ಡಿ ಕಾಕ್ ಕಾಲಿಗೆ ಬಿದ್ದ ಅಭಿಮಾನಿ – ಕ್ಷಮೆ ಕೇಳಿದ್ದಾನೆ ಎಂದ ನೆಟ್ಟಿಗರು

Public TV
2 Min Read
fsshd3i8 quinton de kock

ರಾಂಚಿ: ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಅಭಿಮಾನಿಯೊಬ್ಬ ದಕ್ಷಿಣ ಆಫ್ರಿಕಾ ಆಟಗಾರ ಕ್ವಿಂಟನ್ ಡಿಕಾಕ್ ಅವರ ಕಾಲಿಗೆ ಬಿದ್ದ ಘಟನೆ ನಡೆದಿದೆ.

ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 202 ರನ್ ಗಳ ಅಂತರದಲ್ಲಿ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಕೊನೆಯ ಪಂದ್ಯದ ಎರಡನೇ ದಿನವಾದ ಭಾನುವಾರ ಭಾರತೀಯ ಅಭಿಮಾನಿಯೊಬ್ಬ ಡಿಕಾಕ್ ಅವರ ಕಾಲಿಗೆ ಬಿದ್ದಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಟ್ರೋಲ್ ಆಗುತ್ತಿದೆ.

de kock

ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ ಮೀಡ್ ವಿಕೆಟ್‍ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಕ್ವಿಂಟನ್ ಡಿಕಾಕ್ ಅವರ ಕಡೆ ಓಡಿ ಬಂದ ಯುವಕನೋರ್ವ ಅವರ ಕಾಲಿಗೆ ಬೀಳುತ್ತಾನೆ. ಇದನ್ನು ಕಂಡ ಡಿಕಾಕ್ ಆಶ್ಚರ್ಯಚಕಿತಗೊಂಡು ನಿಂತು ಬಿಡುತ್ತಾರೆ. ಆಗ ತಕ್ಷಣ ಬಂದ ಭದ್ರತಾ ಸಿಬ್ಬಂದಿ ಯುವಕನನ್ನು ಎಳೆದುಕೊಂಡು ಹೋಗುತ್ತಾರೆ. ಎಳೆದುಕೊಂಡು ಹೋಗುವಾಗ ಯುವಕ ತನ್ನ ಚಪ್ಪಲಿಯನ್ನು ಅಲ್ಲೇ ಬಿಟ್ಟು ಹೋಗಿರುತ್ತಾನೆ. ಆಗ ಡಿಕಾಕ್ ಆ ಚಪ್ಪಲಿಯನ್ನು ತೆಗೆದುಕೊಂಡು ಹೋಗಿ ಮೈದಾನದ ಆಚೆಗೆ ಎಸೆಯುತ್ತಾರೆ.

ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಆತ ಡಿಕಾಕ್ ಅವರ ಬಳಿ ಆಶೀರ್ವಾದ ಪಡೆಯಲು ಬಂದಿಲ್ಲ. ಭಾರತಕ್ಕೆ ಕರೆಸಿ 3-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದಕ್ಕೆ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿದ್ದಾನೆ ಎಂದು ಕೆಲ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ರೀತಿಯ ದೃಶ್ಯ ನಮಗೆ ಭಾರತದಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.

ಮೂರನೇ ದಿನದಾಟಕ್ಕೆ 46 ಓವರ್ ಗಳಲ್ಲಿ 132 ರನ್‍ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾ ಇಂದು ಈ ಮೊತ್ತಕ್ಕೆ 1.5 ಓವರ್ ಗಳಲ್ಲಿ ಕೇವಲ 1 ರನ್ ಸೇರಿಸಿ ಉಳಿದ ಎರಡು ವಿಕೆಟ್ ಕಳೆದುಕೊಂಡಿತು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ 240 ಅಂಕಗಳಿಸಿ ಭಾರತ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ಶಮಿ 3 ವಿಕೆಟ್ ಪಡೆದರೆ ಉಮೇಶ್ ಯಾದವ್ ಮತ್ತು ನದೀಂ ತಲಾ 2 ವಿಕೆಟ್ ಪಡೆದಿದ್ದಾರೆ. ಜಡೇಜಾ ಮತ್ತು ಅಶ್ವಿನ್ ತಲಾ ಒಂದೊಂದು ವಿಕೆಟ್ ಗಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *