ಬೆಳಗಾವಿ: ಅಂಕೋಲಾದ ಉದ್ಯಮಿ ಆರ್.ಎನ್.ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ಎಂಟು ಅಪರಾಧಿಗಳಿಗೆ ಇಲ್ಲಿನ ಕೋಕಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಾರ್ಚ್ 30ರಂದು ಪ್ರಕರಣದಲ್ಲಿ 9 ಮಂದಿ ದೋಷಿಗಳು ಎಂದು ನ್ಯಾಯಾಧೀಶ ಸಿ.ಎಂ.ಜೋಶಿ ತೀರ್ಪು ಪ್ರಕಟಿಸಿದ್ದರು. 2013 ಡಿಸೆಂಬರ್ 21ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಉದ್ಯಮಿ ಆರ್.ಎನ್.ನಾಯಕ ಅವರನ್ನು ಕೊಲೆ ಮಾಡಲಾಗಿತ್ತು. 3 ಕೋಟಿ ಹಫ್ತಾ ನೀಡದಿರುವುದಕ್ಕೆ ಭೂಗತ ಪಾತಕಿ ಬನ್ನಂಜೆ ರಾಜಾ ಹಾಗೂ ಆತನ ಸಹಚರರು ಹತ್ಯೆಗೆ ಸಂಚು ರೂಪಿಸಿದ್ದರು. ಆರೋಪಿಗಳ ವಿರುದ್ಧ ಕೋಕಾ ಅಂದ್ರೆ ಸಂಘಟಿತ ಅಪರಾಧಗಳ ತಡೆ ಕಾಯ್ದೆ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಜಿಸ್ಡ್ ಕ್ರೈಮ್ಸ್ ಆಕ್ಟ್) ಕೇಸ್ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದರು. 9 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದು ಇದೀಗ 8 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಎರಡನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಮೂರನೇ ಆರೋಪಿ ಬೆಂಗಳೂರಿನ ಅಭಿ ಭಂಡಗಾರ, ನಾಲ್ಕನೇ ಆರೋಪಿ ಉಡುಪಿಯ ಗಣೇಶ ಭಜಂತ್ರಿ, ಏಳನೇ ಆರೋಪಿ ಹಾಸನದ ಮಹೇಶ ಅಚ್ಛಂಗಿ, ಎಂಟನೇ ಆರೋಪಿ ಕೇರಳದ ಸಂತೋಷ ಎಂ.ಬಿ, ಒಂಬತ್ತನೇ ಆರೋಪಿ ಉಡುಪಿ ಮೂಲದ ಬನ್ನಂಜೆ ರಾಜಾ, ಹತ್ತನೇ ಆರೋಪಿ ಬೆಂಗಳೂರಿನ ಜಗದೀಶ್ ಚಂದ್ರರಾಜ್, 12ನೇ ಆರೋಪಿ ಉತ್ತರ ಪ್ರದೇಶದ ಅಂಕಿತಕುಮಾರ್ ಕಶ್ಯಪ್ ಶಿಕ್ಷೆಳೊಗಾದವರು. ಇದನ್ನೂ ಓದಿ: ಆರ್.ಎನ್ ನಾಯಕ ಕೊಲೆ ಕೇಸ್ – ಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ
ಪ್ರಕರಣದ ಐದನೇ ಆರೋಪಿ ಕೇರಳದ ಕೆ.ಎಂ.ಇಸ್ಮಾಯಿಲ್‍ಗೆ ಮೂರು ಸೆಕ್ಷನ್ ಅಡಿ ಪ್ರತ್ಯೇಕವಾಗಿ 13 ವರ್ಷಗಳ ಕಾರಾಗೃಹ ಶಿಕ್ಷೆ ಜೊತೆಗೆ 15 ಸಾವಿರ ರೂ. ದಂಡ ವಿಧಿಸಲಾಗಿದೆ. ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳಿಗೂ ದಂಡ ವಿಧಿಸಲಾಗಿದೆ. ಆರ್.ಎನ್.ನಾಯಕ ಅವರ ಪತ್ನಿಗೆ 30 ಲಕ್ಷ ರೂ. ಪರಿಹಾರ ಒದಗಿಸಬೇಕು. ಪುತ್ರ ಹಾಗೂ ಸಾಕ್ಷಿ ಹೇಳಿದ ಮೈಸೂರು ಮೂಲದ ಮಹಿಳೆಗೆ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಉತ್ತರ ಕನ್ನಡ ಎಸ್.ಪಿ ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಸರ್ಕಾರದ ಪರ ವಿಶೇಷ ಅಭಿಯೋಜಕ ಕೆ.ಜಿ.ಪುರಾಣಿಕಮಠ, ಹೆಚ್ಚುವರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ವಕಾಲತ್ತು ವಹಿಸಿದ್ದರು. ಬನ್ನಂಜೆ ರಾಜಾ ಪರ ವಕೀಲ ಎಂ.ಶಾಂತಾರಾಮ ಶೆಟ್ಟಿ ವಾದ ಮಂಡಿಸಿದ್ದರು. ಇದನ್ನೂ ಓದಿ: ಇಂದು ರಾಜ್ಯದ ಮೊದಲ ಕೋಕಾ ಕೇಸ್‍ನ ತೀರ್ಪು ಪ್ರಕಟ- ಪಾತಕಿ ಬನ್ನಂಜೆ ರಾಜಾ ಸೇರಿ 13 ಪಾತಕಿಗಳ ಭವಿಷ್ಯ ನಿರ್ಧಾರ
ಬೆಳಗಾವಿಯಲ್ಲಿ ವಿಶೇಷ ಕೆ.ಜಿ.ಪುರಾಣಿಕಮಠ ಮಾತನಾಡಿ, ಕೋಕಾ ನ್ಯಾಯಾಲಯದಿಂದ 8 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಮರಣದಂಡನೆ ಶಿಕ್ಷೆ ಆಗಬೇಕಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದರು.