– ಸೀರೆ ಮಾರೊ ನೆಪದಲ್ಲಿ ಮನೆ ಗುರುತಿಸಿ ಕನ್ನ
– 32 ಲಕ್ಷ ಮೌಲ್ಯದ ಚಿನ್ನಾಭರಣ, 1.5 ಲಕ್ಷ ಮೌಲ್ಯದ ಬೆಳ್ಳಿ ವಶ
ಬೆಂಗಳೂರು: ಊಟದ ಡಬ್ಬಿಯಲ್ಲಿ ನಿದ್ದೆ ಮಾತ್ರೆ ಹಾಕಿ ಬಂಗಾರದ ಅಂಗಡಿ ದೋಚಿದ ಖದೀಮರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈ ಖದೀಮರು ಕೇವಲ ಬಂಗಾರದ ಅಂಗಡಿ ಮಾತ್ರವಲ್ಲದೆ, ಸೀರೆ ಮಾರುವ ನೆಪದಲ್ಲಿ ಐಷಾರಾಮಿ ಮನೆಗಳಿಗೂ ಕನ್ನ ಹಾಕಿರುವುದು ಬಯಲಾಗಿದೆ.
ರಾಜಸ್ಥಾನ ಮೂಲದ ಜೋಗಮಲ್ ಪುರೋಹಿತ್, ವಿಷ್ಣುಪೂಜಾ ಬಾಯ್ ತರ್ಪಡೆ, ರಾಮಗಿರಿರಾಮ್ ಬಂಧಿತ ಆರೋಪಿಗಳು. ಈ ಗ್ಯಾಂಗ್ ಬೈಕ್‍ನಲ್ಲಿ ಸೀರೆಗಳನ್ನು ಇಟ್ಟುಕೊಂಡು, ಸೀರೆ ವ್ಯಾಪಾರ ಮಾಡುವ ರೀತಿ ಬಂದು ಹಲವು ಏರಿಯಾದ ಮನೆಗಳನ್ನ ಗುರುತಿಸಿಕೊಂಡು ಅಲ್ಲಿ ಕಳ್ಳತನ ಮಾಡುತ್ತಿದ್ದರು. ಬೆಳಗ್ಗೆ ಹೊತ್ತು ಸೀರೆ ಮಾರುವ ನೆಪದಲ್ಲಿ ಐಷಾರಾಮಿ ಮನೆಗಳನ್ನ ಗುರುತು ಮಾಡಿಕೊಂಡು ರಾತ್ರಿ ಅದೇ ಮನೆಯ ಬೀಗ ಒಡೆದು ಈ ಗ್ಯಾಂಗ್ ಕಳ್ಳತನ ಮಾಡುತ್ತಿತ್ತು.
Advertisement
Advertisement
ಅಷ್ಟೇ ಅಲ್ಲದೆ ಗುಜರಾತಿ ವ್ಯಕ್ತಿಗಳನ್ನು ಪರಿಚಯ ಮಾಡ್ಕೊಂಡು ಮನೆಯಿಂದ ಜ್ಯುವೆಲ್ಲರಿ ಶಾಪ್‍ಗೆ ಊಟದ ಡಬ್ಬಿ ಸಾಗಿಸುವ ಕೆಲಸ ಗಿಟ್ಟಿಸಿಕೊಂಡು ತಮ್ಮ ಕೈಚಳಕ ತೋರಿಸಿದ್ದಾರೆ. ಒಂದು ವಾರದ ಕಾಲ ತುಂಬಾ ನಿಯತ್ತಾಗಿ ಊಟದ ಡಬ್ಬಿ ಸಾಗಿಸುವ ಕೆಲಸ ಮಾಡಿದ್ದಾರೆ.
Advertisement
ಮಾಲೀಕ ಅಂಗಡಿಯಲ್ಲಿ ಒಬ್ಬನೇ ಇರುವುದನ್ನು ಖಚಿತ ಮಾಡಿಕೊಂಡು ಊಟದ ಡಬ್ಬಿಗೆ ನಿದ್ದೆ ಮಾತ್ರೆ ಹಾಕಿ ಕೊಟ್ಟಿದ್ದಾರೆ. ಊಟ ತಿಂದ ಮಾಲೀಕರು ನಿದ್ದೆಗೆ ಜಾರುತ್ತಿದ್ದಂತೆ ಅಂಗಡಿಯ ಚಿನ್ನ, ನಗದು ದೋಚಿ ಈ ಖತರ್ನಾಕ್ ಗ್ಯಾಂಗ್ ಎಸ್ಕೇಪ್ ಆಗುತಿತ್ತು.
Advertisement
ಸದ್ಯ ಈ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 32 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1.5 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಇವರ ಬಂಧನದಿಂದ ಸುಮಾರು 10 ಕಳ್ಳತನ ಪ್ರಕರಣಗಳು ಪೊಲೀಸರು ಪತ್ತೆ ಮಾಡಿದ್ದಾರೆ.