-ಡಿಕೆಶಿ ಸಿಬಿ’ಐ’ನಿಂದ ಬಚಾವ್?
-ರಿಲೀಫ್ ಖಾತ್ರಿಯಾದ್ರೆ ಡಿಕೆ ಹೊಸ ಆಟ
ಬೆಂಗಳೂರು: ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸುಳಿಯಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲ ತನಿಖೆಗಳಿಂದ ರಿಲೀಫ್ ಸಿಗುತ್ತಾ ಎಂಬ ಪ್ರಶ್ನೆಗೆ ಕೆಲವೊಂದು ಉತ್ತರಗಳು ರಾಜ್ಯ ರಾಜಕೀಯ ಅಂಗಳದಲ್ಲಿ ಹರಿದಾಡುತ್ತಿವೆ.
ಜಾಮೀನು ಪಡೆದು ಹೊರಬಂದ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ಸಾಕ್ಷ್ಯ ಸಂಗ್ರಹಣೆಗೆ ಮುಂದಾಗಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿಕೆ ಶಿವಕುಮಾರ್ ನಡುವೆ 50 ಕೋಟಿ ರೂ.ಯ ವ್ಯವಹಾರ ನಡೆದಿದೆ ಎಂದು ಹೇಳಲಾಗಿತ್ತು. ಈ ಸಂಬಂಧ ಬೆಂಗಳೂರು ಮತ್ತು ದೆಹಲಿ ಸಿಬಿಐ ತಂಡ ಸಾಕ್ಷ್ಯ ಸಂಗ್ರಹಣೆಗೆ ಮುಂದಾಗಿತ್ತು. ಈ ವ್ಯವಹಾರ ಸಂಬಂಧ ಸಣ್ಣ ಸಾಕ್ಷ್ಯ ಸಿಕ್ಕಿದ್ದರೂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲು ಸಿಬಿಐ ಪ್ಲಾನ್ ಮಾಡಿಕೊಂಡಿತ್ತು. ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಹಿಂದೆ ಸರಿದಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
Advertisement
Advertisement
ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ 50 ಕೋಟಿ ರೂ. ನಗದು ಪಡೆದಿದ್ದಾರೆ ಎಂಬುವುದು ಕೇವಲ ಹೇಳಿಕೆಯಾಗಿದ್ದು ಹಣ ಹೇಗೆ ಯಾರಿಂದ? ಯಾರಿಗೆ? ಯಾವ ಮಾರ್ಗದಲ್ಲಿ ವರ್ಗಾವಣೆ ಆಗಿದೆ ಎಂಬುದರ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಿಲ್ಲ. ಇತ್ತ ಸೋಲಾರ್ ಪ್ಲಾಂಟ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಮಾತಿಗೆ ಸೂಕ್ತ ಸಾಕ್ಷ್ಯ ಲಭ್ಯವಾಗಿಲ್ಲ. 1,500 ಎಕ್ರೆ ಪವರ್ ಪ್ಲಾಂಟ್ ನಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ ಮತ್ತು ಮೇಲ್ನೋಟಕ್ಕೆ ಯಾವುದೇ ಅವ್ಯವಹಾರ ನಡೆದಂತೆ ಕಂಡು ಬಂದಿಲ್ಲ. ಓಪನ್ ಟೆಂಡರ್ ಮಾಡಿದರ ಬಗ್ಗೆ ಸರ್ಕಾರದಲ್ಲಿ ದಾಖಲೆಗಳಿವೆ. ಕಲ್ಲಿದ್ದಲು ಖರೀದಿಯಲ್ಲಿಯೂ ಯಾವುದೇ ಅವ್ಯವಹಾರದ ಬಗ್ಗೆ ಸಾಕ್ಷ್ಯವಿಲ್ಲ ಎಂದು ತಿಳಿದು ಬಂದಿದೆ.
Advertisement
Advertisement
ರಿಲೀಫ್ ಸಿಕ್ಕರೆ ಡಿಕೆಶಿ ಮುಂದಿನ ನಡೆ ಏನು?
ಜಾಮೀನು ಪಡೆದು ಹೊರಬಂದ ಡಿಕೆಶಿವಕುಮಾರ್ ಅವರಿಗೆ ಬೆಂಬಲಿಗರು ಅದ್ಧೂರಿ ಸ್ವಾಗತ ನೀಡಿದ್ದರು. ಡಿಕೆ ಶಿವಕುಮಾರ್ ಈ ಮೂಲಕ ಪರೋಕ್ಷವಾಗಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದರು. ಇತ್ತ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಎಲ್ಲ ತನಿಖೆಗಳಿಂದ ಡಿಕೆ ಶಿವಕುಮಾರ್ ರಿಲೀಫ್ ಪಡೆದುಕೊಂಡರೆ ಕಾಂಗ್ರೆಸ್ ಪಟ್ಟಾಭಿಷೇಕ ಮಾಡಲು ಪ್ಲಾನ್ ಮಾಡಿಕೊಂಡಿದೆ. ಒಂದು ವೇಳೆ ಸಿಬಿಐ ಪ್ರಕರಣವನ್ನು ಕೈಬಿಟ್ಟರೆ ಡಿಕೆ ಶಿವಕುಮಾರ್ ಮತ್ತಷ್ಟು ಪ್ರಬಲ ನಾಯಕರಾಗುತ್ತಾರೆ ಎಂಬ ಮಾತು ಕಾಂಗ್ರೆಸ್ ಅಂಗಳದಲ್ಲಿ ಕೇಳಿ ಬರುತ್ತಿದೆ.
ಇದನ್ನೇ ಬಂಡವಾಳನ್ನಾಗಿ ಮಾಡಿಕೊಂಡು ಡಿಕೆ ಶಿವಕುಮಾರ್ ತಮ್ಮ ಹಳೇ ಖದರ್ ಮೂಲಕ ಉಪಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ತಾವು ಜೈಲಿಗೆ ಹೋಗಿಬಂದಿದ್ದನ್ನೇ ಲಾಭವನ್ನಾಗಿ ಮಾಡಿಕೊಂಡು ಮತಯಾಚಿಸುವ ಸಾಧ್ಯತೆಗಳಿವೆ. ಅನರ್ಹ ಶಾಸಕರ ಕ್ಷೇತ್ರಗಳಿಗೆ ಭೇಟಿ, ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗೋದು ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಜನತೆಗೆ ಹತ್ತಿರವಾಗುವ ಮೂಲಕ ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಬಲ ನಾಯಕನಾಗಿ ಬೆಳೆಯಲು ಡಿಕೆ ಶಿವಕುಮಾರ್ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.