ಬೆಂಗಳೂರು: ರಾಜ್ಯಪಾಲರು ಸೇರಿ ಎಲ್ಲ ನಾಯಕರೂ ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದಾರೆ ಎಂಬ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿಕೆಗೆ ಮಾಜಿ ಡಿಸಿಎಂ ಆರ್. ಅಶೋಕ್ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಅಶೋಕ್, ಪರಮೇಶ್ವರ್ ರಂತೆ ಜವಾಬ್ದಾರಿ ಇರುವಂತಹ ಕಾಂಗ್ರೆಸ್ ನಾಯಕರು ಸಾಂವಿಧಾನಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯಪಾಲರ ಬಗ್ಗೆ ಯಾವುದೇ ಮಾಹಿತಿ, ಯಾವುದೇ ಸಾಕ್ಷ್ಯಾಧಾರ ಇಲ್ಲದೆ ಅವರ ಸ್ಥಾನಕ್ಕೆ ಅಗೌರವ ತರುವಂತಹ ಕೆಲಸ ಪರಮೇಶ್ವರ್ ಅವರಿಗೆ ಶೋಭೆ ತರುವುದಿಲ್ಲ. ರಾಜೀನಾಮೆ ನೀಡಿದ ಶಾಸಕರು ಸ್ಪೀಕರ್ ರನ್ನು ಭೇಟಿ ಮಾಡಲು ಹೋಗಿದ್ದಾರೆ. ಆದರೆ ಸ್ಪೀಕರ್ ಇರದ ಕಾರಣ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದೇವೆ ಎಂದು ಹೇಳಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯಪಾಲರು ಸೇರಿ ಎಲ್ಲ ನಾಯಕರೂ ಆಪರೇಷನ್ ಕಮಲದಲ್ಲಿ ಭಾಗಿ: ಪರಮೇಶ್ವರ್
ಶಾಸಕರು ಕದ್ದುಮುಚ್ಚಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರಾ ಎಂದು ನಾನು ಪರಮೇಶ್ವರ್ ಅವರನ್ನು ಪ್ರಶ್ನಿಸಲು ಇಷ್ಟಪಡುತ್ತೇನೆ. ಶಾಸಕರು ಸಾರ್ವಜನಿಕವಾಗಿಯೇ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ನಿಮ್ಮ ಸರ್ಕಾರ ನೇಮಕ ಮಾಡಿದ ಪೊಲೀಸ್ ಕಮಿಷನರ್ ಅವರನ್ನು ಎದುರಿಗೆ ಕೂರಿಸಿಕೊಂಡು ಕಾಫಿ, ಸ್ನ್ಯಾಕ್ಸ್ ಕೊಡುವುದು ಸಾಮಾನ್ಯ. ಇವರು ಹೋದಾಗ ಕಾಫಿ ಕೊಟ್ಟರೆ ಅದು ಸರಿ. ಆದರೆ ಶಾಸಕರಿಗೆ ಕೊಟ್ಟರೆ ನಿಮಗೆ ಹೊಟ್ಟೆ ಉರಿ ಆಗುವುದಾದರೆ ನಿಮ್ಮ ತರಹ ಕದ್ದುಮುಚ್ಚಿ ಭೇಟಿ ಮಾಡುವ ಸ್ಥಾನ ಅದಲ್ಲ ಎಂದರು.
ರಾಜ್ಯಪಾಲರ ಬಗ್ಗೆ ನೀವು ಕೊಟ್ಟ ಹೇಳಿಕೆ ಸರಿಯಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯಪಾಲರ ಕಚೇರಿಯನ್ನು ಎಷ್ಟು ದುರ್ಬಳಕೆ ಮಾಡಿಕೊಂಡಿದ್ದೀರಾ ಎಂಬುದು ಈಗ ಬಹಿರಂಗವಾಗಿದೆ. ನಿಮ್ಮ ಚಾಳಿಗೆ ನಾವು ಬರುವುದಿಲ್ಲ. ನಮಗೆ ಆದಂತಹ ಜವಾಬ್ದಾರಿ ಇದೆ. ಹಾಗಾಗಿ ನಾವು ಯಾವುದೇ ಕಾರಣಕ್ಕೂ ರಾಜ್ಯಪಾಲರ ಕಚೇರಿಯನ್ನು ರಾಜಕೀಯ ಕೇಂದ್ರವಾಗಿ ನಾವು ಮಾಡಲ್ಲ. ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ. ನೀವು ಮಾಡಿರುವಂತಹ ಅನುಭವದ ಬಗ್ಗೆ ನಮ್ಮ ಮೇಲೆ ಆಪಾದನೆ ಮಾಡುವುದು ಸರಿಯಲ್ಲ ಎಂದು ಅಶೋಕ್ ತಿರುಗೇಟು ನೀಡಿದ್ದಾರೆ.
ಪರಮೇಶ್ವರ್ ಹೇಳಿದ್ದೇನು?
ರಾಜ್ಯಪಾಲರೂ ಸೇರಿದಂತೆ ಎಲ್ಲ ಬಿಜೆಪಿ ಮುಖಂಡರು ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ವಿಶೇಷ ವಿಮಾನದ ಮೂಲಕ ಶಾಸಕರನ್ನು ಮುಂಬೈನ ರೆಸಾರ್ಟ್ ಗೆ ಕಳುಹಿಸಲಾಗಿದೆ. ಇದರ ಅರ್ಥ ಏನು, ಇಷ್ಟೆಲ್ಲ ಆದರೂ ಸಹ ನಮಗೆ ಸಂಬಂಧವಿಲ್ಲ ಅವರು ಏನಾದರೂ ಮಾಡಿಕೊಳ್ಳಲಿ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಇದು ಹೇಗೆ ಸಾಧ್ಯ, ಅವರೇ ಆಪರೇಷನ್ ಮಾಡುತ್ತಿರುವುದು. ಬಿಜೆಪಿಯವರೇ ಸರ್ಕಾರವನ್ನು ಅಸ್ಥಿರ ಹಾಗೂ ಕುದುರೆ ವ್ಯಾಪಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.