ಮಂಗಳೂರು: ರೇಬೀಸ್ ವೈರಾಣುವಿನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ಹೋಗಿ ಇಡೀ ಊರಿನ ಜನ ರೇಬೀಸ್ ಚುಚ್ಚುಮದ್ದು ಪಡೆದುಕೊಳ್ಳಬೇಕಾದ ಸ್ಥಿತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇಚ್ಲಂಪಾಡಿ ಎಂಬಲ್ಲಿ ಎದುರಾಗಿದೆ.
ಯುವಕ ಆಶಿತ್ ಆಗಸ್ಟ್ 22 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ಈತನ ಮೃತದೇಹವನ್ನು ಮನೆ ಮಂದಿಗೆ ನೀಡುವ ಸಂದರ್ಭದಲ್ಲಿ, ರೇಬೀಸ್ ವೈರಾಣುವಿನಿಂದ ಯುವಕ ಮೃತಪಟ್ಟಿದ್ದಾನೆ ಎನ್ನುವ ಕಾರಣ ನೀಡಲಾಗಿತ್ತು. ಅಲ್ಲದೆ ಮೃತದೇಹವನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಎಂದು ಸೂಚನೆಯನ್ನೂ ಸಹ ವೈದ್ಯರು ನೀಡಿದ್ದರು. ಆದರೆ ಮನೆ ಮಂದಿ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ನಿರ್ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ಯಾಕ್ ಮಾಡಿದ್ದ ಮೃತದೇಹವನ್ನು ಬಿಚ್ಚಲಾಗಿದ್ದು, ಮೃತದೇಹದಿಂದ ರಕ್ತ ಮನೆಯ ಪ್ರದೇಶದಲ್ಲಿ ಚೆಲ್ಲಿತ್ತು. ಈ ಸಂದರ್ಭದಲ್ಲಿ ಮೃತ ಯುವಕನ ಸಂಬಂಧಿಕರು ಹಾಗೂ ಊರವರು ಭಾಗಿಯಾಗಿದ್ದರು. ಸಾವು ರೇಬೀಸ್ ರೋಗದಿಂದ ಸಂಭವಿಸಿದೆ ಎನ್ನುವ ವಿಚಾರವೀಗ ಊರವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇದೀಗ ಊರಿಡೀ ಆತಂಕಕ್ಕೆ ಕಾರಣವಾಗಿದೆ. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ 67 ಮಂದಿ ನೆಲ್ಯಾಡಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆ್ಯಂಟಿ ರೇಬೀಸ್ ಚುಚ್ಚುಮದ್ದನ್ನು ಪಡೆದಿದ್ದಾರೆ. ಕೆಲವು ಮಂದಿ ಖಾಸಗಿ ಚಿಕಿತ್ಸಾಲಯದಲ್ಲೂ ಇಂಜೆಕ್ಷನ್ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಂತ್ಯಸಂಸ್ಕಾರದ ವೇಳೆ ಮೃತದೇಹದಿಂದ ರಕ್ತ ಹಾಗೂ ಎಂಜಲು ಚೆಲ್ಲಿದ್ದಲ್ಲಿ ಇದರಿಂದ ರೇಬೀಸ್ ವೈರಾಣು ಹರಡುವ ಸಾಧ್ಯತೆಯಿದೆ ಎಂದು ನೆಲ್ಯಾಡಿ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆಶಿತ್ ಮನೆಗೆ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಭೇಟಿ ನೀಡಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict