ನವದೆಹಲಿ: ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ಪುಟಿನ್ (Putin) ಜೊತೆ ಪ್ರಧಾನಿ ಮೋದಿ (Narendra Modi) ಇಂದು ದೆಹಲಿಯ ಹೈದರಾಬಾದ್ ಹೌಸ್‍ನಲ್ಲಿ ನಡೆದ 23ನೇ ಭಾರತ (India) -ರಷ್ಯಾ (Russia) ವಾರ್ಷಿಕ ಶೃಂಗಸಭೆಯಲ್ಲಿ ಸುದೀರ್ಘವಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಮೋದಿ ಆರ್ಥಿಕ ಸಹಕಾರವನ್ನು ಹೆಚ್ಚಿಸಲು `ವಿಷನ್ 2030′ ದಾಖಲೆಗೆ ಸಹಿ ಹಾಕಿದ್ದೇವೆ. ಇದರಿಂದ ಎರಡೂ ರಾಷ್ಟ್ರಗಳಿಗೆ ಹಲವಾರು ವ್ಯಾಪಾರ ಮಾರ್ಗಗಳನ್ನು ತೆರೆಯುತ್ತದೆ ಎಂದರು.
ಭಯೋತ್ಪಾದನೆಯ ವಿಷಯದಲ್ಲಿ ಜಾಗತಿಕ ಏಕತೆಯನ್ನು ಕೋರಿದ ಮೋದಿ, ಭಾರತ- ರಷ್ಯಾ ಎರಡೂ ಭಯೋತ್ಪಾದನೆ ವಿರುದ್ಧ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿವೆ. ರಷ್ಯಾದ ನಾಗರಿಕರಿಗೆ ಇ-ಟೂರಿಸ್ಟ್ ವೀಸಾ, ಗುಂಪು ಪ್ರವಾಸಿ ವೀಸಾ ಸೇವೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದೇವೆ ಅಂದರು. ಇದೇ ವೇಳೆ, ಭಾರತ ತಟಸ್ಥವಾಗಿಲ್ಲ, ಶಾಂತಿಯ ಪರವಾಗಿ ದೃಢವಾಗಿ ನಿಂತಿದೆ ಎಂದು ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ಸ್ಪಷ್ಟಪಡಿಸಿದರು.
ಪುಟಿನ್ ಮಾತಾಡಿ, ಆತ್ಮೀಯ ಸ್ವಾಗತಕ್ಕಾಗಿ ಅಧ್ಯಕ್ಷೆ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಧನ್ಯವಾದ. 2 ರಾಷ್ಟ್ರಗಳ ಬಾಂಧವ್ಯಕ್ಕೆ ನಿಕಟವಾಗಿ ಕೆಲಸ ಮಾಡ್ತೇವೆ. ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡ್ತೇವೆ. ಪಾಕ್ ವಿರುದ್ಧದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಬೆಂಬಲಿಸಿದರು. ಅಲ್ಲದೆ, ಭಾರತಕ್ಕೆ ತೈಲ ಪೂರೈಕೆ ಮುಂದುವರಿಸ್ತೇವೆ. ನಮ್ಮಿಂದ ಅಮೆರಿಕವೇ ಪರಮಾಣು ಇಂಧನ ಖರೀದಿಸಬೇಕಾದರೆ ಭಾರತ ಯಾಕೆ ಖರೀದಿಸಬಾರದು..? ಅಂತ ಟ್ರಂಪ್ ಟ್ಯಾರಿಫ್‍ಗೆ ಪುಟಿನ್ ಪಂಚ್ ಕೊಟ್ಟರು. ಈ ಮಧ್ಯೆ, ಕಾಂಗ್ರೆಸ್‍ನ ರಾಹುಲ್, ಖರ್ಗೆ ಬದಲಿಗೆ ಸಂಸದ ಶಶಿತರೂರ್‌ಗೆ ಪುಟಿನ್ ಜೊತೆಗೆ ಔತಣಕ್ಕೆ ಅವಕಾಶ ಕೊಡಲಾಗಿತ್ತು.
ರಷ್ಯಾ ಅಧ್ಯಕ್ಷ ಪುಟಿನ್‍ಗೆ 2ನೇ ದಿನವೂ ಅದ್ಧೂರಿ ಸ್ವಾಗತವೇ ಸಿಕ್ಕಿದೆ. ರಾಷ್ಟ್ರಪತಿ ಭವನದಲ್ಲಿ ಪುಟಿನ್‍ರನ್ನು ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮ್ಮುಖದಲ್ಲಿ ಭಾರತೀಯ ಸೇನೆಯ 3 ಪಡೆಗಳ ಗೌರವ ರಕ್ಷೆ ನೀಡಲಾಯಿತು. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಬಳಿಕ ರಾಜ್‍ಘಾಟ್‍ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಮಾಧಿಗೆ ನಮಿಸಿದರು. ಬಳಿಕ ಹೈದ್ರಾಬಾದ್ ಹೌಸ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆಯಲ್ಲಿ ತೊಡಗಿದರು.
ಡಿ.4ರ ರಾತ್ರಿ ರಾತ್ರಿ ಔತಣ ಕೂಟದ ಹೊತ್ತಲ್ಲಿ ಪುಟಿನ್‍ಗೆ ಮೋದಿ ರಷ್ಯಾ ಆವೃತ್ತಿಯ ಭಗವದ್ಗೀತೆ ಪುಸ್ತಕವನ್ನು ಗಿಫ್ಟ್ ಕೊಟ್ಟಿದ್ದಾರೆ. ಇದಕ್ಕೆ ಇಸ್ಕಾನ್ ಧನ್ಯವಾದ ಹೇಳಿದರೆ, ಶಾಲಾ ಪಠ್ಯಗಳಲ್ಲಿ ಸೇರಿಸಿದರೆ ಒಳಿತು ಅಂತ ಹೆಚ್‌ಡಿಕೆ ಹೇಳಿದ್ದಾರೆ.

