-ಸಿದ್ದರಾಮಯ್ಯ ಅವರಿಗೆ ಜನರೇ ಚೊಂಬು ಕೊಡುವ ಕಾಲ ಬರುತ್ತೆ ಎಂದ ವಿಪಕ್ಷ ನಾಯಕ
ಬೆಂಗಳೂರು: ಕಾಂಗ್ರೆಸ್ ಅವರು ನಮಗೆ ಏನೂ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ನಿಮಗೆ ಕೊಟ್ಟರೆ ತಿಂದು ಹಾಕ್ತೀರಾ, ಅದಕ್ಕೆ ಬಡವರಿಗೆ ಕೊಟ್ಟಿದ್ದಾರೆ ಎಂದು ಆರ್.ಅಶೋಕ್ (R Ashok) ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಲೇವಡಿ ಮಾಡಿದ್ದಾರೆ.
ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಅವರು, ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಸಾಲದ ಮಿತಿಯನ್ನು ಹೆಚ್ಚಿಸಿದೆ. ಈ ಮೂಲಕ ಮೋದಿ ರೈತ ಪರ ಎನ್ನುವುದನ್ನು ತೋರಿಸಿದ್ದಾರೆ. ಜೊತೆಗೆ ಪಿಎಂ ಧನ್ ಯೋಜನೆ ಅಡಿ ಸಾಲ ಸೌಲಭ್ಯ ಹೆಚ್ಚಿಸಿದ್ದಾರೆ. ಕೈಗಾರಿಕಾ ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ನೀಡಿದ್ದಾರೆ. ಇನ್ನೂ ಮೊದಲ ಬಾರಿಗೆ ಉದ್ಯಮ ಸ್ಥಾಪಿಸುವ ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ 5 ಲಕ್ಷ ರೂ. ಸಾಲ ಸೌಲಭ್ಯ ಒದಗಿಸಿದ್ದಾರೆ. ಮಧ್ಯಮ ವರ್ಗದವರಿಗೆ ಬಂಪರ್ ಮೇಲೆ ಬಂಪರ್ ಕೊಟ್ಟು, ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. 1 ಲಕ್ಷ ರೂ. ಸಂಬಳ ತೆಗೆದುಕೊಳ್ಳುವವರಿಗೆ ನೋ ಟ್ಯಾಕ್ಸ್ ಎಂದಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ – ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ
ಕರ್ನಾಟಕದಲ್ಲಿ ಸಿದ್ದರಾಮಯ್ಯ ಎಲ್ಲ ತೆರಿಗೆ ಹಾಕಿದ್ದಾರೆ. ಪಾಪಿ ಕಾಂಗ್ರೆಸ್ ಅವರು ತೆರಿಗೆ ಹಾಕಿ ಜನರ ಸುಲಿಗೆ ಮಾಡ್ತಿದ್ದಾರೆ. ಇನ್ನೂ ಕಾಂಗ್ರೆಸ್ ಅವರು ತಾರತಮ್ಯದ ಬಗ್ಗೆ ಮಾತಾಡ್ತಿದ್ದಾರೆ. ಆದರೆ 50 ವರ್ಷಗಳ ಅವಧಿಗೆ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ಕೊಡುವ ಘೋಷಣೆ ಆಗಿದೆ. ಕಾಂಗ್ರೆಸ್ ಅವರು ನಮಗೆ ಏನೂ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಆದರೆ ಅವರಿಗೆ ಕೊಟ್ಟರೆ ತಿಂದು ಹಾಕಿ ಬಿಡುತ್ತಾರೆ ಎಂದು ಬಡವರಿಗೆ ಕೊಟ್ಟಿದ್ದಾರೆ. ನಿಮ್ಗೆ ಕೊಟ್ರೆ ತಿಂದು ಹಾಕ್ಬಿಡ್ತೀರಾ ಎಂದು ವ್ಯಂಗ್ಯವಾಡಿದರು.
12 ಲಕ್ಷಕ್ಕೆ ಇಂದಿರಾ ಗಾಂಧಿ ಇದ್ದಾಗ ಟ್ಯಾಕ್ಸ್ ಇತ್ತು. ಈಗ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆ 12 ಲಕ್ಷದ ತನಕ ನೋ ಟ್ಯಾಕ್ಸ್ ಎಂದಿದ್ದಾರೆ. ತೆರಿಗೆಗಳ ಹೊರೆ ಇಲ್ಲದೇ ಮಧ್ಯಮ ವರ್ಗದವರಿಗೆ ವಿಕಸಿತ ಭಾರತ ಕಲ್ಪನೆ ಬಜೆಟ್ ಇದಾಗಿದೆ. ಕಾಂಗ್ರೆಸ್ ಅವರಿಗೆ ಕಾಮಾಲೆ ಕಣ್ಣು, ಅವರಿಗೆ ರೋಗ ಬಂದಿದೆ. ಅವರು ಇಷ್ಟಪಡುವ ಮುಸ್ಲೀಂ ರಾಷ್ಟ್ರ ಪಾಕಿಸ್ತಾನದ ಬಜೆಟ್ ನೋಡಲಿ. ನಮ್ಮ ನರೇಂದ್ರ ಮೋದಿ ಅವರ ಬಜೆಟ್ ನೋಡಲಿ, ಪ್ರಪಂಚದಲ್ಲಿ ನಾವು 5ನೇ ಸ್ಥಾನದಲ್ಲಿ ಇದ್ದೇವೆ, 4ರ ಗುರಿ ತಲುಪುತ್ತೇವೆ ಎಂದರು.
ಗೌರವಾನ್ವಿತ ಲೆಕ್ಕರಾಮಯ್ಯನಿಗೆ ಕೇಳಲು ಬಯಸುತ್ತೇನೆ. ಬುರುಡೆ ಬಿಡಬೇಡಿ, ಸಂತೆ ಭಾಷಣ ಮಾಡಬೇಡಿ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಎಷ್ಟು ಕೊಟ್ಟಿದ್ದಾರೆ ಹೇಳಿ? ಈಗಲೂ ಜಾಸ್ತಿ ತೆರಿಗೆ ಕೊಡುತ್ತಿದ್ದೇವೆ. ಮನಮೋಹನ್ ಸಿಂಗ್ ಕಾಲದಲ್ಲೂ ಜಾಸ್ತಿ ತೆರಿಗೆ ಕೊಡ್ತಿದ್ದೀವಿ. ಸಿದ್ದರಾಮಯ್ಯ ಅವರಿಗೆ ಜನರೇ ಚೊಂಬು ಕೊಡುವ ಕಾಲ ಬರುತ್ತದೆ. ಪೆಟ್ರೋಲ್, ಹಾಲಿಗೆ ತೆರಿಗೆ ಹಾಕಿ ಚೊಂಬು ಕೊಟ್ಟಿದ್ದೀರಿ. ಡಿಸಿಎಂ ಅವರೇ ಎಲ್ಲ ಫ್ರೀ ಫ್ರೀ ಕೊಡೋದಕ್ಕೆ ಆಗುತ್ತಾ ಎಂದಿದ್ದಾರೆ. ಮೊದಲು ನಿಮ್ಮ ಪಾರ್ಟಿ ಅವರಿಗೆ ಬುದ್ಧಿ ಹೇಳಿ ಆಮೇಲೆ ನಮ್ಮ ಬಗ್ಗೆ ಮಾತಾಡಿ ಎಂದರು.
ಬಿಆರ್ ಪಾಟೀಲ್ ವಿಚಾರ:
ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ ಎಂದು ಬಿಆರ್ ಪಾಟೀಲ್ ರಾಜೀನಾಮೆ ಕೊಟ್ಟಿದ್ದಾರೆ. ಕೆಲಸ ಆಗುತ್ತಿಲ್ಲ ಎಂದು ಅವರಿಗೆ ಗೊತ್ತಾಗಿದೆ. ಇದು ಮೊದಲ ಬಾರಿ ಅಲ್ಲ, ಈ ಹಿಂದೆಯು ಅವರು ರಾಜೀನಾಮೆ ಕೊಟ್ಟಿದ್ದರು. ಬಸವರಾಜ್ ರಾಯರೆಡ್ಡಿಯವರು ಈ ಹಿಂದೆ ಮಾತನಾಡಿ, ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ಸರ್ಕಾರದ ಆಡಳಿತ ವಿರೋಧಿ ನೀತಿ ವಿರುದ್ಧ ಬಿಆರ್ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಇದರ ಸಂಖ್ಯೆ ಮುಂದೆ ಇನ್ನು ಹೆಚ್ಚಾಗಲಿದೆ. ಇನ್ನು ಬಿರುಗಾಳಿ, ಭೂಕಂಪ ಆಗಲಿದೆ ಕಾದು ನೋಡಿ ಎಂದು ತಿಳಿಸಿದರು.ಇದನ್ನೂ ಓದಿ: ಕರ್ನಾಟಕಕ್ಕೆ ಬಜೆಟ್‌ನಲ್ಲಿ ದೊಡ್ಡ ಅನ್ಯಾಯ: ಸಿಎಂ