ಚಿತ್ರದುರ್ಗ: ಕಾಂಗ್ರೆಸ್‌ನವರಿಂದಲೇ (Congress) ವಿಪಕ್ಷಕ್ಕೆ ದಾಖಲೆಗಳು ಸಿಗುತ್ತಿವೆ ಎಂದು ಪ್ರತಿ ಪಕ್ಷದ ನಾಯಕ ಆರ್ ಅಶೋಕ್ (R Ashok) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಕುರ್ಚಿಗಾಗಿ ಏಳೆಂಟು ಜನ ಸಚಿವರು ಟವಲ್ ಹಾಕಿದ್ದು, ಸಿದ್ಧರಾಮಯ್ಯಗೆ (Siddaramaiah) ಅವರ ಪಕ್ಷದವರೇ ವಿರೋಧಿಗಳಾಗಿದ್ದಾರೆ. ಸಿಎಂ ಅವರನ್ನು ಕೆಳಗಿಳಿಸಲು ಕಾಂಗ್ರೆಸ್‌ನವರಿಂದಲೇ (Congress) ವಿಪಕ್ಷಕ್ಕೆ ದಾಖಲೆಗಳು ಸಿಗುತ್ತಿವೆ. ಆದರೆ ಸುಖಾಸುಮ್ಮನೆ ಬಿಜೆಪಿಯಿಂದ (BJP) ಸರ್ಕಾರ ಅತಂತ್ರ ಯತ್ನ ಆರೋಪ ಮಾಡುತ್ತಿದ್ದಾರೆ. ಮುಡಾ ದಾಖಲೆ ಕೊಟ್ಟವನು ಯಾರು? ತೆಗೆದುಕೊಂಡವನು ಯಾರು ಎಂದು ಹೇಳಲಿ ಎಂದು ಪ್ರಶ್ನಿಸಿದರು.
ಮುಡಾ ಪ್ರಕರಣವನ್ನು ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್‌ನವರು ನನ್ನ ರಾಜೀನಾಮೆ ಕೇಳಿದ್ದರು. ಹೀಗಾಗಿ ನಾನು ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆಗೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದೇನೆ. 24 ಗಂಟೆಯ ಗಡುವು ಮುಗಿಯಲು ಇನ್ನೂ ಸಮಯವಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದವರು ಧೈರ್ಯ ತೋರಿಸಲಿ ಎಂದು ಸವಾಲು ಎಸೆದರು. ಇದನ್ನೂ ಓದಿ: ಮಲ್ಲಿಕಾರ್ಜುನ್ ಖರ್ಗೆಯನ್ನು ಭೇಟಿಯಾದ ಸತೀಶ್ ಜಾರಕಿಹೊಳಿ
ಹೆಚ್‌ಡಿಕೆ ಹಾಗೂ ಆರ್.ಅಶೋಕ್ ಹುಚ್ಚರಂತೆ ಮಾತನಾಡುತ್ತಾರೆ ಎಂಬ ಬೋಸರಾಜು ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿಕಾರ ಹಣ ಇದ್ದಾಗ ಆ ರೀತಿಯ ಮಾತುಗಳನ್ನಾಡುತ್ತಾರೆ. ಆದರೆ ನಾನು ಕೆಳಮಟ್ಟಕ್ಕಿಳಿದು ಪ್ರತಿಕ್ರಿಯಿಸಲು ಹೋಗುವುದಿಲ್ಲ ಎಂದರು.
14 ಜನ ಶಾಸಕರಿಗೆ ಆಪರೇಷನ್ ಕಮಲಕ್ಕೆ ಯತ್ನ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆ ಶಾಸಕರು ಯಾರೆಂದು ಹೇಳಲಿ ಮತ್ತು ದೂರು ದಾಖಲಿಸಲಿ. ನಾವು ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸಲು ಹೋಗಲ್ಲ. ಪಾಪದ ಕೊಡ ತುಂಬಿ ಅವರಾಗಿಯೇ ಬೀಳಬೇಕು. ನಾವು ಬೀಳಿಸಲ್ಲ ಎಂದು ಸ್ಪಷ್ಟಪಡಿಸಿದರು.