ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಷ್ಟೊಂದು ಅವಮಾನ ಮಾಡಿಸಿಕೊಂಡು ಸಿಎಂ ಸ್ಥಾನದಲ್ಲಿ ಮುಂದುವರೆಯೋದು ಬೇಡ. ಕೂಡಲೇ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಡಿ.ಕೆ ಶಿವಕುಮಾರ್ (D.K Shivakumar) ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಡಿ ಎಂಬ ಚಂದ್ರಶೇಖರ ಸ್ವಾಮೀಜಿ (Chandrashekharnath Swamiji) ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಕರೆದು ಅದೇನು ಆಯ್ತು ಎನ್ನುವ ಗಾದೆ ರೀತಿ ಸ್ವಾಮೀಜಿ ಮಾತಾಗಿದೆ. ಸಿದ್ದರಾಮಯ್ಯ ಡಿಸಿಎಂ ತಂತ್ರಕ್ಕೆ ಇದು ಡಿಕೆಶಿ ಪ್ರತಿತಂತ್ರ. ಶಿವಕುಮಾರ್ ತಮ್ಮನ ಸೋಲು ಸಹಿಸಲು ಅಗ್ತಿಲ್ಲ. ಡಿ.ಕೆ ಸುರೇಶ್ ಸೋಲಿಸಿದ್ದು ಯಾರು ಎಂದು ಗೊತ್ತಾಗಿದೆ. ಹೀಗಾಗಿ ಅದಕ್ಕೆ ಕೌಂಟರ್ ಆಗಿ ಸ್ವಾಮೀಜಿ ಹೇಳಿಕೆ ಬಂದಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಸ್ಥಾನ ಬಿಟ್ಟು ಕೊಡುತ್ತಾರಾದ್ರೆ, ನಾನು ಖಾವಿ ಬಟ್ಟೆ ಹಾಕ್ತೀನಿ: ಕೆಎನ್ ರಾಜಣ್ಣ
ಹೆಚ್ಚುವರಿ ಡಿಸಿಎಂ ಬಗ್ಗೆ ಸಿದ್ದರಾಮಯ್ಯ ಬಣದವರು ಮಾತಾಡಿದ್ದರು, ಅದಕ್ಕೆ ಇದು ಕೌಂಟರ್. ಸಿಎಂ ಧರ್ಮಾತ್ಮರಾಗಿದ್ದರೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್‍ನವರು ಉತ್ತರ ಕೊಡಬೇಕು. ಸಿದ್ದರಾಮಯ್ಯಗೆ ಗೌರವ ಇದ್ದರೆ ರಾಜೀನಾಮೆ ಕೊಡೋದು ಒಳ್ಳೆಯದು. ಇಷ್ಟು ಅವಮಾನ ಆದ ಮೇಲೆ ಅವರು ಸಿಎಂ ಸ್ಥಾನದಲ್ಲಿ ಇರೊಲ್ಲ ಅಂತ ಎನಿಸುತ್ತದೆ ಎಂದಿದ್ದಾರೆ.
ಇದು ಈ ಸರ್ಕಾರದ ಬೇಗುದಿ. ಈಗ ಒಂದೊಂದೇ ಹೊರಗೆ ಬರುತ್ತಿದೆ. ಡಿಕೆ ಗ್ರೂಪ್ ಮತ್ತು ಸಿಎಂ ಗ್ರೂಪ್ ನಡುವೆ ವಾರ್ ನಡೆಯುತ್ತಿದೆ. ಇವರಿಂದ ನಯಾಪೈಸೆ ಅಭಿವೃದ್ಧಿ ಆಗಿಲ್ಲ. ಕಾಂಗ್ರೆಸ್‍ನಲ್ಲಿ ಗೊಂದಲ ಇದೆ. ಸರ್ಕಾರಕ್ಕೆ ಆಪತ್ತು ಇದೆ ಎಂದು ಗೊತ್ತಾಗಿದೆ. ಇದರಿಂದಲೇ ಜಾಸ್ತಿ ದಿನ ಈ ಸರ್ಕಾರ ಇರುವುದಿಲ್ಲ ಎಂದು ಹೇಳಿದ್ದೆ ಎಂದಿದ್ದಾರೆ.
ಈ ವಿಚಾರವನ್ನು ಸ್ವಾಮೀಜಿಯವರೇ ಹೇಳಿದ್ರಾ? ಅಥವಾ ಹೇಳಿಸಿದ್ರಾ ಎನ್ನುವ ಒಳಗುಟ್ಟು ಸಿಎಂಗೆ ಅರ್ಥ ಆಗಿದೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡೋದು ಒಳ್ಳೆಯದು. ನನ್ನ ಇತಿಹಾಸದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಇಂತಹ ಅವಮಾನ ಆಗಿರಲಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಸ್ವಾಮೀಜಿಯವರಲ್ಲ: ಸಿದ್ದರಾಮಯ್ಯ