ವಿಜಯಪುರ: ರಾಜ್ಯಾದ್ಯಂತ ಶುಕ್ರವಾರ SSLC ಪರೀಕ್ಷೆ ಆರಂಭವಾಗಿದೆ. ಆದರೆ ಪರೀಕ್ಷೆ ಮೊದಲ ದಿನವೇ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಎಸ್‍ಎಸ್‍ಎಲ್‍ಸಿ ಪ್ರಥಮ ಭಾಷೆಯ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ.
ಮುದ್ದೇಬಿಹಾಳ ಪಟ್ಟಣದ ಜಮೀನೊಂದರಲ್ಲಿ ಪ್ರಶ್ನೆ ಪತ್ರಿಕೆ ಹೊರಗೆ ತಂದು ನಕಲು ಮಾಡಿ, ವಿದ್ಯಾರ್ಥಿಗಳಿಗೆ ಕಾಪಿ ಚೀಟಿಗಳನ್ನು ಸಿದ್ಧಪಡಿಸುತ್ತಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಕನ್ನಡ ಪರೀಕ್ಷೆ ಆರಂಭಗೊಂಡ ಒಂದೂವರೆ ಗಂಟೆ ಸಮಯದಲ್ಲಿ ಪ್ರಶ್ನೆಪತ್ರಿಕೆ ಬಹಿರಂಗವಾಗಿತ್ತು. ವಿದ್ಯಾರ್ಥಿಗಳಿಗೆ ನಕಲು ಮಾಡಲು ಚೀಟಿ ಕೊಡುತ್ತಿದ್ದ ಮುದ್ದೇಬಿಹಾಳ ತಾಲೂಕಿನ ಚಿಲಮಿ ಗ್ರಾಮದ ನಿವಾಸಿ ಸುನೀಲ್ ಬಿರಾದಾರನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಈ ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದಾರೆ.
Advertisement
Advertisement
ಮಹಾ ಯಡವಟ್ಟು: ಶಿಕ್ಷಣ ಇಲಾಖೆಯ ಮಹಾ ಯಡವಟ್ಟಿನಿಂದ ಧಾರವಾಡ ಜಿಲ್ಲೆಯ ಕುಂದಗೋಳದ ಶಿವಾನಂದ ಶಾಲೆಯ ಕೆಲ ವಿದ್ಯಾರ್ಥಿಗಳು ಎರಡು ಬಾರಿ ಪರೀಕ್ಷೆ ಬರೆದರು. ಶುಕ್ರವಾರ ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆದ ವೇಳೆ ರೆಗ್ಯುಲರ್ ವಿದ್ಯಾರ್ಥಿಗಳಿಗೆ, ಹೆಚ್ಚುವರಿ ಪ್ರಶ್ನಾಪತ್ರಿಕೆ ವಿತರಣೆ ಮಾಡಿ ಶಿಕ್ಷಕರು ಯಡವಟ್ಟು ಮಾಡಿದ್ದರು. ತಕ್ಷಣ ವಿದ್ಯಾರ್ಥಿಗಳು ಎಚ್ಚೆತ್ತು ಶಿಕ್ಷಕರಿಗೆ ಮನವಿ ಮಾಡಿಕೊಂಡರು ಕೂಡ ಅದೇ ಪ್ರಶ್ನೆ ಪತ್ರಿಕೆಯಿಂದ ಪರೀಕ್ಷೆ ಬರೆಸಲಾಗಿದೆ. ಆದರೆ ಪರೀಕ್ಷೆ ಮುಗಿದ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತೊಮ್ಮೆ ಪ್ರಶ್ನೆಪತ್ರಿಕೆ ನೀಡಿ ಪರೀಕ್ಷೆ ಬರೆಸಿದ್ದಾರೆ.
Advertisement
ಪರೀಕ್ಷಾ ಸಿಬ್ಬಂದಿಯ ಈ ಯಡವಟ್ಟಿನ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಸಿಬ್ಬಂದಿಯನ್ನ ತರಾಟೆ ತೆಗೆದುಕೊಂಡರು. ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇಷ್ಟೆಲ್ಲಾ ನಡೆದರು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.