ಮಂಗಳೂರು: ಸುಳ್ಳು ಆರೋಪದ ಮೇರೆಗೆ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಭಾರತದ ಅಬೂಬಕ್ಕರ್, ಇಂದು ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯ ಕಾನೂನು ಹೋರಾಟದ ಮೂಲಕ ಮರಳಿ ಮನೆಗೆ ಬಂದಿದ್ದಾರೆ.
ಘಟನೆಯ ವಿವರ?:
ಕರಾವಳಿಯ ಪುತ್ತೂರು ಮೂಲದ ಅಬೂಬಕ್ಕರ್ ರವರು ಸೌದಿ ಅರೇಬಿಯಾದ ರಿಯಾದಿನಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಎಂದಿನಂತೆ ತಮ್ಮ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು ಕಾರನ್ನು ನಿಲ್ಲಿಸಿ ರಿಯಾದಿನಲ್ಲಿರುವ ಶ್ರೀಲಂಕಾ ರಾಯಭಾರಿ ಕಚೇರಿಗೆ ಬಾಡಿಗೆ ಗೊತ್ತು ಮಾಡಿ ಪ್ರಯಾಣ ಬೆಳೆಸಿದ್ದಾರೆ. ಅದರಂತೆ ಆ ಮಹಿಳಾ ಪ್ರಯಾಣಿಕರನ್ನು ಶ್ರೀಲಂಕನ್ ರಾಯಭಾರಿ ಕಛೇರಿಯಲ್ಲಿ ಇಳಿಸಿ, ತನ್ನ ಬಾಡಿಗೆ ಹಣವನ್ನು ಕೇಳಿದ್ದಾರೆ. ಆಗ ಪ್ರಯಾಣಿಕರು ನಾವು ಕೆಲವೇ ಕ್ಷಣದಲ್ಲಿ ಹಿಂದಿರುಗಲಿದ್ದೇವೆ. ಆದ್ದರಿಂದ ನಿಮ್ಮ ಮೊಬೈಲ್ ನಂಬರ್ ನೀಡಿ ಎಂದು ಕೇಳಿದ್ದಾರೆ. ಅಬೂಬಕ್ಕರ್ ರವರು ತಮ್ಮ ನಂಬರನ್ನು ಕೊಟ್ಟು ಪ್ರಯಾಣಿಕರಿಗಾಗಿ ಕಾಯುತ್ತಿದ್ದರು.
ಕೆಲವು ಗಂಟೆಯ ನಂತರ ಫೋನ್ ಮಾಡಿ ಇಬ್ಬರಲ್ಲಿ ಒಬ್ಬ ಮಹಿಳೆ ತನ್ನನ್ನು ಮನೆಗೆ ಬಿಡಲು ಹೇಳಿದ್ದಾಳೆ. ಅದೇ ರೀತಿ ಶ್ರೀಲಂಕನ್ ಪ್ರಜೆಯಾದ ಅವಳನ್ನು ಕರೆದು ಕೊಂಡು ಹೋಗುವಾಗ ರಸ್ತೆ ಮಧ್ಯದಲ್ಲಿ ಪೊಲೀಸ್ ತಪಾಸಣೆ ನಡೆಯುತ್ತಿತ್ತು. ಪೊಲೀಸರು ಇವರ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿದ್ದ ಶ್ರೀಲಂಕನ್ ಮಹಿಳೆಯ ಬಳಿ ಯಾವುದೇ ಇಕಾಮ (ವಾಸ್ತವ್ಯ ಪರವಾನಿಗೆ) ಇರಲಿಲ್ಲ. ಇದರಿಂದ ಸಂಶಯಗೊಂಡ ಪೊಲೀಸರು ಅನೈತಿಕ ಸಂಬಂಧ ಸಂಶಯದ ಮೇಲೆ ಇಬ್ಬರನ್ನು ಬಂಧಿಸಿದ್ದರು.
ಅವರಿಬ್ಬರನ್ನು ಅಲ್ಲಿಂದ ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು ಅಬೂಬಕ್ಕರ್ ರವರನ್ನು ಬಾಂಗ್ಲಾದೇಶದವರೆಂದು ಎಫ್‍ಐಆರ್ ಹಾಕಿ, ಹೆಣ್ಣು ಮಕ್ಕಳ ಕಳ್ಳ ಸಾಗಾಣೆಯ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲು ಶಿಕ್ಷೆಗೆ ಒಳಪಡಿಸಿದ್ದಾರೆ. ಇನ್ನು ಭಾರತದಲ್ಲಿ ಅಬೂಬಕ್ಕರ್ ರವರ ಮನೆಯವರು ಇವರ ಬಿಡುಗಡೆಗಾಗಿ ಸ್ಥಳೀಯ ಸಚಿವರು ಮತ್ತು ಶಾಸಕರನ್ನು ಸಂಪರ್ಕಿಸಿದರು ಯಾವುದೇ ಪ್ರಯೋಜನವಾಗಲಿಲ್ಲ .
ಈ ವಿಷಯವನ್ನು ಅರಿತ ಸೋಶಿಯಲ್ ಫೋರಂನ ಉಸ್ಮಾನ್ ಕುಂಜತ್ತೂರು, ಶರೀಫ್ ಕಬಕ, ಸಿರಾಜ್ ಸಜಿಪ ಮತ್ತು ಅಬ್ದುಲ್ ಸಾಬಿತ್ ಬಜ್ಪೆ ನೇತೃತ್ವದ ತಂಡವನ್ನು ರಚಿಸಿ ಜೈಲಿಗೆ ಹೋಗಿ ಅವರನ್ನು ಸಂಪರ್ಕಿಸಿ ಅವರಿಂದ ನಡೆದ ನೈಜ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ಅವರಿಗೆ ಆತ್ಮ ಸ್ಥೈರ್ಯ ನೀಡಿದ್ದಾರೆ. ಹಾಗೇ ಅಬೂಬಕ್ಕರ್ ಕಂಪನಿಯ ಮಾಲೀಕರನ್ನು ಸಂಪರ್ಕಿಸಿದಾಗ ಮೊದಲಿಗೆ ಉತ್ತಮ ಪ್ರತಿಕ್ರಿಯೆ ನೀಡಿದ ಅವರು ನಂತರ ಅವರು ಸಹ ಇದನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರು.
ಇತ್ತ ಅಬೂಬಕ್ಕರ್ ರವರ ಪಾಸ್ ಪೋರ್ಟ್ ನನ್ನು ಪೊಲೀಸರು ಎಲ್ಲೋ ಕಳೆದುಕೊಂಡಿದ್ದರು. ಮೊತ್ತೊಂದೆಡೆ ಇಕಾಮದ ಅವಧಿಯೂ ಮುಗಿದು ಅಬೂಬಕ್ಕರ್ ರವರಿಗೆ ಜೈಲೇ ಗತಿ ಎಂಬ ಪರಿಸ್ಥಿತಿ ಉಂಟಾಗಿತ್ತು. ಇಂತಹ ಸಂಧಿಗ್ದ ಪರಿಸ್ಥತಿಯಲ್ಲೂ ಹಿಂಜರಿಯದ ಇಂಡಿಯನ್ ಸೋಶಿಯಲ್ ಫೋರಂ ತಂಡವು ಇವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ನಿರಂತರ ಒಂದು ವರ್ಷದಿಂದ ಕಾನೂನು ರೀತಿಯ ಹೋರಾಟ ನಡೆಸುತ್ತ ಬಂದಿತ್ತು. ಕೊನೆಗೂ ಈ ಕಾನೂನು ಹೋರಾಟದಲ್ಲಿ ಜಯಿಸಿ ಇಂಡಿಯನ್ ಸೋಶಿಯಲ್ ಫೋರಂ ತಂಡವು ಅನ್ಯಾಯವಾಗಿ ಸೆರೆಮನೆ ಸೇರಿದ್ದ ಅಬೂಬಕ್ಕರ್ ರವರನ್ನು ಬಿಡುಗಡೆಗೊಳಿಸಿ ಅದೇ ದಿನ ಸ್ವದೇಶಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ.