ಬೆಂಗಳೂರು: ಆಪರೇಷನ್ ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ಮತ್ತೆ ರಾಜಕೀಯ ಕ್ಷಿಪ್ರಕ್ರಾಂತಿಯ ವದಂತಿ ಹರಡಿದೆ. ಫೆಬ್ರವರಿ 6ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮತ್ತೆ ಆಪರೇಷನ್ ಕಮಲಕ್ಕೆ ಬಿಜೆಪಿ ಕೈ ಹಾಕಿದೆ ಎನ್ನಲಾಗಿದೆ. ಈ ವದಂತಿಗಳ ಬೆನ್ನಲ್ಲೇ ಮಾಜಿ ಸಚಿವ ಆರ್. ಅಶೋಕ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ಸಿನ 20ರಿಂದ 25 ಶಾಸಕರು ಹಾಗೂ ಜೆಡಿಎಸ್‍ನ ಕೆಲವು ಶಾಸಕರು ಕೈಗೆ ಸಿಗದೇ ಓಡಾಡುತ್ತಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸೋದೇ ಅನುಮಾನ. ನಾವೇನೂ ರಾಜಕೀಯ ಸನ್ಯಾಸಿಗಳಲ್ಲ. ಮೈತ್ರಿ ಪಕ್ಷದ ಶಾಸಕರು ರಾಜೀನಾಮೆ ಕೊಟ್ಟರೆ ನಾವು ಒಂದು ಕೈ ನೋಡ್ತೀವಿ ಅಂತ ಆರ್. ಅಶೋಕ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿನ ಅಸಮಾಧಾನವನ್ನು ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಕೊಂಡಿದ್ದು, ರೆಸಾರ್ಟ್ ರಾಜಕಾರಣಕ್ಕೆ ಬಿಜೆಪಿ ನಿರಂತರವಾಗಿ ಯತ್ನಿಸುತ್ತಿದೆ ಅಂತ ದೂರಿದ್ದಾರೆ. ಕಾಂಗ್ರೆಸ್ಸಿನ ಆರು ಶಾಸಕರಲ್ಲ. 78 ಶಾಸಕರಿಂದಲೂ ಬೇಕಾದರೆ ಯಡಿಯೂರಪ್ಪ ರಾಜೀನಾಮೆ ಕೊಡಿಸಲಿ ಅಂತ ಸಚಿವ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಈ ಮಧ್ಯೆ, ಕಾಂಗ್ರೆಸ್‍ಗಿಂತ ಬಿಜೆಪಿ ಜೊತೆಗಿನ ಮೈತ್ರಿಯೇ ಚೆನ್ನಾಗಿತ್ತು ಅಂದಿದ್ದ ಸಚಿವ ಪುಟ್ಟರಾಜು ಅವರನ್ನು ಬಿಜೆಪಿಯ ರೇಣುಕಾಚಾರ್ಯ ದಿಢೀರ್ ಭೇಟಿಯಾಗಿರೋದು ಮತ್ತಷ್ಟು ವದಂತಿಗೆ ಆಹಾರವಾಗಿದೆ.
ಆಪರೇಷನ್ ಸಂಕ್ರಾಂತಿ ಫೇಲ್ ಆದ ಬಳಿಕ ಬಜೆಟ್ ಅಧಿವೇಶನ ಹೊತ್ತಲ್ಲಿ ಬಿಜೆಪಿಯ ಪ್ಲಾನ್ ಏನು?
* ಕಾಂಗ್ರೆಸ್ ಅಸಮಾಧಾನಿತರ ಜೊತೆಗೆ ಇನ್ನಷ್ಟು ಶಾಸಕರನ್ನು ಸೆಳೆಯುವುದು.
* ಕಾಂಗ್ರೆಸ್ಸಿನ 15, ಜೆಡಿಎಸ್‍ನ 3 ಶಾಸಕರಿಗೆ ಗಾಳ ಹಾಕುವುದು.
* ಬಜೆಟ್ ಅಧಿವೇಶನಕ್ಕೂ ಮುನ್ನ ಈ ಶಾಸಕರಿಂದ ರಾಜೀನಾಮೆ ಕೊಡಿಸುವುದು.
* ಈ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು.
* ಈ ಸರ್ಕಾರಕ್ಕೆ ಬೆಂಬಲ ಇಲ್ಲ, ವಿಶ್ವಾಸಮತಕ್ಕೆ ಸೂಚಿಸಿ ಅಂತ ರಾಜ್ಯಪಾಲರನ್ನು ಕೋರುವುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv