– ಮೇಕೆದಾಟು ಪಾದಯಾತ್ರೆ ಎಲೆಕ್ಷೆನ್ ಗಿಮಿಕ್
ಚಿಕ್ಕಬಳ್ಳಾಪುರ: ತಿರುಕನ ಕನಸು ಕಾಣುತ್ತಿರುವ ಕಾಂಗ್ರೆಸ್‍ನವರು ತಿರುಕನ ರೀತಿಯೇ ಇರಲಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಬಗ್ಗೆ 06 ವರ್ಷದಿಂದ ಸುಮ್ಮನಿದ್ದರು. ಈಗ ಚುನಾವಣೆ ಬರ್ತಿದ್ದ ಹಾಗೆ ಮೇಕೆದಾಟು ಯಾತ್ರೆ ಶುರು ಮಾಡಿದ್ದಾರೆ. ಇದು ಎಲೆಕ್ಷನ್ ಗಿಮಿಕ್ ಎಂದು ಕಿಡಿಕಾರಿದರು.
ಪಾರ್ಲಿಮೆಂಟ್ ನಲ್ಲಿ ವಿರೋಧ ಪಕ್ಷ ಆಗಲು ಸಹ ಕಾಂಗ್ರೆಸ್ ಪಕ್ಷ ನಾಲಾಯಕ್. ಎಲ್ಲ ಕಡೆ ಕಾಂಗ್ರೆಸ್ ಮುಳುಗಿ ಹೋಗಿದೆ. ಇಲ್ಲೂ ಮುಳುಗಿ ಹೋಗೋ ಕಾಲ ಬರಲಿದೆ. ಬಿಸಿಲು ಕುದುರೆ ಅಧಿಕಾರದ ಆಸೆಯಿಂದ ಓಡೋವರನ್ನ ಜನ ಇಷ್ಟ ಪಡಲ್ಲ. ಮುಂದೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅಧಿಕಾರದಲ್ಲಿ ಇರಲಿದ್ದೇವೆ ಎಂದು ವಿಶ್ವಾಸ ಮಾತುಗಳನ್ನು ಆಡಿದರು. ದೇಶದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿವೆ. ತಿರುಕನ ಕನಸು ಕಾಣುತ್ತಿರುವ ಕಾಂಗ್ರೆಸ್ ನವರು ತಿರುಕನ ರೀತಿಯೇ ಇರಲಿ ಎಂದರು. ಇದನ್ನೂ ಓದಿ: ಮತಕ್ಕಾಗಿ ಮೇಕೆದಾಟು ಯೋಜನೆ ಮಾಡ್ತಿಲ್ಲ, ದಾಖಲೆ ಇದ್ರೆ ಬಿಡುಗಡೆ ಮಾಡಿ: ಬಿಜೆಪಿಗೆ ಸಿದ್ದು ಸವಾಲು
ಅಷ್ಟೊಂದು ಕಾಳಜಿ ಇರೋರು ಕಳೆದ 6 ವರ್ಷದಿಂದ ಏನು ಮಾಡುತ್ತಿದ್ದರು? ನಮ್ಮ ಸರ್ಕಾರ ಬಂದ ಇಷ್ಟು ದಿನ ಅದರೂ ಸುದ್ದಿನೇ ಇರಲಿಲ್ಲ. ಚುನಾವಣೆ ಕಣ್ಣಿಗೆ ಕಂಡ ಕೂಡಲೇ ಮೇಕೆದಾಟು ಯಾತ್ರೆ ಶುರು ಮಾಡಿದ್ದಾರೆ. ಬಿಳಿ ಬಟ್ಟೆ, ಬಿಳಿ ಶೂ, ಟೋಪಿ ಹಾಕ್ಕೊಂಡು ಹೋರಾಟ ಶುರು ಮಾಡೋಕೆ ಹೋಗ್ತಿದ್ದಾರೆ. ಆದರೆ ಅವರು ಟೋಪಿ ಹಾಕಿಕೊಳ್ಳಲಿ ಅದ್ರೆ ಜನರಿಗೆ ಟೋಪಿ ಹಾಕಬೇಡಿ ಎಂದು ವ್ಯಂಗ್ಯವಾಡಿದರು.
ಇದು ಇವತ್ತಿನ ಯೋಜನೆಯಲ್ಲ, 20 ವರ್ಷದ ಯೋಜನೆಯಾಗಿದೆ. ಚುನಾವಣೆ ಬಂದಾಗಲೇ ಕಾಂಗ್ರೆಸ್ ಅವರಿಗೆ ಈ ಬಗ್ಗೆ ನೆನಪಾಗುತ್ತೆ. ಬಿಳಿ ಬಟ್ಟೆ ತೊಟ್ಟು ಎದ್ದು, ನಿಂತು ಜನರಿಗೆ ಟೋಪಿ ಹಾಕೋಕೆ ಹೋಗ್ತಾರೆ ಎಂದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ? ಎಲ್ಲ ಕಡೆ ಅಧಿಕಾರದ ಕನಸು ಕಂಡ್ರೂ ಬೇಳೆ ಬೇಯಲಿಲ್ಲ. ಗುಡಿಸಿ ಸಾರಿಸಿ ರಂಗೋಲಿ ಹಾಕುವ ಹಾಗೆ ಗುಡಿಸಿ ಗುಂಡಾಂತರ ಮಾಡಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕನ ಮಗ ಇಂದು IPS ಅಧಿಕಾರಿ