Connect with us

Latest

ಡಿಸಿ ಯಾಗಿ ಅಧಿಕಾರ ಸ್ವೀಕರಿಸಿದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

Published

on

ಹೈದರಾಬಾದ್: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬುಧವಾರದಂದು ಆಂಧ್ರ ಪ್ರದೇಶ ಸರ್ಕಾರದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ವಿಜಯವಾಡ ಹೊರವಲಯದ ಗೊಲ್ಲಾಪುಡಿಯಲ್ಲಿರುವ ಭೂ ಆಡಳಿತದ ಮುಖ್ಯ ಆಯುಕ್ತರ ಕಚೇರಿಯಲ್ಲಿ ಪಿವಿ ಸಿಂಧು ಕರ್ತವ್ಯಕ್ಕೆ ರ್ಸೇರ್ಪಡೆಗೊಂಡ್ರು. ವಿಶೇಷ ಮುಖ್ಯ ಕಾರ್ಯದರ್ಶಿ ಅನಿಲ್ ಚಂದ್ರ ಪುನೇತಾ ಅವರಿಗೆ ಸಿಂಧು ರಿಪೋರ್ಟ್ ಮಾಡಿಕೊಂಡ್ರು. ನಂತರ ಹಿರಿಯ ಐಎಎಸ್ ಅಧಿಕಾರಿ ಎಂ ಜಗನ್ನಾಥಂ ಅವರ ಸಮ್ಮುಖದಲ್ಲಿ ರೋಸ್ಟರ್‍ನಲ್ಲಿ ಸಹಿ ಹಾಕುವ ಮೂಲಕ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ರು. ಕಚೇರಿಯ ಸಿಬ್ಬಂದಿ ಹೂಗುಚ್ಛ ಹಾಗೂ ಹಾರಗಳನ್ನ ಹಾಕಿ ಬ್ಯಾಡ್ಮಿಂಟನ್ ತಾರೆಗೆ ಅದ್ಧೂರಿ ಸ್ವಾಗತ ಕೋರಿದ್ರು.

ಇದೇ ವೇಳೆ ಮಾತನಾಡಿದ ಸಿಂಧು, ಜಿಲ್ಲಾಧಿಕಾರಿ ಆಗಿ ಆಂಧ್ರಪ್ರದೇಶ ಸರ್ಕಾರದ ಭಾಗವಾಗಿರೋದಕ್ಕೆ ನನಗೆ ತುಂಬಾ ಖುಷಿಯಾಗಿದೆ. ನನ್ನ ಕೆಲಸಕ್ಕೆ ಸೂಕ್ತ ನ್ಯಾಯ ಒದಗಿಸುತ್ತೇನೆ ಅಂತ ಭರವಸೆ ನೀಡಿದ್ರು. ಇದರ ಜೊತೆಗೆ ಬ್ಯಾಡ್ಮಿಂಟನ್ ಆಟವನ್ನು ಮುಂದುವರೆಸುವುದಾಗಿ ಹೇಳಿದ್ರು.

ಮುಂಬರುವ ಪಂದ್ಯಗಳಿಗಾಗಿ ನಾನು ಸದ್ಯ ಪುಲೆಲಾ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ನಾನು ಎಲ್ಲಾ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಟೂರ್ನಿಮೆಂಟ್‍ಗಳಲ್ಲಿ ಭಾಗವಹಿಸುತ್ತೇನೆ. ದೇಶಕ್ಕೆ ಮತ್ತಷ್ಟು ಪ್ರಶಸ್ತಿಗಳನ್ನ ತಂದುಕೊಡುತ್ತೇನೆ ಎಂಬ ಭರವಸೆ ನನಗಿದೆ ಎಂದು ಪಿವಿ ಸಿಂಧು ಹೇಳಿದ್ದಾರೆ.

ಜುಲೈ 27 ರಂದು ಆಂಧ್ರಪ್ರದೇಶ ಸರ್ಕಾರ ಪಿವಿ ಸಿಂಧು ಅವರನ್ನು ಜಿಲ್ಲಾಧಿಕಾರಿಯಾಗಿ  ನೇಮಿಸಿ ಆದೇಶ ಹೊರಡಿಸಿತ್ತು. ಸ್ವತಃ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ನೇಮಕಾತಿ ಪತ್ರವನ್ನ ಸಿಂಧು ಅವರಿಗೆ ನೀಡಿದ್ದರು. ಸಿಂಧು ಅವರು ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸಿ ಕರ್ತವ್ಯಕ್ಕೆ ಹಾಜರಾಗಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು.

ಪಿವಿ ಸಿಂಧು ಅವರನ್ನ ಸರ್ಕಾರದಲ್ಲಿ ಗ್ರೂಪ್-1 ಅಧಿಕಾರಿಯಾಗಿ ನೇಮಕ ಮಾಡಲು ಮೇ ತಿಂಗಳಲ್ಲಿ ರಾಜ್ಯ ಸಾರ್ವಜನಿಕ ಸೇವೆಗಳ ಕಾಯ್ದೆಗೆ ತಿದ್ದುಪಡಿ ತಂದು ಮಸೂದೆಯನ್ನು ಪಾಸ್ ಮಾಡಲಾಗಿತ್ತು. ತೆಲಂಗಾಣ ಕೂಡ ಸಿಂಧುಗೆ ಉದ್ಯೋಗ ಅವಕಾಶ ನೀಡಿತ್ತು. ಆದ್ರೆ ಆಂಧ್ರಪ್ರದೇಶ ತನ್ನ ಪೋಷಕರ ಮೂಲ ಸ್ಥಳವಾಗಿರೋದ್ರಿಂದ ಸಿಂಧು ಆಂಧ್ರಪ್ರದೇಶ ಸರ್ಕಾರದ ಉದ್ಯೋಗವನ್ನ ಸ್ವೀಕರಿಸಿದ್ದಾರೆ.

ಪಿವಿ ಸಿಂಧು ಸದ್ಯ ಆಗಸ್ಟ್ 21ರಿಂದ ಗ್ಲಾಸ್ಗೋನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‍ಶಿಪ್‍ಗಾಗಿ ತಯಾರಾಗುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *