‘ಲೆಕ್ಕ ತನ್ನಿ ಟ್ಯಾಲಿ ಮಾಡೋಣ’- ಸಿದ್ದರಾಮಯ್ಯಗೆ ಅಶೋಕ್ ಸವಾಲು

Public TV
2 Min Read
ASHOK

ಉಡುಪಿ: ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೋತಿಷ್ಯಾಲಯ ಮುಚ್ಚಿದೆ. ಜನ ಅವರ ಮಾತನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರದ ಅನುದಾನದ ಬಗೆಗಿನ ಸಿದ್ದರಾಮಯ್ಯ ಆರೋಪಕ್ಕೆ ಉತ್ತರ ನೀಡಿದರು. ಸಿದ್ದರಾಮಯ್ಯಗೆ ಓಪನ್ ಚಾಲೆಂಜ್ ಕೊಡುತ್ತೇನೆ. ಕಾಂಗ್ರೆಸ್ ಹಾಗೂ ಬಿಜೆಪಿಯ 5 ವರ್ಷದ ಟ್ಯಾಲಿ ಮಾಡೋಣ. ಪ್ರಧಾನಿ ಮೋದಿ ಮತ್ತು ಮನಮೋಹನ್ ಸಿಂಗ್ ಅನುದಾನ ಟ್ಯಾಲಿ ಮಾಡೋಣ ಬನ್ನಿ, ಯಾರು ಎಷ್ಟು ಕೊಟ್ಟಿದ್ದಾರೆ ಲೆಕ್ಕಾ ಹಾಕೋಣ ಎಂದು ಹೇಳಿದ್ದಾರೆ.

ASHOK A

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 10 ವರ್ಷದಲ್ಲಿ ಕರ್ನಾಟಕಕ್ಕೆ ಕೊಟ್ಟಿದ್ದೆಷ್ಟು? ಮೋದಿಯ ಕೊಡುಗೆಯೇನು ಎಂದು ನಾನು ಚರ್ಚೆ ಮಾಡೋದಕ್ಕೆ ಸಿದ್ಧನಿದ್ದೇನೆ. ಸಿದ್ದರಾಮಯ್ಯ ವಿವರ ತಗೊಂಡು ಬರಲಿ. ಅಭಿವೃದ್ಧಿ, ಬರ, ನೆರೆ, ರಸ್ತೆಯ ಅನುದಾದ ಲೆಕ್ಕ ಕೊಡಿ. ದಾಖಲೆ ತಂದು ಮಾತನಾಡಿ. ಉಪಚುನಾವಣೆಯಲ್ಲಿ 12 ಬಿಜೆಪಿ ಶಾಸಕರು ಗೆದ್ದಾಗ ಸಿದ್ದರಾಮಯ್ಯ ಅವರ ಮೇಲಿನ ನಂಬಿಕೆ ಹೋಗಿದೆ. ಅವರ ಜ್ಯೋತಿಷ್ಯಾಲಯ ಮುಚ್ಚಿದೆ, ಅಂಕಿ-ಅಂಶ ನೀಡಿ ಸಿದ್ದರಾಮಯ್ಯ ಅವರು ಮಾತನಾಡಿಲಿ. ಸುಮ್ಮನೆ ಹಾದಿ ಬೀದಿಯಲ್ಲಿ ಮಾತಾಡಿ ಏನೂ ಸಾಧಿಸಲಾಗದು ಎಂದರು.

ಬಂದ್ ತಿರಸ್ಕರಿಸಿದ್ದಾರೆ: ಭಾರತ್ ಬಂದ್ ಕರೆಯುವ ಅವಶ್ಯಕತೆ ಇರಲಿಲ್ಲ. 50-60 ವರ್ಷದ ಹಿಂದಿನ ಬೇಡಿಕೆಗಳಿಗೆ ಅರ್ಥವಿಲ್ಲ. ಬಂದ್ ಕರೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಆಗುತ್ತದೆ. ಬಂದ್‍ಗೆ ಜನಗಳು ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಜನ ಬಂದ್‍ಅನ್ನು ತಿರಸ್ಕಾರ ಮಾಡಿದ್ದಾರೆ. ನಾನಿದನ್ನು ಸ್ವಾಗತ ಮಾಡುತ್ತೇನೆ. ಕಮ್ಯೂನಿಸ್ಟ್ ಪ್ರೇರಿತ ಬಂದ್ ಹೇರಿಕೆ ಸರಿಯಲ್ಲ. ಬಂದ್‍ನಿಂದ ಯಾವುದೇ ಉದ್ದೇಶ ಈಡೇರಲ್ಲ ಎಂದು ಹೇಳಿದರು.

Basavaraj Bommai

ಬಂದ್ ಶಾಂತಿಯುತ: ಇತ್ತ ಗೃಹ ಸಚಿವ ಬೊಮ್ಮಾಯಿಯವರು ಮಾತನಾಡಿ, ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆಕೊಟ್ಟಿದ್ದು, ರಾಜ್ಯದಲ್ಲಿ ಎಲ್ಲೂ ಬಂದ್ ಆಗಿಲ್ಲ ಎಂಬ ವರದಿ ಬಂದಿದೆ. ಕೆಲವು ಕಡೆ ಎಡಪಕ್ಷಗಳು ಮುಷ್ಕರ ಮಾಡಿವೆ. ಶಾಂತಿಯುತ ಪ್ರತಿಭಟನೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಉಡುಪಿಯಲ್ಲಿ ಬಂದ್ ಕುರಿತಾಗಿ ಮಾತನಾಡಿದ ಸಚಿವ ಬೊಮ್ಮಾಯಿ, ರಾಜ್ಯಾದ್ಯಂತ ಪರಿಸ್ಥಿತಿ ಹತೋಟಿಯಲ್ಲಿದೆ. ಸೂಕ್ತ ಬಂದೋಬಸ್ತ್ ಮಾಡಿದ್ದೆವು. ದಿನನಿತ್ಯದ ಚಟುವಟಿಕೆ ಸಾಮಾನ್ಯವಾಗಿದೆ. ಶಾಲಾ ಕಾಲೇಜು ನಡೆದಿದ್ದು, ವ್ಯಾಪಾರ-ವ್ಯವಹಾರ ಸಹಜವಾಗಿದೆ ಎಂದು ಹೇಳಿದರು.

Share This Article