ಜೈಪುರ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು (P.V Sindhu) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ (Udaipur) ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಉದ್ಯಮಿ ವೆಂಕಟ್ ದತ್ತಾ ಸಾಯಿ ಅವರೊಂದಿಗೆ ಸಿಂಧು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಪಿವಿ ಸಿಂಧು ಮತ್ತು ವೆಂಕಟ್ ಮದುವೆಯ ಮೊದಲ ಫೋಟೋ ಇದೀಗ ವೈರಲ್ ಆಗಿದೆ. ಈ ನವ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
Pleased to have attended the wedding ceremony of our Badminton Champion Olympian PV Sindhu with Venkatta Datta Sai in Udaipur last evening and conveyed my wishes & blessings to the couple for their new life ahead.@Pvsindhu1 pic.twitter.com/hjMwr5m76y
— Gajendra Singh Shekhawat (@gssjodhpur) December 23, 2024
ಡಿಸೆಂಬರ್ 22 ರಂದೇ ಸಿಂಧು ಮತ್ತು ವೆಂಕಟ್ ಮದುವೆಯಾಗಿದ್ದಾರೆ. ಅವರ ವಿವಾಹ ಸಮಾರಂಭವನ್ನು ಖಾಸಗಿಯಾಗಿ ಇರಿಸಲಾಗಿರುವುದರಿಂದ ಸಿಂಧು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಹಂಚಿಕೊಳ್ಳಲಾಗಿಲ್ಲ. ಈ ಮದುವೆಯಲ್ಲಿ ಭಾಗಿಯಾಗಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನವ ಜೋಡಿಯ ಮದುವೆಯ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ನವದಂಪತಿಗಳಿಗೆ ಶುಭಕೋರಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ.
ಡಿ.14ರಂದು ಇಬ್ಬರ ನಿಶ್ಚಿತಾರ್ಥ ನಡೆದಿತ್ತು. ಇದೀಗ ಆತ್ಮೀಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿರುವ ಈ ಜೋಡಿ ಮಂಗಳವಾರ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಆರತಕ್ಷತೆಯನ್ನು ಏರ್ಪಡಿಸಿದೆ.
ಪಿವಿ ಸಿಂಧು ಪತಿ ಯಾರು?
ಪಿವಿ ಸಿಂಧು ಅವರ ಪತಿ ವೆಂಕಟ್ ದತ್ತಾ ಸಾಯಿ ಅವರು ಫೌಂಡೇಶನ್ ಆಫ್ ಲಿಬರಲ್ ಮತ್ತು ಮ್ಯಾನೇಜ್‌ಮೆಂಟ್ ಎಜುಕೇಶನ್‌ನಿಂದ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್‌ನಲ್ಲಿ ಪದವಿ ಪಡೆದಿದ್ದಾರೆ. 2018 ರಲ್ಲಿ, ಅವರು ಫ್ಲೇಮ್ ವಿಶ್ವವಿದ್ಯಾಲಯದಿಂದ ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಬಿಬಿಎ ಮಾಡಿದ್ದರು. ಬೆಂಗಳೂರಿನ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿಯಿಂದ ಡಾಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಅವರು ಪೊಸಿಡೆಕ್ಸ್ ಟೆಕ್ನಾಲಜಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.