ಬೆಂಗಳೂರು: ಅಧಿಕಾರಕ್ಕಾಗಿ ಹೈಕಮಾಂಡ್ ನಾಯಕರ ಬಳಿ ಚಮಚಾಗಿರಿ, ಗುಲಾಮಗಿರಿ ಮಾಡುತ್ತಿರುವವರಿಗೆ ಸ್ವಾಭಿಮಾನಿ ಮಂಡ್ಯದ (Mandya) ಜನರ ಬಗ್ಗೆ ಮಾತನಾಡುವ ಯೋಗ್ಯತೆಯೂ ಇಲ್ಲ, ಅರ್ಹತೆಯೂ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಡಿ.ಕೆ ಶಿವಕುಮಾರ್ ಅವರ ಮಂಡ್ಯದ ಛತ್ರಿಗಳ ಆಟ ನಿಲ್ಲಿಸಿ ಎಂಬ ಹೇಳಿಕೆ ವಿಚಾರವಾಗಿ ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಂಡ್ಯ ಎಂದರೆ ಇಂಡಿಯಾ ಎನ್ನುವ ಮಾತಿದೆ. ಮಂಡ್ಯದ ಜನತೆಯ ಸ್ವಾಭಿಮಾನಕ್ಕೆ ಧಕ್ಕೆ ತರುವ ಮಾತಾಡಿದರೆ ಅಡ್ರೆಸ್ ಇಲ್ಲದಂತಾಗುತ್ತೀರಿ, ಹುಷಾರ್ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಛತ್ರಿಗಳು ಎಂದ ಡಿಕೆಶಿ ವಿರುದ್ಧ ಸಿಡಿದೆದ್ದ ಮಂಡ್ಯದ ಜನ!
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾ.17ರಂದು ನಡೆದ ಯೂತ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಡಿಕೆಶಿ ಮಾತನಾಡಿದ್ದರು. ಈ ವೇಳೆ ಮಂಡ್ಯದವ್ರು ಛತ್ರಿಗಳು ಎಂಬ ಪದವನ್ನು ಅವರು ಬಳಸಿದ್ದರು.
ಕಾರ್ಯಕ್ರಮದಲ್ಲಿ ಡಿಸಿಎಂ ಮಾತನಾಡುತ್ತಿದ್ದಾಗ ಜನ ಫಲಕ ಹಾಗೂ ಭಾವುಟಗಳನ್ನು ಪ್ರದರ್ಶಿಸಿದ್ದರು. ಈ ವೇಳೆ ಸಿಟ್ಟಾದ ಅವರು, ಅದೆಲ್ಲ ಕೆಳಗಿಳಿಸಿ, ನಿಮ್ಮ ಮಂಡ್ಯದವ್ರ ಛತ್ರಿಗಳ ಆಟ ನಿಲ್ಲಿಸಿ ಎಂದು ಗದರಿಸಿದ್ದರು. ಈ ಹೇಳಿಕೆಗೆ ಜಿಲ್ಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆ ಜನರಿಗೆ ಡಿಕೆಶಿ ಅವಮಾನ ಮಾಡಿದ್ದಾರೆ. ಮಂಡ್ಯ ಜನರ ಭಿಕ್ಷೆಯಿಂದ ಕಾಂಗ್ರೆಸ್ ಅಧಿಕಾರ ಸಿಕ್ಕಿದೆ. 7 ರಲ್ಲಿ 5 ಕ್ಷೇತ್ರಗಳು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಡಿಕೆಶಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಕ್ಕಾಗಿ ಮಂಡ್ಯ ಜನರ ಬಳಿ ಬಂದು ಪೆನ್ನು, ಪೇಪರ್ ಕೊಡಿ ಎಂದು ಅಂಗಲಾಚಿದ್ದು ಮರೆತು ಹೋಯ್ತಾ ಡಿಸಿಎಂ ಅವರೇ? ಮಂಡ್ಯದವರು ಸಿಎಂ ಆಗಿದ್ದಾಗ ಅವರ ಕಾಲಿಗೆ ಬಿದ್ದು ಬೆಳೆದವರು ನೀವು. ಇಂತಹ ದುರಹಂಕಾರಿಗೆ ಸರಿಯಾದ ಬುದ್ಧಿ ಕಲಿಸಬೇಕು. ಅವರು ಕ್ಷಮೆ ಕೇಳಬೇಕು ಎಂದು ಜನ ಆಗ್ರಹಿಸಿದ್ದಾರೆ.