ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಸುಳ್ಳುರಾಮಯ್ಯ ಎಂದು ಹೆಸರು ಬದಲಾಯಿಸಿಕೊಳ್ಳಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ 40% ಕಮೀಷನ್ ವಿಚಾರವಾಗಿ ಮಾತನಾಡಿದ ಅವರು, ಪ್ರಧಾನಿಯವರಿಂದ ಸಿದ್ದರಾಮಯ್ಯ ಸಾಕ್ಷಿ ಕೇಳ್ತಾರೆ, ಅವರಿಗೆ ನಾಚಿಕೆ ಆಗಬೇಕು. ಸಿದ್ದರಾಮಯ್ಯ, ಡಿಕೆಶಿ, ಅಂಬಿಕಾಪತಿ ಈ ಸುಳ್ಳಿನ ಮಹಲ್ ಕಟ್ಟಿದ್ದರು ಅದು ಈಗ ಕುಸಿದು ಬಿದ್ದಿದೆ. ರಾಜ್ಯದ ಜನತೆಗೆ ಸುಳ್ಳು ಹೇಳಿ, ತಾವು ಸುಳ್ಳುರಾಮಯ್ಯ ಎಂದು ಖುದ್ದು ಸಿಎಂ ಸಾಬೀತು ಪಡಿಸಿದ್ದಾರೆ. ತಪ್ಪು ಮಾಡಿಲ್ಲ ಎಂದು ಸೈಟು ವಾಪಸ್ ಕೊಟ್ಟರು. ಈಗ ಅವರು ಮಾಡಿದ 40% ಕಮೀಷನ್ ಆರೋಪವೂ ಸುಳ್ಳಾಗಿದೆ. ಇನ್ಮುಂದೆ ಸಿದ್ದರಾಮಯ್ಯ ತಮ್ಮ ಹೆಸರನ್ನು ಸುಳ್ಳು ರಾಮಯ್ಯ ಎಂದು ಬದಲಾಯಿಸಿಕೊಳ್ಳಲಿ ಎಂದರು.ಇದನ್ನೂ ಓದಿ: ಹೆಚ್‌ಡಿಕೆ ಬಣ್ಣದ ಬಗ್ಗೆ ಜಮೀರ್ ಮಾತಾಡಿದ್ದು ಸರಿಯಲ್ಲ- ಪ್ರಿಯಾಂಕ್ ಖರ್ಗೆ
Advertisement
Advertisement
ನಾನು ಇವತ್ತಿಗೆ ಪ್ರತಿಪಕ್ಷ ನಾಯಕನಾಗಿ ಒಂದು ವರ್ಷವಾಗಿದೆ. ಹಾಗೇ ಇದೇ ಹೊತ್ತಿನಲ್ಲಿ ನಮ್ಮ ಸರ್ಕಾರದ ಮೇಲಿನ 40% ಕಮೀಷನ್ ಆರೋಪ ಸುಳ್ಳು ಎನ್ನುವುದು ಸಾಬೀತಾಗಿದೆ. ಕಮೀಷನ್ ಆರೋಪ ಮಾಡಿರುವುದು ಕಾಂಗ್ರೆಸ್‌ನ ಟೂಲ್‌ಕಿಟ್‌ನ ಭಾಗವಾಗಿದೆ. ಇದುವರೆಗೆ 40% ಕಮೀಷನ್ ಆರೋಪಕ್ಕೆ ಕಾಂಗೆಸ್‌ನವರು ದಾಖಲೆ ಕೊಟ್ಟಿಲ್ಲ. ಆಧಾರರಹಿತ, ಸುಳ್ಳು ಆರೋಪ ಮಾಡಿದ್ದರು. ನಮ್ಮ ಮೇಲಿನ ಆರೋಪ ಸುಳ್ಳು ಎಂದು ಲೋಕಾಯುಕ್ತ ತನಿಖೆಯಿಂದಲೇ ಗೊತ್ತಾಗಿದೆ. ಈಗಿನ ಕಾಂಗ್ರೆಸ್ ಸರ್ಕಾರ 60% ಕಮೀಷನ್ ಸರ್ಕಾರ ಆಗಿದೆ ಎಂದು ಕಿಡಿಕಾರಿದ್ದಾರೆ.
Advertisement
ವಾಲ್ಮೀಕಿ ಹಗರಣ ವಿಚಾರ:
ವಾಲ್ಮೀಕಿ ಹಗರಣದಲ್ಲಿ ಸಾಕ್ಷಿ ಸಿಕ್ಕಿದೆ. ಇಡಿ ಇದನ್ನು ಅನುಮೋದನೆ ಮಾಡಿದೆ. ಬಳ್ಳಾರಿಯಲ್ಲಿ ಯಾರ್ಯಾರಿಗೆ ಹಣ ಹೋಗಿದೆ ಎಂದು ರಿಪೋರ್ಟ್ ಬಂದಿದೆ. ಸಿದ್ದರಾಮಯ್ಯ ತಮ್ಮ ಜೀವನ ತೆರೆದ ಪುಸ್ತಕ ಎಂದಿದ್ದಾರೆ. ತೆರೆದ ಪುಸ್ತಕ ನಾವು ನೋಡಿದರೆ ಕಪ್ಪು ಚುಕ್ಕೆ ಇಡುವುದಕ್ಕೆ ಜಾಗನೇ ಇಲ್ಲ. ಸಿದ್ದರಾಮಯ್ಯ ಅವರ ಕುಟುಂಬ ಲೂಟಿ ಮಾಡುತ್ತಿದೆ. ದಿನ ಒಬ್ಬೊಬ್ಬ ಮಂತ್ರಿ ದರೋಡೆಯ ಪುಸ್ತಕ ತೆರೆಯುತ್ತಿದ್ದಾರೆ. ರಾಜ್ಯದಲ್ಲಿ ಕನ್ನ ಹಾಕುವ ಮಂತ್ರಿಗಳು ಇದ್ದಾರೆ. ನನ್ನ ಮುಟ್ಟಿ ನೋಡಿ, ಕೇಸ್ ಹಾಕಿ ನೋಡಿ, ಸಿಎಂ ಪದವಿಯಿಂದ ಇಳಿಯುವುದಿಲ್ಲ ಎಂದು ಅವರ ಹೈಕಮಾಂಡ್‌ಗೆ ಹೇಳುತ್ತಿದ್ದಾರೆ. ತಪ್ಪು ಮಾಡಿಲ್ಲ ಅಂದ ಮೇಲೆ ಯಾಕೆ ಹೀಗೆ ಹೇಳುತ್ತೀರಾ? 14 ಸೈಟ್‌ಗಳನ್ನು ಯಾಕೆ ವಾಪಸ್ಸು ಕೊಟ್ಟಿದೀರಿ? ಏಕವಚನದಲ್ಲಿ ಮಾತನಾಡುತ್ತಾರೆ, ಕೇಳಿದರೆ ಹಳ್ಳಿಯಿಂದ ಬಂದವನು ಎನ್ನುತ್ತಾರೆ. ನಾನು ಸೈಟ್ ವಾಪಸ್ಸು ಮಾಡಿಲ್ಲ. ನನ್ನ ಹೆಂಡ್ತಿ ನನಗೆ ಗೊತ್ತಿಲ್ಲದೇ ಕೊಟ್ಟಿದ್ದಾರೆ ಎಂದರು. ಅವರು ಅಹಿಂದ ನಾಯಕರಾಗಿಲ್ಲ ಈಗ ಅವರು ಅಲ್ಪಸಂಖ್ಯಾತರ ಚಾಂಪಿಯನ್ ಆಗಿದ್ದಾರೆ. ಮುಸ್ಲಿಮರ ಹೀರೋ ಆಗಲು ಹೊರಟಿದ್ದಾರೆ ಎಂದು ಹೇಳಿದರು.
Advertisement
ಬೆಳಗಾವಿ ಅಧಿವೇಶನ ಕರೆಯಲು ಸರ್ಕಾರ ಹೆದರುತ್ತಿದ್ದಾರೆ. ಸಾಕಷ್ಟು ಭ್ರಷ್ಟಾಚಾರ ಮಾಡಿ ಈಗ ಅಧಿವೇಶನ ಕರೆಯಲೂ ಹೆದರುತ್ತಿದ್ದಾರೆ. ಅದಕ್ಕೆ ಅಧಿವೇಶನದ ದಿನಾಂಕ ಸಹ ಪ್ರಕಟ ಮಾಡಲು ಹಿಂಜರಿಯುತ್ತಿದ್ದಾರೆ. ಅಧಿವೇಶನದಲ್ಲಿ ಸರ್ಕಾರದ ಎಲ್ಲ ಲೋಪಗಳ ಬಗ್ಗೆ ಚರ್ಚೆ, ಹೋರಾಟ ಮಾಡುತ್ತೇವೆ. ಈ ಸರ್ಕಾರ ಕಾಣೆಯಾಗಿದೆ, ಕೇವಲ ಗುರುವಾರ ಸಂಪುಟ ಸಭೆಯಲ್ಲಿ ಎಲ್ಲರೂ ಕಾಣಿಸಿಕೊಳುತ್ತಾರೆ. ಇದೊಂದು ಗುರುವಾರ ವೀರರ ಸರ್ಕಾರ. ಗುರುವಾರ ಬಳಿಕ ಎಲ್ಲರೂ ನಾಪತ್ತೆಯಾಗಿ ಹೋಗುತ್ತಾರೆ. ಇದು ಗುರುವಾರದ ಸರ್ಕಾರ. ಕ್ಯಾಬಿನೆಟ್ ದಿನ ಮಾತ್ರ ಈ ಸರ್ಕಾರ ಎದ್ದಿರುತ್ತದೆ. ಬಾಕಿ ದಿನ ಮಲಗಿರುತ್ತದೆ. ಅಬಕಾರಿ ಸಚಿವ ಒಂದೇ ದಿನ 18 ಕೋಟಿ ರೂ. ಲೂಟಿ ಹೊಡೆದು ಮಹಾರಾಷ್ಟ್ರಕ್ಕೆ ಕಳಿಸಿದ್ದಾರೆ. ಕಾಂಗ್ರೆಸ್ ಸಚಿವರು ಸಂಪುಟ ಸಭೆ ಮಾಡುವುದು ಸರ್ಕಾರದ ಬೊಕ್ಕಸಕ್ಕೆ ಹಣ ತರುವುದು ಹೇಗೆ ಎಂಬ ಕಾರಣಕ್ಕಲ್ಲ. ಹೇಗೆ ಲೂಟಿ ಮಾಡಬೇಕು? ಎಷ್ಟು ಕಮಿಷನ್ ತರಬಹುದು? ಎಂದು ಸಭೆ ಮಾಡುತ್ತಾರೆ ಎಂದು ಆರೋಪಿಸಿದರು.
ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾವಣೆ ವಿಚಾರ:
ಬಿಪಿಎಲ್ ಕಾರ್ಡುಗಳನ್ನು (BPL Card) ಸರ್ಕಾರ ರದ್ದು ಮಾಡುತ್ತಿದೆ. ಎಪಿಎಲ್‌ಗೆ ಈಗಾಗಲೇ ಒಂದು ಲಕ್ಷ ಕಾರ್ಡ್‌ಗಳನ್ನು ಪರಿವರ್ತನೆ ಮಾಡಿದ್ದಾರೆ. ಇದು ಸರ್ಕಾರದ ಆರನೇ ಗ್ಯಾರಂಟಿಯಾಗಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೇ ಈ ಕೆಲಸ ಮಾಡುತ್ತಿದ್ದಾರೆ. ಉಚಿತ ಗ್ಯಾರಂಟಿಗಳಲ್ಲಿ ಪ್ರತೀ ವರ್ಷ 10% ಕಡಿತ ಮಾಡಲು ಅಧಿಕಾರಿಗಳಿಗೆ ಸರ್ಕಾರ ಟಾರ್ಗೆಟ್ ಕೊಟ್ಟಿದೆ. ಉಚಿತ ಗ್ಯಾರಂಟಿ ಕೊಡಲಾಗದೇ ಸರ್ಕಾರ ಆರ್ಥಿಕ ಹೊರೆಯಲ್ಲಿದೆ. ಹಣ ಹೊಂದಿಸಲು ಸರ್ಕಾರಕ್ಕೆ ಆಗುತ್ತಿಲ್ಲ. ಅದಕ್ಕಾಗಿ ಬಿಪಿಎಲ್ ಕಾರ್ಡ್‌ಗೆ ಕತ್ತರಿ ಹಾಕುವ ಮೂಲಕ ಕಾರ್ಡ್ಗಳನ್ನು ರದ್ದು ಮಾಡಿ, ಎಪಿಎಲ್‌ಗೆ (APL Card) ಪರಿವರ್ತನೆ ಮಾಡುತ್ತಿದ್ದಾರೆ ಎಂದರು.ಇದನ್ನೂ ಓದಿ: ವಕ್ಫ್ ಪ್ರಕರಣದಲ್ಲಿ ಶಾಂತಿ ಕದಡಲು ಬಿಡಲ್ಲ: ಪರಮೇಶ್ವರ್ ಎಚ್ಚರಿಕೆ