ಕೋಲಾರ: ಸಮ್ಮಿಶ್ರ ಸರ್ಕಾರ ಅಧಕಾರದಲ್ಲಿದ್ದಾಗ ಬಾಯ್ ಬಾಯ್ ಎನ್ನುತ್ತಿದ್ದ ಕಾಂಗ್ರೆಸ್, ಜೆಡಿಎಸ್ ನಾಯಕರು ಈಗ ವಿಲನ್ ಆಗಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಹೊಂದಾಣಿಕೆ ಇಲ್ಲ. ಶನಿವಾರ ಕಾಂಗ್ರೆಸ್ ಪಾರ್ಟಿಗೆ ಅವರ ಅಧ್ಯಕ್ಷರೇ ಬಂದಿಲ್ಲ, ಇನ್ನು ರಣಕಹಳೆ ಎಲ್ಲಿ ಎಂದು ವ್ಯಂಗ್ಯವಾಡಿದರು. ಎರಡು ತಿಂಗಳಾದರೂ ಕಾಂಗ್ರೆಸ್ಸಿಗೆ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡೋ ಯೋಗ್ಯತೆ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿರುವುದರಿಂದ ರಣವೂ ಇಲ್ಲ, ಕಹಳೆಯೂ ಇಲ್ಲ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೇ ರಾಜಿನಾಮೆ ಕೊಟ್ಟಿದ್ದು, ಆ ಪಕ್ಷ ದಿಕ್ಕು ದಸೆಯಿಲ್ಲದ ಪಕ್ಷವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಬಾಯ್ ಬಾಯ್ ಅಂದವರು ಈಗ ವಿಲನ್ ವಿಲನ್ ಆಗಿದ್ದಾರೆ. ಜೆಡಿಎಸ್ ಅವರಿಗೆ ಒಳಗೆ ಚೂರಿ ಹಾಕಿದವರು ಯಾರು ಎಂದು ಗೊತ್ತು ಎಂದು ಟಾಂಗ್ ಕೊಟ್ಟರು.
Advertisement
Advertisement
ಉಪಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ಉಪಚುನಾವಣೆ ದಿನಾಂಕ ನಿಗದಿಯಾಗಿದೆ. ಸೋಮವಾರದ ನಂತರ ರಾಜಕೀಯ ಚಿತ್ರಣ ಬದಲಾಗುತ್ತದೆ. ಅನರ್ಹ ಶಾಸಕರ ತೀರ್ಪು ಸೋಮವಾರ ಬರುವುದರಿಂದ ಚುನಾವಣೆಯ ಚಿತ್ರಣವೇ ಬದಲಾಗುತ್ತೆ. ಬಿಜೆಪಿ ಪಕ್ಷಕ್ಕಾಗಿ ತ್ಯಾಗ ಮಾಡಿದವರು ತುಂಬಾ ಜನ ಇದ್ದಾರೆ. ಉಪಚುನಾವಣೆಯಲ್ಲಿ 15 ಕ್ಕೆ 15 ಸ್ಥಾನ ಬಿಜೆಪಿ ಗೆಲ್ಲಬೇಕು. ಮಂಡ್ಯ ಚುನಾವಣೆ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದರು. ಹಾಗೆಯೇ ಡಿಕೆ ಶಿವಕುಮಾರ್ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಇಡಿ ಸ್ವತಂತ್ರ ಸಂಸ್ಥೆ, ಈ ಹಿಂದೆ ಹಲವಾರು ಜನರನ್ನ ಬಂಧಿಸಲಾಗಿದೆ. ಡಿಕೆಶಿ ಬಂಧನದಿಂದ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ತಿಳಿಸಿದರು.
Advertisement
Advertisement
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥತ್ವಕ್ಕೆ ಬರಲು ಬಹಳ ಶಾಸಕರು ತ್ಯಾಗ ಮಾಡಿದ್ದಾರೆ. ಅನರ್ಹ ಶಾಸಕರ ಬಗ್ಗೆ ಸುಪ್ರೀಂ ತೀರ್ಪು ಬರುತ್ತದೆ. ಅದಕ್ಕಾಗಿ ತೀರ್ಪಿನ ಆಧಾರದ ಮೇಲೆ ಎ ಪ್ಲಾನ್ ಬಿ ಪ್ಲಾನ್ ಮಾಡಿದ್ದೇವೆ. ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟಿನ ಕೊರತೆ ಇದೆ, ಮೂಲ, ವಲಸೆ ಕಾಂಗ್ರೆಸ್ ಎಂಬ ಭಿನ್ನಾಭಿಪ್ರಾಯ ಇದೆ. ಜಿ.ಪರಮೇಶರ್ ಅಸಮಾದಾನ ಹೊರಹಾಕಿರುವುದು ಅದಕ್ಕೆ ಉದಾಹರಣೆಯಾಗಿದೆ. ನಮ್ಮಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ ಹಾಗಾಗಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ದಿಕ್ಕು ದೆಸೆ ಇಲ್ಲದ ಹಾಗೆ ಕಾಂಗ್ರೆಸ್ ಪಕ್ಷವಾಗಿದೆ, ಎಐಸಿಸಿ ಅಧ್ಯಕ್ಷರು ಸೇರಿದಂತೆ ಎಲ್ಲರೂ ರಾಜೀನಾಮೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.
ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಇದ್ದಾಗ ಎಷ್ಟು ಪರಿಹಾರ ಕೊಟ್ಟಿದೆ ನೋಡಿಕೊಳ್ಳಲಿ. ನಮ್ಮ ಸರ್ಕಾರ 10 ಸಾವಿರ, ಪ್ರತ್ಯೇಕವಾಗಿ ಮನೆ ನಿರ್ಮಾಣ ಮಾಡಲು ಒಂದು ಲಕ್ಷ ರೂ. ನೆರವು ನೀಡುತ್ತಿದೆ. ರಾಜ್ಯದಲ್ಲಿ ಮಾತ್ರ ನೆರೆ ಇಲ್ಲ ಬೇರೆ ಬೇರೆ ರಾಜ್ಯಗಳಲ್ಲಿ ನೆರೆ ಇದೆ ಹಾಗಾಗಿ ಸಮೀಕ್ಷೆ ಮಾಡಿ ಕೇಂದ್ರದಿಂದ ಅನುದಾನ ಸಿಗಲಿದೆ. ದ್ವೇಷದ ರಾಜಕಾರಣ ನಮಗೆ ಗೊತ್ತಿಲ್ಲ, ಯಾವ್ಯಾವ ಸರ್ಕಾರಗಳು ಏನೇನು ಮಾಡಿದೆ ಗೊತ್ತಿದೆ. ಆರ್ಯ ವೈಶ್ಯ ರಾಜ್ಯ ಸಮಾವೇಶಕ್ಕೆ ಸಿಎಂ ಪರವಾಗಿ ನಾನು ಬಂದಿದ್ದೇನೆ ಎಂದು ಹೇಳಿದರು.