ಕೌಲಾಲಂಪುರ: ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು (PV Sindhu) ಅವರು ಮಲೇಷ್ಯಾ ಮಾಸ್ಟರ್ಸ್ (Malaysia Masters 2024) ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಚೀನಾದ ವಾಂಗ್ ಝಿಯಿ ವಿರುದ್ಧ ಸೋತು ನಿರಾಸೆ ಮೂಡಿಸಿದ್ದಾರೆ.
ಚೀನಾದ ಪ್ರತಿಸ್ಪರ್ಧಿ ವಾಂಗ್ ಝಿಯಿ (Wang Zhi Yi) ವಿರುದ್ಧ 16-21, 21-5, 21-16 ಸೆಟ್‌ಗಳಿಂದ ಸಿಂಧು ಸೋತಿದ್ದು, ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಗಿದೆ. ಮೊದಲ ಸೆಟ್‌ನಲ್ಲಿ 21-16 ಪಾಯಿಂಟ್ಸ್ ಗಳಿಸುವ ಮೂಲಕ 5 ಪಾಯಿಂಟ್ಸ್‌ಗಳಲ್ಲಿ ಮುನ್ನಡೆ ಸಾಧಿಸಿದ್ದ ಪಿ.ವಿ ಸಿಂಧು ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದರು. ಆದ್ರೆ 2ನೇ ಸೆಟ್‌ನಲ್ಲಿ ಚೀನಾದ ಆಟಗಾರ್ತಿ ಭರ್ಜರಿ ಕಮ್‌ಬ್ಯಾಕ್ ಮಾಡಿದರು. ಇದರಿಂದ ಸಿಂಧು 5-21 ಪಾಯಿಂಟ್ಸ್ ಗಳಿಸಿ ತೀವ್ರ ಹಿನ್ನಡೆ ಅನುಭವಿಸಿದ್ದರು. ಬಳಿಕ 3ನೇ ಸೆಟ್‌ನಲ್ಲೂ ಸಿಂಧುಗೆ ಅವಕಾಶ ನೀಡದ ವಾಂಗ್ ಝಿಯಿ 21-16 ಪಾಯಿಂಟ್ಸ್‌ಗಳಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟರು.
ಶನಿವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ (Busanan Ongbamrungphan) ವಿರುದ್ಧ ಸಿಂಧು 13-21, 21-16, 21-12 ಸೆಟ್‌ಗಳಿಂದ ಗೆಲುವು ಸಾಧಿಸಿದ್ದರು. ಇದಕ್ಕೂ ಮುನ್ನ ವಿಶ್ವದ 6ನೇ ಶ್ರೇಯಾಂಕಿತ ಆಟಗಾರ್ತಿಯಾದ ಚೀನಾದ ಹಾನ್ ಯೂ ಅವರನ್ನ ಕ್ವಾರ್ಟರ್ ಫೈನಲ್‌ನಲ್ಲಿ ಮಣಿಸಿದ್ದರು. ಇದನ್ನೂ ಓದಿ: ವಿಶ್ವಕಪ್ ಒಂದು ಪಂದ್ಯಕ್ಕೆ ಕೊಹ್ಲಿ ಗೈರು ಸಾಧ್ಯತೆ
ಕಳೆದ 2 ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದ ಸಿಂಧು ಯಾವುದೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು. ಇದಕ್ಕೂ ಮುನ್ನ ಕಳೆದ ವರ್ಷ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್‌ನಲ್ಲಿ ರನ್ನರ್ ಅಪ್ ಆಗಿದ್ದರು. 2022ರಲ್ಲಿ ಸಿಂಗಾಪುರ ಓಪನ್ಸ್ (Singapore Opens) ಟ್ರೋಫಿ ಗೆದ್ದಿದ್ದರು. ಇದೀಗ ಮತ್ತೆ ಸೋಲಿನ ಅಭಿಯಾನ ಮುಂದುವರಿಸಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾಗೆ ಗಾಯದ ಸಮಸ್ಯೆ; ಒಸ್ಟ್ರಾವಾ ಗೋಲ್ಡನ್ ಸ್ಪೈಕ್-2024ನಿಂದ ಹೊರಕ್ಕೆ