– ಕಿಮ್ ಭೇಟಿಯಾಗಿದ್ಯಾಕೆ ಪುಟಿನ್?
– ಉತ್ತರ ಕೊರಿಯಾ, ರಷ್ಯಾ ನಡುವೆ ಆದ ಒಪ್ಪಂದವೇನು?
24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ (North Korea) ಭೇಟಿ ನೀಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಇನ್ನಷ್ಟು ಬಲ ಭೀಮನಾಗಿ ವಾಪಸ್ ಆಗಿದ್ದಾರೆ. ಉಕ್ರೇನ್ (Ukraine) ಮೇಲೆ ಯುದ್ಧ ಸಾರಿದಾಗ, ಹತ್ತಾರು ದೇಶಗಳ ನ್ಯಾಟೊ ಒಕ್ಕೂಟವೇ ತಿರುಗಿಬಿದ್ದರೂ ಎದೆಗುಂದದೇ ರಷ್ಯಾ ಏಕಾಂಗಿ ಹೋರಾಟ ನಡೆಸಿತ್ತು. ಆಗ ರಷ್ಯಾ ಬೆಂಬಲಕ್ಕೆ ನಿಂತ ರಾಷ್ಟ್ರ ಉತ್ತರ ಕೊರಿಯಾ. ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾಗೆ ಅಗತ್ಯ ಶಸ್ತ್ರಾಸ್ತ್ರ ನೆರವು ನೀಡಿ ಹೆಗಲು ಕೊಟ್ಟಿತ್ತು. ಈಗ ತನ್ನ ಆಪದ್ಭಾಂಧವ ರಾಷ್ಟ್ರಕ್ಕೆ ಪುಟಿನ್ ಭೇಟಿ ಕೊಟ್ಟರು. ಕೊರಿಯಾ ನಾಯಕ ಕಿಮ್ ಜಾಂಗ್ ಉನ್ (Kim Jong Un) ಅಷ್ಟೇ ಖುಷಿಯಿಂದ ಬರಮಾಡಿಕೊಂಡರು. ಉಭಯ ದೇಶಗಳ ನಾಯಕರು ಪರಸ್ಪರ ಹ್ಯಾಂಡ್‌ಶೇಕ್ ಮಾಡಿದರು. ನೆನಪಿನ ಕಾಣಿಕೆಗಳ ವಿನಿಮಯವಾಯಿತು. ಸಶಸ್ತ್ರ ನೆರವು ಒಪ್ಪಂದಕ್ಕೆ ಸಹಿ ಹಾಕಿದರು. ದಶಕಗಳ ನಂತರ ರಷ್ಯಾ ಅಧ್ಯಕ್ಷನ ಆ ಒಂದು ಭೇಟಿ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳ ನಿದ್ದೆಗೆಡಿಸಿದೆ.
Advertisement
ರಷ್ಯಾವಾಗಲಿ ಅಥವಾ ಉಕ್ರೇನ್ ಆಗಲಿ ಹೊರಗಡೆಯಿಂದ ಸಶಸ್ತ್ರ ಆಕ್ರಮಣವನ್ನು ಎದುರಿಸಿದರೆ ಪರಸ್ಪರರು ತಕ್ಷಣದ ಮಿಲಿಟರಿ ನೆರವು ನೀಡುವ ಒಪ್ಪಂದಕ್ಕೆ ಪುಟಿನ್ ಮತ್ತು ಕಿಮ್ ಸಹಿ ಹಾಕಿದ್ದಾರೆ. ಜೊತೆಗೆ ಉತ್ತರ ಕೊರಿಯಾಗೆ ಸಶಸ್ತ್ರಗಳನ್ನು ನೀಡಲಾಗುವುದು ಎಂದು ರಷ್ಯಾ ಅಧ್ಯಕ್ಷರು ಒಪ್ಪಂದದಲ್ಲಿ ತಿಳಿಸಿದ್ದಾರೆ. ಉಭಯ ದೇಶಗಳು ಒಪ್ಪಂದವು ಅಮೆರಿಕಗೆ ಆತಂಕ ಮೂಡಿಸಿದೆ. ರಷ್ಯಾ-ಕೊರಿಯಾ ನಡುವಿನ ಈ ಒಪ್ಪಂದ ಈಗ ಏಕೆ ಮಹತ್ವದ್ದು? ಇದನ್ನೂ ಓದಿ: 24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ ಪುಟಿನ್ ಭೇಟಿ – ರಷ್ಯಾ ಅಧ್ಯಕ್ಷನಿಗೆ ಭವ್ಯ ಸ್ವಾಗತ
