ಕನ್ನಡ ಚಿತ್ರರಂಗದಲ್ಲಿ ಸೆಲೆಬ್ರಿಟಿಗಳಿಗಾಗಿ ಹಲವರು ಕ್ರಿಕೆಟ್ ಪಂದ್ಯಾವಳಿಗಳಿವೆ. ಸಿಸಿಎಲ್, ಕೆಸಿಸಿ, ಟಿಪಿಎಲ್ ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ರಿಕೆಟ್ ಟೂರ್ನಮೆಂಟ್‌ಗಳಿವೆ. ಆದರೆ ಕಿರುತೆರೆ ಹಾಗೂ ಹಿರಿತೆರೆ ಮಹಿಳೆಯರಿಗಾಗಿ ಯಾವುದೇ ಕ್ರಿಕೆಟ್ ಪಂದ್ಯಾವಳಿಗಳಿಲ್ಲ. ಹೀಗಾಗಿ ಕ್ರಿಯೇಟಿವ್ ಫ್ರೆಂಡ್ಸ್ ಕಂಪನಿ ‘ಕ್ವೀನ್ ಪ್ರೀಮಿಯರ್ ಲೀಗ್’ (Queens Premiere League) ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡ ಸಿನಿಮಾ, ಸೀರಿಯಲ್, ಮಾಡೆಲ್ ಭಾಗವಹಿಸಲು ವೇದಿಕೆ ಕಲ್ಪಿಸಿಕೊಡಲಾಗಿದೆ. ಅದರ ಭಾಗವಾಗಿ ತಂಡದ ಲೋಗೋ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್ ಸುರೇಶ್, ಉದ್ಯಮಿ ಪೂರ್ವಂಕರ್ ಸಿಇಒ ಮಲ್ಲಣ್ಣ, ಅಂತರಾಷ್ಟ್ರೀಯ ಕ್ರೀಡಾಪಟು ವೃಂದಾ ದಿನೇಶ್, ಮಹಿಳಾ ಕ್ರಿಕೆಟರ್‌ಗಳಾದ ಪುಷ್ಪ ಕುಮಾರಿ, ಪ್ರತ್ಯುಷ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
Advertisement
Advertisement
ಲೋಗೋ ಬಿಡುಗಡೆ ಮಾಡಿದ ಪುಷ್ಪಕುಮಾರಿ, ಕ್ರಿಕೆಟ್ ಹುಡುಗರಿಗೆ ಮಾತ್ರ ಎನ್ನುವ ಕಾಲವಿತ್ತು. ಆದರೆ ನಾವು ಅಂದು ಛಲ ಬಿಡದೆ ಆಡಿದ್ದೇವೆ. ಮಹಿಳೆಯರಿಗಾಗಿ ಈ ರೀತಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಖುಷಿ ಎಂದರು. ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಜೂನ್ ತಿಂಗಳಲ್ಲಿ ಈ ಪಂದ್ಯಾವಳಿ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಕಲಾವಿದರ ಜೊತೆಗೆ ಆ್ಯಂಕರ್ಸ್, ಮಾಡೆಲ್‌ಗೆ ಇಲ್ಲಿ ಕ್ರಿಕೆಟ್ ಆಡಲು ಅವಕಾಶವಿದೆ. ಇವರನ್ನು ನೋಡಿಕೊಂಡು ಹೊಸ ಜನರೇಷನ್ ಕ್ರಿಕೆಟ್ ಆಡಲು ಪ್ರೇರಣೆಯಾಗಲಿ. ಈ ಪಂದ್ಯಾವಳಿ ನಾವು ಮಾಡುತ್ತಿಲ್ಲ. ಇದರಿಂದ ಬಂದ ದುಡ್ಡನ್ನು ನನ್ನ ತಂಡ ರಂಗಸೌರಭಕ್ಕೆ ಮೀಸಲು ಇಡಲಾಗುತ್ತದೆ. ಶಾಲಾ ಕಾಲೇಜು ಮಟ್ಟದಿಂದಲೇ ಹಲವು ಪ್ರತಿಭೆಗಳನ್ನು ರಂಗಭೂಮಿಗೆ ಕರೆತಂದು ನಟನೆಯನ್ನು ಕಲಿಸುವ ಕೆಲಸವನ್ನು ರಂಗಸೌರಭ ಮಾಡುತ್ತಿದೆ. ಹೀಗಾಗಿ ಈ ಕ್ರಿಕೆಟ್ ತಂಡದಿಂದ ಬಂದ ಲಾಭವನ್ನು ಇಲ್ಲಿಗೆ ನೀಡಲಾಗುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲು ಹೆಚ್ಚು ನಟಿಮಣಿಯರು ಹೆಚ್ಚಾಗಿ ಕೈ ಜೋಡಿಸಬೇಕು ಎಂದರು.
