ಹತ್ತೂರು ಬಿಟ್ಟರೂ ಪುತ್ತೂರು ಬಿಡೆನು ಎಂಬ ಮಾತಿದೆ. ಪುತ್ತೂರು ಎಂದಾಕ್ಷಣ ಮೊದಲು ನೆನಪಾಗುವುದೇ ಮಹಾಲಿಂಗೇಶ್ವರ ದೇವಾಲಯ. ಕ್ಷೇತ್ರದ ಆರಾಧ್ಯದೇವ ಮಹಾಲಿಂಗೇಶ್ವರ ಪುತ್ತೂರಿಗರನ್ನು ಎಲ್ಲಾ ತೊಂದರೆಗಳಿಂದಲೂ ರಕ್ಷಿಸಿದರೆ, ಈ ದೇವರನ್ನು ನಂಬಿ ಬಂದ ಪರವೂರವರನ್ನೂ ಯಾವತ್ತೂ ಕೈಬಿಟ್ಟಿಲ್ಲ ಎಂಬ ನಂಬಿಕೆಯಿದೆ. ಆದರೆ ಈ ಕ್ಷೇತ್ರಕ್ಕೆ ಆನೆಗಳನ್ನು ಕರೆತರುವಂತಿಲ್ಲ. ಇದಕ್ಕೆ ಕಾರಣವೇನು? ಪುತ್ತೂರು ಜಾತ್ರೆ ಪ್ರಸಿದ್ಧಿ ಯಾಕೆ? ದೇವಾಲಯದ ಇತಿಹಾಸವೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಆನೆಗಳಿಗೆ ಪ್ರವೇಶವಿಲ್ಲ:
ಮಹಾಲಿಂಗೇಶ್ವರ ದೇವಾಲಯವು ಸುಮಾರು ಹನ್ನೊಂದು ಅಥವಾ ಹನ್ನೆರಡನೇ ಶತಮಾನಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಈ ದೇವಾಲಯದ ಸುತ್ತಮುತ್ತ ಆನೆ ಬರುವ ಹಾಗಿಲ್ಲ. ಹಾಗೇನಾದರೂ ಅಪ್ಪಿತಪ್ಪಿ ಬಂದಲ್ಲಿ ಅವುಗಳಿಗೆ ಸಾವು ಖಚಿತವೆಂಬ ಪ್ರತೀತಿ ಇದೆ. ಇದಕ್ಕೊಂದು ಪೌರಾಣಿಕ ಇತಿಹಾಸವಿದೆ. ಒಮ್ಮೆ ಗೋವಿಂದ ಭಟ್ಟ ಎಂಬ ಬ್ರಾಹ್ಮಣ ಪೂಜೆ ಮಾಡಲೆಂದು ತಂದ ಶಿವಲಿಂಗವನ್ನು ಈಗಿನ ಮಹಾಲಿಂಗೇಶ್ವರ ನೆಲೆಸಿರುವ ಸ್ಥಳದಲ್ಲಿ ಮರೆತು ನೆಲದ ಮೇಲಿಟ್ಟು ಸ್ನಾನ ಮಾಡಿ ಬಂದರು. ಭೂಮಿಯನ್ನು ಸ್ಪರ್ಶಿಸಿದ ಈ ಮಹಾಲಿಂಗವು ಏನೇ ಮಾಡಿದರೂ ಮೇಲೆತ್ತಲಾಗಲಿಲ್ಲ.
ಶಿವಲಿಂಗವನ್ನು ಎತ್ತಲೇಬೇಕೆಂಬ ಕಾರಣಕ್ಕಾಗಿ ಭಟ್ಟರು ಆನೆಯನ್ನು ಕರೆಸಿ ಶಿವಲಿಂಗಕ್ಕೆ ಹಗ್ಗ ಕಟ್ಟಿ ಎಳೆಸುತ್ತಾರೆ. ಆನೆಯು ಶಿವಲಿಂಗವನ್ನು ಎಳೆಯುತ್ತಿದ್ದಂತೆ ಶಿವಲಿಂಗವೇ ಬೆಳೆಯುತ್ತಾ ಹೋಗುತ್ತದೆ. ಈ ಶಿವಲಿಂಗವೇ ಈಗ ಪೂಜಿಸಲ್ಪಡುತ್ತಿರುವ ಮಹಾಲಿಂಗೇಶ್ವರ. ಆನೆಯು ಮತ್ತೂ ಬಲವಾಗಿ ಶಿವಲಿಂಗವನ್ನು ಎಳೆಯುತ್ತಿದ್ದಂತೆ ಆನೆಯೇ ಛಿದ್ರಛಿದ್ರವಾಗಿ ಎಲ್ಲೆಡೆ ಸಿಡಿದು ಬೀಳುತ್ತದೆ. ಆನೆಯ ಒಂದೊಂದು ಅಂಗಗಳು ಬಿದ್ದ ಒಂದೊಂದು ಸ್ಥಳಕ್ಕೆ ಒಂದೊಂದು ಹೆಸರು ಹುಟ್ಟಿಕೊಂಡಿದೆ ಎಂಬ ಪ್ರತೀತಿ ಇದೆ. ಕೊಂಬು ಬಿದ್ದೆಡೆ ಕೊಂಬೆಟ್ಟು, ತಲೆ ಬಿದ್ದಲ್ಲಿ ತಾಳೆಪ್ಪಾಡಿ, ಕೈ ಬಿದ್ದ ಜಾಗ ಕೇಪಳ ಮತ್ತು ಬಾಲ ಬಿದ್ದ ಸ್ಥಳವನ್ನು ಬೀದಿಮಜಲು ಎಂದು ಕರೆಯಲಾಗುತ್ತದೆ .
ಶಿವಲಿಂಗದ ಈ ಅದ್ಬುತವನ್ನು ಕಂಡ ಅಂದಿನ ಬಂಗರಾಜರು ದೇವರಿಗೆ ಗುಡಿಯನ್ನು ಕಟ್ಟಿಸುತ್ತಾರೆ. ಈ ದೇವಾಲಯದ ಎದುರು ಭಾಗದಲ್ಲಿ ಮೂರು ಕಾಲುಳ್ಳ ನಂದಿ ಇರುವುದು ಇಲ್ಲಿನ ವಿಶೇಷತೆ. ಈ ನಂದಿಯ ಹಿಂದೆ ಒಂದು ವಿಶೇಷ ಕಥೆ ಇದೆ. ಈ ಪ್ರದೇಶದ ಜನರು ಬೆಳೆಯುತ್ತಿದ್ದ ಭತ್ತದ ಪೈರನ್ನು ಪ್ರತೀ ಬಾರಿಯೂ ಒಂದು ಬಸವ ತಿಂದು ನಾಶ ಮಾಡುತ್ತಿದ್ದು, ಕಾದು ಕುಳಿತ ರೈತರು ಬಸವನ ಕಾಲಿಗೆ ಹೊಡೆದಾಗ ಬಸವನ ಕಾಲು ಮುರಿಯುತ್ತದೆ. ಕಾಲು ಮುರಿದ ಬಸವ ಕಣ್ಣೀರಿಡುತ್ತಾ ಮಹಾಲಿಂಗೇಶ್ವರನ ಮುಂದೆ ಬಂದು ನಿಲ್ಲುತ್ತದೆ.
ಬಸವನ ಕಣ್ಣೀರು ಕಂಡ ಈಶ್ವರ ಮುಂದೆ ನಿನಗೆ ಯಾರಿಂದಲೂ ತೊಂದರೆ ಆಗದಿರಲು ಹಾಗೂ ನಿನ್ನನ್ನು ಎಲ್ಲರೂ ಪೂಜಿಸುವಂತಾಗಲಿ ಎಂದು ಬಸವನನ್ನು ಕಲ್ಲಾಗಿ ಮಾಡುತ್ತಾನೆ. ಈಗ ನಾವು ನೋಡುತ್ತಿರುವ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಮುಂದೆ ಇರುವ ನಂದಿಯ ಒಂದು ಕಾಲು ಮುರಿದಿರುವುದನ್ನು ಕಾಣಬಹುದು. ಮುರಿದ ಬಸವನ ಕಾಲು ಈಗಲೂ ಪಕ್ಕದ ಪೈರಿನ ಹೊಲದ ಮಧ್ಯೆ ಇದೆ ಎಂಬ ನಂಬಿಕೆ ಇದೆ. ಅಲ್ಲದೇ ಪ್ರತಿದಿನ ಮಧ್ಯಾಹ್ನ ಪೂಜೆಯ ವೇಳೆಗೆ ದೇಗುಲದ ಬಸವ ದೇವಾಲಯದ ಎದುರು ಹಾಜರಾಗುತ್ತದೆ. ದೇವರಿಗೆ ಕೈಮುಗಿಯುವ ಭಕ್ತರು ಈ ಬಸವನನ್ನೂ ಪೂಜಿಸುತ್ತಾರೆ.
ಮುಂದಿನ ದಿನಗಳಲ್ಲಿ ಮಹಾಲಿಂಗೇಶ್ವರನ ಪರಿವಾರ ದೇವತೆಗಳಾದ ಪಾರ್ವತಿ, ಸುಬ್ರಹ್ಮಣ್ಯ, ಗಣೇಶ ಹಾಗೂ ಇತರ ದೈವಗಳನ್ನು, ದೇವಾಲಯದ ಮುಂಭಾಗದಲ್ಲಿ ನಾಗರಾಜ, ಅಯ್ಯಪ್ಪ ಮತ್ತು ನವಗ್ರಹಗಳ ಗುಡಿಯನ್ನು ಕಟ್ಟಲಾಯಿತು. ಅವುಗಳಿಗೆ ಶಾಸ್ತ್ರೋಕ್ತವಾಗಿ ಪೂಜೆಯನ್ನು ಮಾಡಲಾಗುತ್ತಿದೆ. ಅಲ್ಲದೇ ದೇವಾಲಯದ ಮುಂಭಾಗದಲ್ಲಿಯೇ ಒಂದು ಸ್ಮಶಾನ ಕೂಡ ಇದೆ. ಅದರ ಪಕ್ಕ ಮತ್ತೊಂದು ಬೃಹದಾಕಾರದ ಶಿವನ ಮೂರ್ತಿ ಇದೆ.
ಪುಷ್ಕರಿಣಿ:
ಆನೆ ಸೋತು ಬಿದ್ದ ಜಾಗದಲ್ಲಿ ನಿರ್ಮಾಣಗೊಂಡ ಬೃಹತ್ ಗುಳಿಯಲ್ಲೇ ಕೆರೆ ನಿರ್ಮಿಸಲಾಗಿತ್ತು. ಕೆರೆಯಲ್ಲಿ ನೀರು ಸಿಗದೇ ಇದ್ದಾಗ ಶಿವ ಭಕ್ತರಿಗೆ ಕೆರೆಯ ಮಧ್ಯದಲ್ಲಿ ಅನ್ನಸಂತರ್ಪಣೆ ಮಾಡಲಾಗಿತ್ತು. ಭಕ್ತರು ಊಟ ಮಾಡುತ್ತಿದ್ದಂತೆ ಗಂಗೆ ಉಕ್ಕಿ ಬಂದಿದ್ದು, ಅವರೆಲ್ಲ ಅನ್ನದ ಎಲೆಯನ್ನು ಕೆರೆಯಲ್ಲೇ ಬಿಟ್ಟು ಮೇಲೆ ಬಂದಿದ್ದರು. ನೀರಿನಾಳದಲ್ಲಿ ಉಳಿದ ಅನ್ನದ ಅಗುಳುಗಳೇ ಮುತ್ತುಗಳಾಗಿ ಪರಿವರ್ತನೆಯಾಗಿ ಕ್ರಮೇಣ ಈ ಊರಿಗೆ ಪುತ್ತೂರು ಎಂಬ ಹೆಸರು ಬಂತೆಂಬ ಕಥೆಯಿದೆ.
