟ್ಟಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ. ರಾಧಿಕಾ ಆಪ್ಟೆ ಇತ್ತೀಚೆಗೆ ತಮ್ಮದೇಯಾದ ಫ್ಯಾಷನ್ ಬ್ರಾಂಡ್‍ಗೂ ಚಾಲನೆ ನೀಡಿದ್ದು, ಚಿತ್ರರಂಗದ ಹೊರತಾಗಿ ಇದನ್ನೂ ನಿಭಾಯಿಸುತ್ತಾರೆ.