Advertisement
Advertisement
ನಟಿ ಭವ್ಯಾ ಗೌಡ (Bhavya Gowda) ಮಾತನಾಡಿ, ಈ ಕಾನ್ಸೆಪ್ಟ್ ನನ್ನ ಮೈಂಡ್‌ನಲ್ಲಿ ತುಂಬಾ ತಿಂಗಳಿನಿಂದ ಇತ್ತು. ಆರ್‌ಸಿಬಿ ಹುಡುಗಿಯರು ಯಾವಾಗ ಕಪ್ ಎತ್ತಿದರೋ ಆಗ ನಮ್ಮ ಜೋಶ್ ಜಾಸ್ತಿಯಾಯ್ತು. ಹೆಣ್ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋದನ್ನು ತೋರಿಸಲು ಶುರು ಮಾಡಿದ್ದೇವೆ. ಈ ಕ್ರಿಕೆಟ್ ಪಂದ್ಯಾವಳಿಯನ್ನೂ ಒಂದೊಳ್ಳೆಯ ಉದ್ದೇಶ ಇಟ್ಟುಕೊಂಡು ಮಾಡುತ್ತಿದ್ದೇವೆ. ಹೆಣ್ಮಕ್ಕಳಿಗೆ ಬ್ಯಾಟು ಬಾಲ್ ಹಿಡಿದು ಫೀಲ್ಡ್‌ಗೆ ಇಳಿಯುತ್ತಿದ್ದೇವೆ. ಗಂಡು ಮಕ್ಕಳು ಚಿಯರ್ ಅಪ್ ಮಾಡಲು ರೆಡಿಯಾಗಿ ಎಂದರು.
ಕನ್ನಡ ಸಿನಿಮಾ ಪ್ರೇಮಿಗಳನ್ನು ರಂಜಿಸುವ ಕ್ವೀನ್ಸ್ ಗಳ ಮನರಂಜನೆಗಾಗಿ ಹಾಗೂ ಒಂದೊಳ್ಳೆ ಉದ್ದೇಶ ಇಟ್ಟುಕೊಂಡು ಈ ಪಂದ್ಯಾವಳಿ ನಡೆಸಲಾಗುತ್ತಿದೆ. ಕ್ವೀನ್ ಪ್ರೀಮಿಯರ್ ಲೀಗ್ ಆಯೋಜಕರ ಬಳಗದಲ್ಲಿ ಮಹೇಶ್ ಕುಮಾರ್, ಪ್ರಮೋದ್ ಶೆಟ್ಟಿ, ಭವ್ಯ ಗೌಡ, ಸಾತ್ವಿಕ್, ಸಂತೋಷ್, ಚೇತನ್, ಸಚಿನ್ ಹಾಗೂ ಪ್ರೇಮ್ ಇದ್ದಾರೆ. ಸದ್ಯ ತಂಡದ ಲೋಗೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ಮುಂದಿನ ದಿನಗಳಲ್ಲಿ ಜೆರ್ಸಿ ಲಾಂಚ್, ಟ್ರೋಫಿ ಬಿಡುಗಡೆ ಮಾಡಲಾಗುತ್ತದೆ.