ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಸ್ತಿತ್ವದಲ್ಲಿ ಇದೆಯೋ, ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ (R. Ashok) ವಾಗ್ದಾಳಿ ನಡೆಸಿದ್ದಾರೆ.
ಯಶವಂತಪುರ (Yeswanthpur) ವಿಧಾನಸಭೆ ಕ್ಷೇತ್ರದ ಅಂದ್ರಹಳ್ಳಿಯ ಸರ್ಕಾರಿ ಶಾಲೆಯಲ್ಲಿ (Andrahalli School) ಮಕ್ಕಳಿಂದಲೇ ಶೌಚಾಲಯ ಶುಚಿಗೊಳಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಕೆಲ ದಿನಗಳ ಹಿಂದಷ್ಟೇ ಕೋಲಾರ ಜಿಲ್ಲೆಯ ಮಾಲೂರಿನ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪರಿಶಿಷ್ಟ ಜಾತಿ ವರ್ಗದ ಮಕ್ಕಳ ಕೈಯಲ್ಲಿ ಶೌಚ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣ ನಡೆದು ಕೋಲಾಹಲವಾಗಿದೆ. ಆ ನೆನಪು ಮಾಸುವ ಮೊದಲೇ ವಿಧಾನಸೌಧದ ಕೂಗಳತೆಯ ದೂರದಲ್ಲಿರುವ ರಾಜಧಾನಿಯಲ್ಲೇ ಮತ್ತದೇ ಘಟನೆ ಮರುಕಳಿಸಿದೆ. ಇದು ದುರದೃಷ್ಟಕರ ಸಂಗತಿ ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಹಿಜಬ್ ನಿಷೇಧ ವಾಪಸ್: ಸಿಎಂ ಸಿದ್ದರಾಮಯ್ಯ ಘೋಷಣೆ
Advertisement
Advertisement
ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾನೂನಿನ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇಲಾಖೆ ಮುಖ್ಯಸ್ಥರು ಸರಿ ಇದ್ದರೆ ಇಡೀ ಇಲಾಖೆಯ ವ್ಯವಸ್ಥೆ ಸರಿ ಇರುತ್ತದೆ. ಈಗಾಗಲೇ ಒಂದು ಘಟನೆ ನಡೆದಿರುವ ಬೆನ್ನಲ್ಲೇ ಮತ್ತೆ ಮಕ್ಕಳ ಕೈನಲ್ಲೇ ಶೌಚಾಲಯ ಸ್ವಚ್ಛಗೊಳಿಸಲಾಗುತ್ತಿದೆ ಎಂದರೆ ಏನರ್ಥ? ಈ ಸರ್ಕಾರ ಜನತೆಯ ಪಾಲಿಗೆ ಸತ್ತಂತಿದೆ. ಆದ್ದರಿಂದಲೇ ಇಂಥ ಪ್ರಕರಣ ಮರುಕಳಿಸುತ್ತಿವೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
Advertisement
ಶಾಲೆ ಮತ್ತು ಹಾಸ್ಟೆಲ್‍ಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳಿದ್ದರೂ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಮೇಲಿನ ಹಂತದಲ್ಲಿರುವ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುವ ಕೆಲಸ ಮಾಡುತ್ತಿದ್ದರೆ ಇಂತಹ ಅನಾಹುತಗಳು ಆಗುವುದಿಲ್ಲ. ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸುವ ಪರಿಪಾಠವನ್ನು ಇಲಾಖೆಯ ಸಚಿವರ ಆದಿಯಾಗಿ ಎಲ್ಲಾ ಹಿರಿಯ ಅಧಿಕಾರಿಗಳು ಪಾಲಿಸಬೇಕು. ಆಗ ಮಾತ್ರ ವ್ಯವಸ್ಥೆಯ ಲೋಪಗಳನ್ನು ಪತ್ತೆ ಹಚ್ಚಿ ಸರಿಪಡಿಸಲು ಸಾಧ್ಯವಿದೆ. ಸಚಿವರುಗಳೇ ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತಿದ್ದರೆ ಪರಿಸ್ಥಿತಿ ಸುಧಾರಣೆ ಆಗುವುದು ಯಾವಾಗ ಎಂದು ಅವರು ಪ್ರಶ್ನಿಸಿದ್ದಾರೆ.
Advertisement
ಇದಕ್ಕೂ ಮೊದಲು, ಮಕ್ಕಳಿಂದ ಸ್ವಚ್ಛಗೊಳಿಸಲಾದ ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮುಖ್ಯಶಿಕ್ಷಕಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸ್ಥಳೀಯ ಮುಖಂಡರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರ ಜೊತೆ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡರು. ಮಕ್ಕಳ ಬಳಿಯೂ ಸಂವಾದ ನಡೆಸಿ ಘಟನೆಗೆ ಕಾರಣಗಳನ್ನು ಕೇಳಿ ತಿಳಿದುಕೊಂಡರು. ಶಾಲೆಗೆ ನೀಡುವ ಅನುದಾನದಲ್ಲಿ ಸ್ವಚ್ಛತೆಗೆ ಪ್ರತ್ಯೇಕ ಹಣ ನೀಡಿದ್ದರೂ, ಮುಖ್ಯಶಿಕ್ಷಕರು ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ ಎಂದು ಸ್ಥಳದಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆರೋಪಿಸಿದ ಪ್ರಸಂಗವೂ ನಡೆಯಿತು.
ಈ ವೇಳೆ ಮಾತನಾಡಿದ ಮಕ್ಕಳು, ಚಿಕ್ಕಿ ಕೊಟ್ಟು ಶೌಚಾಲಯ ಸ್ವಚ್ಛಗೊಳಿಸಲು ಮುಖ್ಯಶಿಕ್ಷಕರು ಸೂಚನೆ ನೀಡುತ್ತಾರೆ ಎಂದು ತಿಳಿಸಿದರು. ಶಾಲೆಯಲ್ಲಿ ನೀರಿನ ಸಮಸ್ಯೆ ಕೂಡ ಇದೆ. ಹೊರಗಿನಿಂದ ತರಿಸಲಾಗುತ್ತದೆ. ಹಿಂದಿನಿಂದಲೂ ಮಕ್ಕಳ ಕೈನಲ್ಲೇ ಶೌಚಾಲಯವನ್ನು ಸ್ವಚ್ಛ ಮಾಡಿಸಲಾಗುತ್ತಿದ್ದು, ಅದಕ್ಕೆ ಪ್ರತ್ಯೇಕ ಸಿಬ್ಬಂದಿ ಇಲ್ಲ ಎಂಬ ಅಂಶವನ್ನೂ ಮಕ್ಕಳು ಈ ವೇಳೆ ತಿಳಿಸಿದರು. ಶಾಲೆಯ ಹೊರಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಪೋಷಕರು ಮತ್ತು ಸ್ಥಳೀಯ ಗ್ರಾಮಸ್ಥರ ಅಹವಾಲುಗಳನ್ನು ಅವರು ಕೇಳಿದರು. ಇದನ್ನೂ ಓದಿ: ಬಿಜೆಪಿಗರು ಜಮೀರ್ ವಿಮಾನದ ಬಗ್ಗೆ ಮಾತಾಡೋ ಬದಲು ಪ್ರಧಾನಿಗಳಿಂದ ಬರ ಪರಿಹಾರ ಕೊಡಿಸಲಿ: ರಾಮಲಿಂಗಾರೆಡ್ಡಿ