ಬೆಂಗಳೂರು: ಬೇರೆಯವರ ವಿಷಯ ನನಗೆ ಗೊತ್ತಿಲ್ಲ. ನನ್ನನ್ನು ಮಾತ್ರ ಸಚಿವರನ್ನಾಗಿ ಮಾಡಲೇಬೇಕು ಎಂದು ಮಾಜಿ ಸಚಿವ ಶಂಕರ್ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ಶೀಘ್ರವಾಗಿ ಸಚಿವ ಸಂಪುಟ ವಿಸ್ತರಣೆ ಮಾಡುವ ಭರವಸೆ ನೀಡುತ್ತಿದ್ದಂತೆ ಶಂಕರ್, ಕೊಟ್ಟ ಮಾತಿನಂತೆ ನನ್ನನ್ನ ಸಚಿವರನ್ನಾಗಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೇರೆಯವರ ವಿಷಯ ನನಗೆ ಗೊತ್ತಿಲ್ಲ. ಸರ್ಕಾರಕ್ಕಾಗಿ ತ್ಯಾಗ ಮಾಡಿದ್ದೇನೆ. ಸೋತಿರುವ ಲಕ್ಷ್ಮಣ ಸವದಿಯವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ತ್ಯಾಗ ಮಾಡಿರುವ ನನಗೆ ಅವಕಾಶ ಮಾಡಿಕೊಡಬೇಕು. ರಿಜ್ವಾನ್‍ರಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ನನ್ನನ್ನು ನೇಮಕ ಮಾಡಿ ನನ್ನನ್ನ ಸಚಿವರನ್ನಾಗಿ ಮಾಡಲಿ ಎಂದು ಹೇಳಿದ್ದಾರೆ.
ಸರ್ಕಾರಕ್ಕಾಗಿ ನನ್ನ ಕ್ಷೇತ್ರವನ್ನ ಶಾಸಕ ಸ್ಥಾನವನ್ನ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ನನಗೆ ನ್ಯಾಯ ಸಿಗಬೇಕು. ಯಾವುದೂ ಕಷ್ಟವಲ್ಲ. ಇರುವ ಪರಿಷತ್ ಸದಸ್ಯರ ರಾಜೀನಾಮೆ ಪಡೆದು ಉಳಿದವರಿಗೆ ಅವಕಾಶ ಮಾಡಿಕೊಡಲಿ ಎಂದಿದ್ದಾರೆ.
ಲಕ್ಷ್ಮಣ ಸವದಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮರುದಿನ ಮತ್ತೆ ಪ್ರಮಾಣ ವಚನ ಸ್ವೀಕರಿಸಲಿ. ಆಗ ಮತ್ತೆ 6 ತಿಂಗಳು ಅವಕಾಶ ಇರುತ್ತೆ. ಈಗ ಕಾಲಿ ಇರುವ ಒಂದು ಸ್ಥಾನಕ್ಕೆ ನನಗೆ ಅವಕಾಶ ಕಲ್ಪಿಸಿ ಕೊಡಲಿ. ನನಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. ನನಗೆ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ನನಗೆ ಅವಕಾಶ ಮಾಡಿ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.