Connect with us

Cinema

ಪಿ.ವಿ.ಸಿಂಧು ಬಯೋಪಿಕ್‍ನಲ್ಲಿ ಮಿಂಚಲಿದ್ದಾರೆ ದೀಪಿಕಾ

Published

on

ಬೆಂಗಳೂರು: ಭಾರತದ ಬ್ಯಾಡ್ಮಿಂಟನ್ ತಾರೆ, ಚಿನ್ನದ ಹುಡುಗಿ ಪಿ.ವಿ.ಸಿಂಧು ಬಯೋಪಿಕ್‍ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡಕೋಣೆ ನಟಿಸಲಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಪಿ.ವಿ.ಸಿಂಧು ಅವರು, ಬಾಲಿವುಡ್ ನಟ ಸೋನು ಸೂದ್ ಇತ್ತೀಚೆಗೆ ಚಿತ್ರದ ಹಕ್ಕನ್ನು ಪಡೆದುಕೊಂಡಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಅಷ್ಟೇ ಅಲ್ಲದೆ ಬಯೋಪಿಕ್ ಅನ್ನು ಚೆನ್ನಾಗಿ ತೆರೆಯ ಮೇಲೆ ತರಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ನನ್ನ ಪಾತ್ರವನ್ನು ದೀಪಿಕಾ ಪಡುಕೋಣೆ ನಿರ್ವಹಿಸಿದರೆ ಉತ್ತಮವಾಗಿರುತ್ತದೆ. ಅವರು ಉತ್ತಮ ನಟಿ. ಈಗಾಗಲೇ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಎಲ್ಲರಂತೆ ನಾನೂ ಸಹ ಸಿನಿಮಾ ನೋಡಲು ಎದುರು ನೋಡುತ್ತಿದ್ದೇನೆ ಎಂದು ಸಿಂಧು ಹೇಳಿದ್ದಾರೆ.

ನನ್ನ ಬಗ್ಗೆ ಸಿನಿಮಾ ನಿರ್ಮಾಣವಾಗುತ್ತಿರವುದು ಖುಷಿ ತಂದಿದೆ. ಆದರೆ ನನ್ನ ಮೊದಲ ಆದ್ಯತೆ ಬ್ಯಾಡ್ಮಿಂಟನ್. ಹೀಗಾಗಿ ಅಭ್ಯಾಸ ಕೂಡ ನಡೆಸುತ್ತಿದ್ದೇನೆ. ನಟಿ ದೀಪಿಕಾ ಪಡುಕೋಣೆ ಸ್ವತಃ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ್ತಿ ಎನ್ನುವುದು ನನಗೆ ತಿಳಿದಿದೆ. ಅವರ ತಂದೆ, ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರು ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅವರು ಬ್ಯಾಡ್ಮಿಂಟನ್ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಪುತ್ರಿ, ನಟಿ ದೀಪಿಕಾ ಪಡುಕೋಣೆ ಈ ಪಾತ್ರಕ್ಕೆ ಸೂಕ್ತ ಎನ್ನುವುದು ನನ್ನ ಅಭಿಪ್ರಾಯ. ಆದರೆ ಅಂತಿಮ ನಿರ್ಧಾರ ಸಿನಿಮಾ ನಿರ್ಮಾಣ ಮಾಡುವವರದ್ದು ಎಂದು ತಿಳಿಸಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಆಟಗಾರ್ತಿ ಪಿ.ವಿ.ಸಿಂಧು, ಇತಿಹಾಸ ಸೃಷ್ಟಿಸಿದ್ದಾರೆ. 2016ರ ಒಲಿಂಪಿಕ್ಸ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು, ಸದ್ಯ ಮುಂದಿನ ವರ್ಷದ ಒಲಿಂಪಿಕ್ಸ್‍ನಲ್ಲಿ ಚಿನ್ನಕ್ಕೆ ಗುರಿಯಿಟ್ಟಿದ್ದು, ಆ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈ ಹಿಂದೆ ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದಾಗಲೇ ಅವರ ಜೀವನಾಧಾರಿತ ಸಿನಿಮಾ ನಿರ್ಮಾಣದ ಸುದ್ದಿ ಹರಿದಾಡುತ್ತಿತ್ತು. ಆದರೆ ಅದರ ಬಗ್ಗೆ ಯಾವುದೇ ಸ್ಪಷ್ಟವಾದ ಸುದ್ದಿ ಎಲ್ಲೂ ಹೊರ ಬರಲೇ ಇಲ್ಲ. ಈಗ ಸಿನಿಮಾ ನಿರ್ಮಾಣವು ಸ್ಪಷ್ಟವಾಗಿದೆ.

ಸಿಂಧು ಅವರ ತರಬೇತುದಾರ ಪುಲ್ಲೇಲ ಗೋಪಿಚಂದ್ ಪಾತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸುವ ಸಾಧ್ಯತೆಯಿದೆ. ಸಿನಿಮಾ ಆರಂಭಿಕ ಹಂತದಲ್ಲಿದ್ದು, ಪಾತ್ರದ ಆಯ್ಕೆ ನಡೆಯುತ್ತಿದೆ.

ತಮ್ಮ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅವರು ಅಭಿನಯಿಸುವ ಕುರಿತು ಪಿ.ವಿ.ಸಿಂಧು ಅವರ ತರಬೇತುದಾರ ಪುಲ್ಲೇಲ್ಲಾ ಗೋಪಿಚಂದ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ಷಯ್ ಎಂದರೆ ನನಗೆ ಇಷ್ಟ. ಅವರು ನನ್ನ ಪಾತ್ರದಲ್ಲಿ ಅಭಿನಯಿಸಿದರೆ ತುಂಬಾ ಚೆನ್ನಾಗಿರುತ್ತದೆ ಎಂದು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *