ತಿರುಪತಿಯಂತೆ ಧರ್ಮಸ್ಥಳದಲ್ಲೂ ದರ್ಶನಕ್ಕೆ ಕ್ಯೂ ಕಾಂಪ್ಲೆಕ್ಸ್: ಏನಿದರ ವಿಶೇಷ? ಇಲ್ಲಿದೆ ಸಂಪೂರ್ಣ ವಿವರ

Public TV
3 Min Read
queue complex at Dharmasthala Temple Sri Sanidhya Queue Complex specialty new features 2

– ಮಂಜುನಾಥ ಸ್ವಾಮಿಯ ದರ್ಶನಕ್ಕಿಲ್ಲ ಇನ್ನು ಕಷ್ಟ
– ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಅತ್ಯಾಧುನಿಕ ಕ್ಯೂ ಕಾಂಪ್ಲೆಕ್ಸ್

ಮಂಗಳೂರು: ರಾಜ್ಯದ ಪುಣ್ಯ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲೇ ನಿಲ್ಲಬೇಕಿತ್ತು. ಅದರಲ್ಲೂ ವೀಕೆಂಡ್, ರಜಾ ದಿನ, ವಿಶೇಷ ಹಬ್ಬ ಬಂದರೆ ಸರತಿ ಸಾಲಿನಲ್ಲಿ ನಿಲ್ಲುವ ಕಷ್ಟ ಹೇಳ ತೀರದು. ಭಕ್ತರ ಈ ಕಷ್ಟವನ್ನರಿತ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು (Veerendra Heggade) ಇದಕ್ಕೊಂದು ಬದಲಿ ಆರಾಮದಾಯಕ ವ್ಯವಸ್ಥೆಯನ್ನು ಮಾಡಿದ್ದಾರೆ. ಅವರ ಪರಿಕಲ್ಪನೆಯ ಈ ವ್ಯವಸ್ಥೆ ರಾಜ್ಯದಲ್ಲೇ ಪ್ರಥಮ ಎನಿಸಿಕೊಂಡಿದ್ದು ಇಂದು ಲೋಕಾರ್ಪಣೆಗೊಳ್ಳಲಿದೆ.

ತಿರುಪತಿ, ಶಿರಡಿ ಕ್ಷೇತ್ರಗಳಲ್ಲಿ ಕ್ಯೂ ಕಾಂಪ್ಲೆಕ್ಸ್ ಮೂಲಕ ನೀವು ತೆರಳಿ ದೇವರ ದರ್ಶನ ಪಡೆದಿರಬಹುದು. ಇದೀಗ ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಮೊದಲು ಎಂಬಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಕ್ಯೂ ಕಾಂಪ್ಲೆಕ್ಸ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ನಿಮಿಷಕ್ಕೆ 1,000 ಬುಲೆಟ್ ಸಿಡಿಸುತ್ತೆ ಮೇಡ್ ಇನ್ ಇಂಡಿಯಾ ಗನ್ – ಯುರೋಪ್ ದೇಶಗಳಿಂದ ಭಾರೀ ಬೇಡಿಕೆ

queue complex at Dharmasthala Temple Sri Sanidhya Queue Complex specialty new features 1

ಇಲ್ಲಿಯವರೆಗೆ ಮಕ್ಕಳು, ಮಹಿಳೆಯರು, ವಯಸ್ಸಾದವರು ಸೇರಿದಂತೆ ಎಲ್ಲರೂ ಸಣ್ಣದಾದ ಈ ಸರತಿ ಸಾಲಿನಲ್ಲಿ ನಿಂತುಕೊಂಡೇ ಸಾಗಬೇಕಾಗಿತ್ತು. ಭಕ್ತರ ಈ ಕಷ್ಟವನ್ನರಿತ ಶ್ರೀ ಕ್ಷೇತ್ರ ಈಗ ಆಕರ್ಷಕವಾದ ವಿನ್ಯಾಸದ ತನ್ನದೇ ಪರಿಕಲ್ಪನೆಯ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣ ಮಾಡಿದೆ. ದೇವಸ್ಥಾನದ (Manjunatha Swamy Temple) ಹಿಂಭಾಗದಲ್ಲಿ ಬರೋಬ್ಬರಿ 2,75,177 ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ಕ್ಯೂ ಕಾಂಪ್ಲೆಕ್ಸ್ ತಲೆ ಎತ್ತಿದೆ.

queue complex at Dharmasthala Temple Sri Sanidhya Queue Complex specialty new features 4

ಕಾಂಪ್ಲೆಕ್ಸ್‌ ವಿಶೇಷತೆ ಏನು?
ಶ್ರೀ ಸಾನ್ನಿಧ್ಯ ಹೆಸರಿನ ಈ ಕಾಂಪ್ಲೆಕ್ಸ್ ಬಹಳಷ್ಟು ವಿಶಿಷ್ಟತೆಯಿಂದ ಕೂಡಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಲ್ಲದೇ ವಿಶಾಲವಾದ ಭವನದಲ್ಲಿ ಕುರ್ಚಿಯಲ್ಲಿ ಕುಳಿತು ಕ್ರಮೇಣವಾಗಿ ಮುಂದಿನ ಭವನಗಳಿಗೆ ಸ್ಥಳಾಂತರಗೊಳ್ಳಬಹುದು. ಎರಡು ಅಂತಸ್ಥಿನಲ್ಲಿ ತಲಾ 8 ರಂತೆ ಒಟ್ಟು 16 ವಿಶಾಲ ಭವನಗಳಿದ್ದು ಪ್ರತಿ ಭವನದಲ್ಲಿ 800 ಮಂದಿಯಂತೆ ಸುಮಾರು 12ಸಾವಿರ ಮಂದಿ ತಂಗಲು ಅವಕಾಶವಿದೆ.

