ಬೆಂಗಳೂರು: ಕರ್ನಾಟಕ ಶಾಸಕರ ಮಾನ ಮರ್ಯಾದೆಯನ್ನು ಹರಾಜು ಹಾಕುವ ಕೆಲಸವನ್ನು ಕಾಂಗ್ರೆಸ್‍ನವರು ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಶಾಸಕ ಆನಂತ್ ಸಿಂಗ್ ಮೇಲಿನ ಹಲ್ಲೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನಾಯಕರು ಗುಂಡಾಗಿರಿ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ. ಜನಪ್ರತಿನಿಧಿಯಾಗಿದ್ದು ರೆಸಾರ್ಟಿನಲ್ಲಿ ಹೊಡೆದಾಡಿಕೊಂಡು ರಾಜ್ಯದ ಎಲ್ಲ ಶಾಸಕರ ಮಾನವನ್ನು ಹರಾಜು ಹಾಕಿದ್ದಾರೆ. ಜನರಿಗೆ ಶಾಸಕರ ಮೇಲಿದ್ದ ನಂಬಿಕೆ, ಗೌರವವನ್ನು ಹಾಳು ಮಾಡಿದ್ದಾರೆ. ಈ ಘಟನೆಯಿಂದ ರಾಜ್ಯ 224 ಶಾಸಕರು ತಲೆ ತಗ್ಗಿಸಿ ನಡೆಯುವಂತಾಗಿದೆ ಎಂದು ಕಿಡಿಕಾರಿದ್ದಾರೆ.
ಬಾರ್ ನಲ್ಲಿ ಗಲಾಟೆ ಮಾಡಿದ ಪುಂಡ ಪೋಕರಿಗಳನ್ನು ಪೊಲೀಸರು ಹಿಡಿದು ಥಳಿಸಿ ಬುದ್ಧಿ ಕಲಿಸುತ್ತಾರೆ. ಆದರೆ ಈಗ ಎಲ್ಲಿ ಹೋಗಿದ್ದಾರೆ ಪೊಲೀಸರು? ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ರೆಸಾರ್ಟಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಂದರೆ ಗುಂಡಾ ಸಂಸ್ಕøತಿಯ ಪಕ್ಷ ಎನ್ನುವುದನ್ನು ಮತ್ತೊಮ್ಮೆ ಸಾಬೀತಾಗಿದೆ ಎಂದು ಆರೋಪಿಸಿದರು.
ಆನಂದ್ ಸಿಂಗ್ ಅವರಿಗೆ ಬಾಟಲ್ ನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಈ ಹಿಂದೆ ಶಾಸಕ ನಲಪಾಡ್ ಪುತ್ರನ ಪ್ರಕರಣವನ್ನು ನಾವು ನೋಡಿದ್ದೇವೆ ಎಂದ ಅವರು, ಈ ಘಟನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣ. ಅವರು ಶಾಸಕರ ಮಧ್ಯೆ ಬೆಂಕಿ ಹಚ್ಚಿ, ಪಕ್ಷದಲ್ಲಿ ಗುಂಪುಗಳನ್ನಾಗಿ ಮಾಡಿದರು. ಸಿಎಲ್‍ಪಿ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವಂತೆ ಸುಮಾರು 20 ಶಾಸಕರು ಒತ್ತಾಯ ಮಾಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರ ಕುತಂತ್ರವೇ ಕಾರಣ ಎಂದು ದೂರಿದರು.
ಆನಂದ್ ಸಿಂಗ್ ಅವರಿಗೆ ಕೇವಲ ಎದೆನೋವು ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಹಾಗಿದ್ದರೆ ಆನಂದ್ ಸಿಂಗ್ ಅವರನ್ನು ಹೊರಗೆ ತಂದು ತೋರಿಸಲಿ, ನಿಜವಾದ ಸತ್ಯ ಬಯಲಿಗೆ ಬರುತ್ತದೆ. ಪ್ರಕರಣವನ್ನು ಮುಚ್ಚಿ ಹಾಕುವುದು ಸರಿಯಲ್ಲ ಎಂದು ಗುಡುಗಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv