ರಾವಲ್ಪಿಂಡಿ: ಇಲ್ಲಿ (Rawalpindi) ನಡೆದ ನ್ಯೂಜಿಲೆಂಡ್-ಬಾಂಗ್ಲಾದೇಶ ನಡುವಿನ ಪಂದ್ಯದ ಸಂದರ್ಭದಲ್ಲಿ ನಿಷೇಧಿತ ಉಗ್ರ ಸಂಘಟನೆ ಇಸ್ಲಾಮಿಸ್ಟ್ ಪಕ್ಷ ತೆಹ್ರೀಕ್-ಎ-ಲಬೈಕ್ ಪಾಕಿಸ್ತಾನ್ (TLP) ಬೆಂಬಲಿಗನೊಬ್ಬ ಮೈದಾನಕ್ಕೆ ನುಗ್ಗಿ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ (Rachin Ravindra) ಅವರನ್ನು ಅಪ್ಪಿಕೊಂಡಿದ್ದಾನೆ. ಈ ಘಟನೆ ಪಾಕಿಸ್ತಾನದ ಭದ್ರತಾ ಪಡೆಗಳ ಕಾರ್ಯ ಹಾಗೂ ಭದ್ರತಾ ವೈಫಲ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ರಾವಲ್ಪಿಂಡಿ ಮೈದಾನದಲ್ಲಿ ರಚಿನ್ ರವೀಂದ್ರ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಮೈದಾನಕ್ಕೆ ನುಗ್ಗಿ, ಅವರನ್ನು ಹಿಂದಿನಿಂದ ತಬ್ಬಿಕೊಂಡಿದ್ದಾನೆ. ಆಗ ರಚಿನ್ ಒಂದು ಕ್ಷಣ ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿ ಕ್ರೀಡಾಂಗಣದಿಂದ ಹೊರಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಗೆ ನಡೆಸಿದಾಗ ಆತ 2021ರಲ್ಲಿ ನಿಷೇಧಕ್ಕೊಳಗಾದ ಟಿಎಲ್‌ಪಿ ಬೆಂಬಲಿಗ ಎಂಬುದು ಗೊತ್ತಾಗಿದೆ. ಈ ವ್ಯಕ್ತಿ ರಚಿನ್ ರವೀಂದ್ರ ಅವರನ್ನು ಹಿಂದಿನಿಂದ ತಬ್ಬಿಕೊಂಡು ಟಿಎಲ್‌ಪಿ ನಾಯಕ ಸಾದ್ ರಿಜ್ವಿ ಅವರ ಚಿತ್ರವನ್ನು ಪ್ರದರ್ಶಿಸಿದ್ದಾನೆ.
ಚಾಂಪಿಯನ್ಸ್ ಟ್ರೋಫಿ ವೇಳೆ ಪಾಕಿಸ್ತಾನದಲ್ಲಿ ಭಯೋತ್ಪಾದಕ ಬೆದರಿಕೆಗಳ ವರದಿಗಳ ನಡುವೆ ಈ ಘಟನೆ ಅನೇಕರಲ್ಲಿ ಆತಂಕಕ್ಕೆ ಕಾರಣವಾಗಿದೆ.