ಇಡೀ ಸಂಕೀರ್ಣ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಕ್ಯೂ ಕಾಂಪ್ಲೆಕ್ಸ್‌ ಪ್ರವೇಶಿಸುತ್ತಿದ್ದಂತೆ ಎ.ಐ ತಂತ್ರಜ್ಞಾನದ ಕ್ಯಾಮೆರಾ ಎಲ್ಲಾ ಭಕ್ತರ ಸಂಖ್ಯೆಗಳನ್ನು ಲೆಕ್ಕ ಹಾಕುತ್ತದೆ. ಆರಂಭದಲ್ಲೆ ಸೇವಾ ರಶೀದಿ ಕೌಂಟರ್ ಇದ್ದು ಬಳಿಕ ಕೊಠಡಿಗೆ ಎಂಟ್ರಿ ನೀಡಲಾಗುತ್ತದೆ. ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದ್ದು, ಸ್ಟೇನ್ಲೆಸ್ ಸ್ಟೀಲ್ ಕುರ್ಚಿಗಳಿವೆ.

queue complex at Dharmasthala Temple Sri Sanidhya Queue Complex specialty new features 3

ಭಕ್ತಾಧಿಗಳಿಗೆ ಮಾರ್ಗದರ್ಶನ ನೀಡಲು ಎಲ್ಲೆಡೆ ಡಿಜಿಟಲ್ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದ್ದು, ಭವನ ಸಂಖ್ಯೆ, ದರ್ಶನದ ಅವಧಿ, ದೇವಸ್ಥಾನದ ಇತಿಹಾಸ ಪ್ರಸಾರವಾಗುತ್ತಿರುತ್ತದೆ. ಪ್ರತಿ ಭವನದಲ್ಲಿಯೂ ಕ್ಯಾಂಟೀನ್, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಆರೈಕೆ ಕೊಠಡಿ ಇದೆ.

ವಿಶಾಲವಾದ ಭವನದಲ್ಲಿ ಕುರ್ಚಿ ಮೇಲೆ ಕುಳಿತು ನಿಗದಿತ ಸಮಯದಲ್ಲಿ ದೇವರ ದರ್ಶನಕ್ಕೆ ತೆರಳಬಹುದು. ಇದರಿಂದ 6-7 ಗಂಟೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಒಂದೂವರೆ ಗಂಟೆಯೊಳಗೆ ದರ್ಶನ ಪಡೆಯಬಹುದು.

ಸುಂದರ ಕಲಾಕೃತಿಗಳಿಂದ ಆಕರ್ಷಿಸುವ ಈ ಕ್ಯೂ ಕಾಂಪ್ಲೆಕ್ಸ್ ನ ಪ್ರತೀ ಕೊಠಡಿಯೊಳಗೂ ಸುಸಜ್ಜಿತ ಆಸನಗಳು, ಮಕ್ಕಳ ಆರೈಕೆ ಕೊಠಡಿ, ಟಿವಿ, ಉಚಿತ ಉಪಾಹಾರದ ವ್ಯವಸ್ಥೆ ಇದ್ದು ಇಡೀ ಕೊಠಡಿ 27 ಡಿಗ್ರಿ ಸೆಲ್ಸಿಯಸ್ ಕೂಲಿಂಗ್ ಸಿಸ್ಟಮ್‌ ಒಳಗೊಂಡಿರುವುದು ವಿಶೇಷ. ಇಂತಹ ಸುಸಜ್ಜಿತ ಆಧುನಿಕ ತಂತ್ರಜ್ಞಾನ ಕ್ಯೂ ಕಾಂಪ್ಲೆಕ್ಸ್ ಬೇರೆಲ್ಲೂ ಇಲ್ಲ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

 

ಇಂದು ಲೋಕಾರ್ಪಣೆ:
ಕಳೆದ ಹಲವಾರು ವರ್ಷಗಳಿಂದ ಸರತಿ ಸಾಲಿನಲ್ಲೇ ಬಂದು ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಿದ್ದ ಭಕ್ತರಿಗೆ, ಇನ್ನು ಮುಂದೆ ಉತ್ತಮ ರೀತಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಕ್ಯೂ ಕಾಂಪ್ಲೆಕ್ಸ್ ನ್ನು ಇಂದು ಮಧ್ಯಾಹ್ನ 2 ಗಂಟೆಗೆ ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ಉದ್ಘಾಟಿಸಲಿದ್ದು, ಕೆಲವೇ ದಿನಗಳಲ್ಲಿ ಭಕ್ತರ ಉಪಯೋಗಕ್ಕೆ ಸಿಗಲಿದೆ.

 

Share This Article