ದೇವಾಲಯದ ವಿಶೇಷತೆ:
ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ಸುಬ್ರಹ್ಮಣ್ಯ ಗುಡಿ, ಗಣಪತಿ ಗುಡಿ, ಶಾಸ್ತಾವು ಗುಡಿ, ದೇವಿ ಗುಡಿ, ದೈವಗಳ ಗುಡಿಗಳಿವೆ. ಒಳಾಂಗಣದ ದಕ್ಷಿಣದಲ್ಲಿ ಸಪ್ತ ಮಾತೃಕೆಯರನ್ನು, ಗಣಪತಿ ಮತ್ತು ವೀರಭದ್ರನನ್ನು ಸುತ್ತಲೂ ಅಷ್ಟದಿಕಾಲಕರನ್ನು ಸ್ಥಾಪಿಸಲಾಗಿದೆ. ಈಶಾನ್ಯದಲ್ಲಿ ಚೆಂಡೇಶ್ವರ, ಕ್ಷೇತ್ರಪಾಲಕನನ್ನು ಹಾಗೂ ನಂದಿಯ ಹಿಂಭಾಗದಲ್ಲಿ ಬಲಿಕಲ್ಲು ಸ್ಥಾಪಿಸಲಾಗಿದೆ. ಒಳಾಂಗಣದ ದಕ್ಷಿಣದಲ್ಲಿ, ಮಾಹೇಶ್ವರಿ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣಿ, ಚಾಮುಂಡಾ ಎಂಬ ಸಪ್ತ ಮಾತೃಕೆಯರನ್ನು, ಗಣಪತಿ ಮತ್ತು ವೀರಭದ್ರನನ್ನು ಒಂದೇ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಪುನರ್ ನಿರ್ಮಾಣಗೊಂಡು 2013ರಲ್ಲಿ ವೈಭವದ ಬ್ರಹ್ಮಕಲಶೋತ್ಸವಕ್ಕೆ ಸಾಕ್ಷಿಯಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಹೊರಾಂಗಣದ ಕೆಳ ಭಾಗದಲ್ಲಿ ಧರ್ಮದ ಸಂಕೇತವಾಗಿ 192 ನಂದಿಗಳನ್ನೂ, ಮೇಲ್ಭಾಗದಲ್ಲಿ ಶೌರ್ಯದ ಸಂಕೇತವಾಗಿ 108 ಸಿಂಹವನ್ನು ಶಿಲೆಯಲ್ಲಿ ಕೆತ್ತಲಾಗಿದೆ.
ಪುತ್ತೂರು ಒಡೆಯನ ದೇವಾಲಯಕ್ಕೆ ತೌಳವ-ದ್ರಾವಿಡ ಶೈಲಿಯ ರಾಜಗೋಪುರ ಸಮರ್ಪಣೆಯಾಗಿದೆ. 19 ಅಡಿ ಸುತ್ತಳತೆ, 47 ಅಡಿ ಎತ್ತರದ ರಾಜಗೋಪುರವನ್ನು 120 ಮೂರ್ತಿಗಳಿಂದ ಅಲಂಕರಿಸಲಾಗಿದೆ. ತುತ್ತ ತುದಿಯಲ್ಲಿ ಪಂಚಕಲಶಗಳು ಶೋಭಾಯಮಾನವಾದರೆ ಇಕ್ಕೆಲಗಳಲ್ಲಿ ಶೋಭಾನೆ ಮಂಟಪವಿದೆ.
ಬ್ರಹ್ಮರಥ:
ಮಹಾಲಿಂಗೇಶ್ವರ ದೇವರಿಗೆ ಮುತ್ತಪ್ಪ ರೈಯವರು 2010ರಲ್ಲಿ ಕಲಾತ್ಮಕ ಕೆತ್ತನೆಗಳಿರುವ 71 ಅಡಿ ಎತ್ತರದ 20 ಅಡಿ ಅಗಲದ ಬ್ರಹ್ಮರಥವನ್ನು ನೀಡಿದ್ದಾರೆ. ಹೊಯ್ಸಳ ಶೈಲಿ ಕಾಷ್ಠ ಶಿಲ್ಪದಲ್ಲಿರುವ ಈ ರಥವನ್ನು ನಿರ್ಮಿಸಲು ಎರಡು ವರ್ಷ ತಗುಲಿದ್ದು, 7,200 ಮಾನವ ದಿನಗಳು ಬಳಕೆಯಾಗಿವೆ. ಅನಂತರ ರಥಬೀದಿ ರಚಿಸಲಾಗಿದೆ. ಪ್ರತಿವರ್ಷ ಏ.17ರಂದು ರಥೋತ್ಸವ ನಡೆಯುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಾರೆ.
ದಶದಿಕ್ಕುಗಳಿಗೆ ದೇವರ ಪೇಟೆ ಸವಾರಿ:
ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಪ್ರತಿವರ್ಷ ಏ.10ರಿಂದ 20ರ ತನಕ ನಡೆಯುತ್ತದೆ. ಜಾತ್ರೆಯ ಸಂದರ್ಭ ದೇವರು ಪುತ್ತೂರಿನ ದಶ ದಿಕ್ಕುಗಳಿಗೆ ಪೇಟೆ ಸವಾರಿ ಉತ್ಸವದಲ್ಲಿ ತೆರಳಿ ಭಕ್ತರ ಕಟ್ಟೆಪೂಜೆ ಸೇವೆಯನ್ನು ಸ್ವೀಕರಿಸುವುದರ ಮೂಲಕ ಮನೆ ಬಾಗಿಲಿಗೆ ಬರುವ ದೇವರೆಂದು ಪ್ರಸಿದ್ಧಿ ಪಡೆದಿದೆ. 10 ದಿನಗಳ ಕಾಲ ಪೇಟೆ ಸವಾರಿ ನಡೆಯುವ ಪುತ್ತೂರು ಜಾತ್ರೆ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಧಾರ್ಮಿಕ ಚರಿತ್ರೆಯೂ ಹೌದು.
ದೇವರು ಸಕಲ ಗೌರವಗಳೊಂದಿಗೆ ಪೇಟೆಯ ವಿವಿಧ ಭಾಗಗಳಿಗೆ ಸವಾರಿ ತೆರಳಿ ಸಾವಿರಾರು ಕಟ್ಟೆಪೂಜೆ, ಭಕ್ತರು ಅರ್ಪಿಸಿದ ಹೂವು, ಹಣ್ಣು, ಆರತಿ ಸ್ವೀಕರಿಸುವುದು ಜಾತ್ರೆಯ ವಿಶೇಷ. ಭಕ್ತರು ಈ ಜಾತ್ರೆಯನ್ನು ಹತ್ತು ದಿನಗಳ ಕಾಲ ಬಹಳ ವೈಭವ ಮತ್ತು ಪ್ರದರ್ಶನದೊಂದಿಗೆ ಆಚರಿಸುತ್ತಾರೆ. ಈ ಸಂದರ್ಭ ಪುತ್ತೂರು ಸುಂದರವಾದ ದೀಪಗಳು ಮತ್ತು ಪಟಾಕಿಗಳ ಪ್ರದರ್ಶನದಿಂದ ಬೆರಗುಗೊಳಿಸುತ್ತದೆ.
ಪುತ್ತೂರು ಬೆಡಿ:
ಪುತ್ತೂರು ಜಾತ್ರೆಯ ಸಂದರ್ಭ ಏ.17ರಂದು ನಡೆಯುವ ಸುಡುಮದ್ದು ಪ್ರದರ್ಶನ ʼಪುತ್ತೂರು ಬೆಡಿ’ ಎಂದೇ ಪ್ರಸಿದ್ಧಿ ಪಡೆದಿದೆ. ಇದನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈಗ ಏ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಪುತ್ತೂರು ಜಾತ್ರೆಗದ್ದೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಯುತ್ತದೆ. ಇದನ್ನು ಸಣ್ಣ ಬೆಡಿ ಎನ್ನುತ್ತಾರೆ. ಏ.17ರಂದು ಬ್ರಹ್ಮರಥೋತ್ಸವದ ಬಳಿಕ ದೊಡ್ಡ ಬೆಡಿ ನಡೆಯುತ್ತದೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವು ಬೆಂಗಳೂರಿನಿಂದ 300 ಕಿ.ಮೀ ದೂರದಲ್ಲಿದೆ. ಪುತ್ತೂರು ರೈಲು ನಿಲ್ದಾಣ ಹತ್ತಿರದ ರೈಲು ನಿಲ್ದಾಣವಾಗಿದ್ದು,. ಮಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಬಸ್ ಮೂಲಕವೂ ಈ ದೇವಾಲಯವನ್ನು ತಲುಪಬಹುದಾಗಿದೆ.