ಕೈಲಾಸದ ವೀಸಾ ಪಡೆಯೋದು ಹೇಗೆ – ನಿತ್ಯಾನಂದನಿಗೆ ಗೂಗ್ಲಿ ಎಸೆದ ಅಶ್ವಿನ್

Public TV
2 Min Read
Ashwin and Nityanand

ಬೆಂಗಳೂರು: ಸ್ವಯಂಘೋಷಿತ ದೇವ ಮಾನವ, ಅತ್ಯಾಚಾರ ಆರೋಪಿ ನಿತ್ಯಾನಂದ ಈಕ್ವೆಡಾರ್ ನಲ್ಲಿ ತನ್ನದೇ ಆದ ದೇಶವನ್ನು ಕಟ್ಟಿದ್ದಾನೆ ಎಂಬ ಸುದ್ದಿ ಸಾಕಷ್ಟು ಟ್ರೋಲ್ ಆಗುತ್ತಿದ್ದು, ಇದೀಗ ಭಾರತ ತಂಡದ ಬೌಲರ್ ರವಿಚಂದ್ರನ್ ಅಶ್ವಿನ್ ಸಹ ಈ ಕುರಿತು ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶ್ವಿನ್, ಆ ಸ್ಥಳದ ವೀಸಾ ಪಡೆಯಲು ಯಾವ ರೀತಿಯ ವಿಧಾನವಿದೆ? ಅಥವಾ ಇನ್ನೂ ಬರುವುದರಲ್ಲಿದೆಯೇ ಎಂದು ಪ್ರಶ್ನಿಸಿದ್ದಾರೆ.

ಅತ್ಯಾಚಾರ ಹಾಗೂ ಮಕ್ಕಳನ್ನು ಅಪಹರಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದನನ್ನು ಗುಜರಾತ್ ಪೊಲೀಸರು ಹುಡುಕುತ್ತಿದ್ದಾರೆ. ಮಕ್ಕಳನ್ನು ದೇಣಿಗೆ ಸಂಗ್ರಹಿಸಲು ಬಳಸಿಕೊಳ್ಳುತ್ತಿದ್ದಾನೆ ಎಂಬ ಆರೋಪ ಸಹ ನಿತ್ಯಾನಂದನ ವಿರುದ್ಧ ಕೇಳಿಬರುತ್ತಿದೆ. ಇದೆಲ್ಲದರ ಮಧ್ಯೆ ನಿತ್ಯಾನಂದ ಭಾರತದಿಂದ ಪರಾರಿಯಾಗಿ ಈಕ್ವೇಡಾರ್‍ನಲ್ಲಿ ಹೊಸದೊಂದು ದೇಶವನ್ನೇ ಕಟ್ಟಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ.

ನಿತ್ಯಾನಂದ ಹಲವು ಆಶ್ರಮಗಳ ನಂತರ ಇದೀಗ ತನ್ನದೇ ದೇಶವನ್ನು ಕಟ್ಟಲು ಹೊರಟಿದ್ದಾನೆ. ಈಕ್ವೆಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿದ್ದು, ಇದು ತನ್ನ ದೇಶ ಎಂಬಂತೆ ಬಿಂಬಿಸುತ್ತಿದ್ದಾನೆ. ಅಲ್ಲದೆ ಇದಕ್ಕಾಗಿ ಈಗಾಗಲೇ ಧ್ವಜ, ಲಾಂಛನ, ಪಾಸ್‍ಪೋರ್ಟ್‍ಗಳನ್ನು ಸಹ ಸಿದ್ಧಪಡಿಸಿದ್ದು, ಈ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ ಎಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಹೊಸ ದೇಶವನ್ನೇ ಕಟ್ಟಿದ ನಿತ್ಯಾನಂದ – ಕ್ಯಾಬಿನೆಟ್ ರಚನೆ, ಪ್ರಧಾನಿ ಆಯ್ಕೆ

ಈ ಹಿಮಪ್ರದೇಶವು ಟ್ರಿನಿಡಾಡ್ ಹಾಗೂ ಟೊಬಾಗೊ ಪ್ರದೇಶಕ್ಕೆ ಹತ್ತಿರವಾಗಿದೆ. ಆ ಪ್ರದೇಶವನ್ನು ಹಿಂದೂ ರಾಷ್ಟ್ರ ಎಂದು ಸ್ವಯಂ ಘೋಷಿತ ದೇವ ಮಾನವ ಕರೆದುಕೊಂಡಿದ್ದಾನೆ. ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ಸಹ ರಚಿಸಿದ್ದಾನೆ. ಅಲ್ಲದೆ ದೇಶಕ್ಕೆ ದೇಣಿಗೆ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಹ ಹೊರಡಿಸಿದ್ದು, ಶ್ರೇಷ್ಠ ಹಿಂದೂ ರಾಷ್ಟ್ರ ಕೈಲಾಸದ ಪೌರತ್ವ ಪಡೆಯುವುದು ಒಂದು ಸದವಕಾಶ ಎಂದು ಹೇಳಿದ್ದಾನೆ.  ಇದನ್ನೂ ಓದಿ: ಪಾಸ್‍ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್‌ಗೆ ಪರಾರಿ?

nityananda
ಚಿತ್ರ ಕೃಪೆ: ರಿಪಬ್ಲಿಕ್ ಟಿವಿ

ಇದಕ್ಕಾಗಿ www.kailaasa.org ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟನ್ನು ಸಹ ತೆರೆಯಲಾಗಿದ್ದು, ಅದರಲ್ಲಿ ಕೈಲಾಸದ ಕುರಿತು ವಿವರಿಸಿದ್ದಾನೆ. ಕೈಲಾಸ ಒಂದು ರಾಜಕೀಯೇತರ ದೇಶವಾಗಿದ್ದು, ಎಲ್ಲ ಮಾನವರು ಪ್ರಬುದ್ಧರಾಗಿ ಬದುಕುವುದು ಇದರ ಗುರಿಯಾಗಿದೆ. ಅಧಿಕೃತ ಹಿಂದೂ ಧರ್ಮದ ಆಧಾರದ ಮೇಲೆ ಪ್ರಭುದ್ಧ ನಾಗರೀಕತೆ ಸಂರಕ್ಷಣೆ, ಪುನರುಜ್ಜೀವನ ನಡೆಸುವುದು ಕೈಲಾಸದ ಉದ್ದೇಶವಾಗಿದೆ ಎಂದು ವೆಬ್‍ಸೈಟ್‍ನಲ್ಲಿ ಬರೆದುಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *