– ಡಿಕೆ ಶಿವಕುಮಾರ್ ಬಳಿಯೇ ಮತದಾರರ ಪಟ್ಟಿ ಇತ್ತು
– ಮತದಾರರ ಪಟ್ಟಿ ತಯಾರಿಯಲ್ಲಿ ಮೋದಿ ಪಾತ್ರ ಇಲ್ಲ; ವಿಪಕ್ಷ ನಾಯಕ
ಬೆಂಗಳೂರು: ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅಥವಾ ಬಿಜೆಪಿ ನಾಯಕರ ಪಾತ್ರವೇ ಇಲ್ಲ. ಇದನ್ನು ಅಧಿಕಾರಿಗಳೇ ತಯಾರು ಮಾಡುತ್ತಾರೆ. ಹೀಗಾಗಿ ರಾಹುಲ್ ಗಾಂಧಿಯದ್ದು ಆಟಂ ಬಾಂಬ್ ಅಲ್ಲ. ಹೊಸೂರಿನಲ್ಲಿ ತಯಾರಾದ ಹಳೇ ಟುಸ್ ಪಟಾಕಿಯಾಗಿದೆ ಅಂತ ವಿಪಕ್ಷ ನಾಯಕ ಅಶೋಕ್ (R Ashok) ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿ ಪ್ರತಿಭಟನೆ (Rahul Gandhi Protest) ನಡೆಸಿದ ವಿಚಾರಕ್ಕೆ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಬಾಂಬ್ ಹಾಕಿಲ್ಲ. ಅದು ಟುಸ್ ಪಟಾಕಿಯಾಗಿದೆ. ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಬೂತ್‌ಗೆ ಬಿಎಲ್‌ಎಗಳನ್ನು (ಬೂತ್ ಲೆವೆಲ್ ಏಜೆಂಟ್) ಕಾಂಗ್ರೆಸ್ ನೀಡಿದೆ. ಮತದಾರರ ಪಟ್ಟಿಯ ಮೊದಲ ಪ್ರತಿಯನ್ನು ಬಿಎಲ್‌ಎಗೆ ನೀಡಲಾಗುತ್ತದೆ. ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರೇ ನೇಮಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಸತ್ತವರ ಹೆಸರು ತೆಗೆದುಹಾಕುವುದು, ಹೊಸಬರನ್ನು ಸೇರಿಸುವುದು ಮೊದಲಾದ ಕೆಲಸವನ್ನು ಬಿಎಲ್‌ಎ ಮಾಡುತ್ತಾರೆ. ಇಂತಹ ಬಿಎಲ್‌ಎಗಳನ್ನು ನೇಮಿಸಿದ ಕಾಂಗ್ರೆಸ್ ಏನು ತಪ್ಪು ಮಾಡಿಲ್ಲವೇ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿ, ಉತ್ತರ ಕೊಡೋಕೆ ಇನ್ಯಾರನ್ನೋ ಕಳಿಸಿದ್ದಾರೆ: ಜೋಶಿ ಕಿಡಿ
ಡಿಕೆಶಿ ಬಳಿಯೇ ಮತದಾರರ ಪಟ್ಟಿ ಇತ್ತು
ಡಿ.ಕೆ.ಶಿವಕುಮಾರ್ ಅವರ ಬಳಿಯೇ ಮತದಾರರ ಪಟ್ಟಿ ಇದ್ದಾಗ, ಆಗಲೇ ಅಕ್ರಮದ ಬಗ್ಗೆ ದೂರು ನೀಡಬೇಕಿತ್ತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವೇ ಇಲ್ಲ. ಅಥವಾ ಬಿಜೆಪಿ ನಾಯಕರ ಪಾತ್ರವೇ ಇಲ್ಲ. ಪಂಚಾಯಿತಿ ಕಾರ್ಯದರ್ಶಿ, ಅಂಚೆಯವರು, ತೆರಿಗೆ ಸಂಗ್ರಹ ಮಾಡುವವರು, ಆರೋಗ್ಯ ಸಿಬ್ಬಂದಿ ಹೀಗೆ ಇವರೆಲ್ಲರೂ ಮತದಾರರ ಪಟ್ಟಿಗೆ ತಯಾರಿಯಲ್ಲಿ ಭಾಗವಹಿಸುತ್ತಾರೆ. ಇವರೆಲ್ಲರೂ ಬಿಜೆಪಿಯವರಾ? ಪಟ್ಟಿಗೆ ಅಕ್ರಮವಾಗಿ ಹೆಸರನ್ನು ಬಿಜೆಪಿಯವರು ಹೇಗೆ ಸೇರಿಸಲು ಸಾಧ್ಯ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಆದಾಯ ತೆರಿಗೆ ಮಸೂದೆ-2025 ಹಿಂಪಡೆದ ಕೇಂದ್ರ – ಆ.11ರಂದು ಹೊಸ ಆವೃತ್ತಿ ಪರಿಚಯ
ಒಂದೇ ಮನೆಯಲ್ಲಿ 18 ಮುಸ್ಲಿಂ ಮತದಾರರಿದ್ದಾರೆ
ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ಬೋಗಸ್ ವೋಟ್‌ಗಳ ಅಕ್ರಮ ಮಾಡಿದ್ದಕ್ಕೆ ಬಂಧಿತರಾಗಿದ್ದಾರೆ. ಬೆಂಗಳೂರಿನ ಗಾಂಧಿನಗರದ ಒಂದು ಚಿಕ್ಕ ಮನೆಯಲ್ಲಿ 18 ಮುಸ್ಲಿಂ ಮತದಾರರಿದ್ದಾರೆ. ಒಂದೇ ಮನೆಯಲ್ಲಿ ಇಷ್ಟೊಂದು ವೋಟು ಇರಲು ಹೇಗೆ ಸಾಧ್ಯ? ಸರ್ವಜ್ಞನಗರ ಕ್ಷೇತ್ರದ ನಾಗವಾರ ವಾರ್ಡ್ನಲ್ಲಿ ಕಾಂಗ್ರೆಸ್ ಶಾಸಕರಿಗಿಂತಲೂ ಸಂಸದರಿಗೆ 5,965 ಹೆಚ್ಚುವರಿ ಮತ ಸಿಕ್ಕಿದೆ. ಹಾಗಾದ್ರೆ ಕಾಂಗ್ರೆಸ್‌ಗೆ ಹೆಚ್ಚು ಮತ ಸಿಕ್ಕಿದ್ದು ಹೇಗೆ? ಹೆಚ್‌ಬಿಆರ್ ಲೇಔಟ್‌ನಲ್ಲಿ ಶಾಸಕರಿಗಿಂತಲೂ ಸಂಸದರಿಗೆ 3,646 ಮತ ಹೆಚ್ಚಾಗಿ ಸಿಕ್ಕಿದೆ. ಕಾಡುಗೊಂಡನಹಳ್ಳಿಯಲ್ಲಿ 3432 ಹೆಚ್ಚು ಮತ ಸಿಕ್ಕಿದೆ. ಹಾಗಾದರೆ ಇವೆಲ್ಲವನ್ನೂ ಸೇರಿಸಿದ್ದು ಯಾರು? ಸೋತ ಕೂಡಲೇ ಚುನಾವಣಾ ಆಯೋಗ ಸರಿ ಇಲ್ಲ ಎನ್ನುತ್ತಾರೆ ಎಂದರು. ಇದನ್ನೂ ಓದಿ: ಅಮೆರಿಕದ ಶಸ್ತ್ರಾಸ್ತ್ರ, ವಿಮಾನ ಖರೀದಿಸುವ ಯೋಜನೆ ಸ್ಥಗಿತಗೊಳಿಸಿಲ್ಲ: ಭಾರತದ ರಕ್ಷಣಾ ಸಚಿವಾಲಯ ಸ್ಪಷ್ಟನೆ
2023ರ ವಿಧಾನಸಭಾ ಚುನಾವಣೆ ಬಳಿಕ 2024 ರಲ್ಲಿ ಲೋಕಸಭಾ ಚುನಾವಣೆ ನಡೆಯಿತು. ಒಂದೇ ವರ್ಷದಲ್ಲಿ ಕೆಲವು ಹೊಸ ಮತದಾರರು ಬಂದಿದ್ದಾರೆ. ಪದ್ಮನಾಭನಗರದಲ್ಲಿ 57,000 ಮತ ನನಗೆ ಬಂದಿದೆ. ಇನ್ನೂ 20,000 ಬರಬೇಕಿತ್ತು. ಆದರೆ ಬೇರೆ ಕಡೆಯಿಂದ ಮುಸ್ಲಿಮರನ್ನ ತಂದು ಇಲ್ಲಿಗೆ ಸೇರಿಸಿದ್ದಾರೆ. ಕಂದಾಯ ಇಲಾಖೆ ಎಲ್ಲ ಚುನಾವಣೆ ನಡೆಸುತ್ತದೆ. ಎಲ್ಲರೂ ಕಾಂಗ್ರೆಸ್ ಸರ್ಕಾರದವರೇ ಆಗಿರುವಾಗ ಅಕ್ರಮವಾಗಲು ಹೇಗೆ ಸಾಧ್ಯ? ಈ ಹಿಂದೆ ಕಾಂಗ್ರೆಸ್ ಎಲ್ಲ ಕಡೆ ಅಧಿಕಾರದಲ್ಲಿದ್ದಾಗ ಕಳ್ಳ ಮತದಾನ ಸಾಮಾನ್ಯವಾಗಿತ್ತು. ಮತ ಪೆಟ್ಟಿಗೆಗಳನ್ನು ಎತ್ತಿಕೊಂಡು ಹೋಗುತ್ತಿದ್ದರು. ಪೂಲನ್ ದೇವಿಯಂತಹ ಡಕಾಯಿತರ ಆಡಳಿತವೇ ಎಲ್ಲ ಕಡೆ ನಡೆಯುತ್ತಿತ್ತು. ಅಂತಹ ಚುನಾವಣೆ ರಾಹುಲ್ ಗಾಂಧಿಗೆ ಈಗ ಬೇಕಿದೆ ಅಂತ ಕಿಡಿಕಾರಿದರು. ಇಂದಿರಾಗಾಂಧಿ ಚುನಾವಣಾ ಅಕ್ರಮ ಮಾಡಿ ಗೆದ್ದು ಅನರ್ಹರಾಗಿದ್ದರು. ಅದೇ ರೀತಿ ನರೇಂದ್ರ ಮೋದಿಗೆ ಆಗಿಲ್ಲ. ಗಾಂಧಿ ಕುಟುಂಬದ ಇತಿಹಾಸವೇ ಅಕ್ರಮ. ಚುನಾವಣೆಯಲ್ಲಿ ಅಕ್ರಮ ಮಾಡಿಯೇ ಎಲ್ಲರೂ ಗೆದ್ದಿದ್ದಾರೆ ಅಂತ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.