Advertisement
Advertisement
ರಷ್ಯಾ-ಉ.ಕೊರಿಯಾ ಸ್ನೇಹದ ಒಂದು ಹಿನ್ನೋಟ
ಎರಡನೆಯ ಮಹಾಯುದ್ಧದ ನಂತರ, ಹಿಂದಿನ ಸೋವಿಯತ್ ಒಕ್ಕೂಟವು ಕೊರಿಯಾದಲ್ಲಿ ಕಮ್ಯುನಿಸ್ಟ್ ಆಡಳಿತವನ್ನು ಸ್ಥಾಪಿಸಲು ಬಯಸಿತು. ಕೊರಿಯನ್ ಯುದ್ಧದ ಸಮಯದಲ್ಲಿ ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಇಲ್ ಸುಂಗ್‌ಗೆ ಗಮನಾರ್ಹ ಮಿಲಿಟರಿ ಸಹಾಯವನ್ನು ನೀಡಿತು. ಯುದ್ಧಗಳು ಕೊನೆಗೊಂಡ ನಂತರ ಯುಎಸ್ಎಸ್ಆರ್, ಚೀನಾದೊಂದಿಗೆ ಕಮ್ಯುನಿಸ್ಟ್ ಉತ್ತರಕ್ಕೆ ಗಮನಾರ್ಹ ಮಿಲಿಟರಿ ಮತ್ತು ಇತರ ಸಹಾಯವನ್ನು ಒದಗಿಸಿತು. 1961 ರಲ್ಲಿ ಉಭಯ ರಾಷ್ಟ್ರಗಳು ತಮ್ಮ ಮೈತ್ರಿಯನ್ನು ಗಟ್ಟಿಗೊಳಿಸಿದವು. ರಷ್ಯಾ-ಉತ್ತರ ಕೊರಿಯಾ ಸ್ನೇಹ, ಸಹಕಾರ ಮತ್ತು ಪರಸ್ಪರ ಸಹಾಯದ ಒಪ್ಪಂದಕ್ಕೆ ಸಹಿ ಹಾಕಿದವು. ಇದು ಇತ್ತೀಚಿನ ಒಪ್ಪಂದದಂತೆ ಪರಸ್ಪರ ರಕ್ಷಣಾ ಒಪ್ಪಂದವನ್ನು ಹೊಂದಿದೆ. 1991 ರಲ್ಲಿ ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರ, ಈ ಒಪ್ಪಂದವನ್ನು ರದ್ದುಗೊಳಿಸಲಾಯಿತು. ಪರಿಣಾಮವಾಗಿ ಸಂಬಂಧಗಳು ತಾತ್ಕಾಲಿಕವಾಗಿ ಹದಗೆಟ್ಟವು.
Advertisement
ಹೀಗಿದ್ದರೂ, 2000 ರ ದಶಕದ ಆರಂಭದಿಂದಲೂ ಪುಟಿನ್ ಆಡಳಿತದ ರಷ್ಯಾವು ಕಿಮ್ ಸರ್ವಾಧಿಕಾರದ ಉತ್ತರ ಕೊರಿಯಾಕ್ಕೆ ಹತ್ತಿರವಾಗಿದೆ. 2022 ರಲ್ಲಿ ಉಕ್ರೇನ್ ಮೇಲಿನ ಯುದ್ಧದಿಂದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕ ನಿರ್ಬಂಧಕ್ಕೆ ರಷ್ಯಾ ಗುರಿಯಾಯಿತು. ಆಗ ರಷ್ಯಾಗೆ ಬೆಂಬಲವಾಗಿ ನಿಂತಿದ್ದು ಉತ್ತರ ಕೊರಿಯಾ. ರಷ್ಯಾ ಮತ್ತು ಉತ್ತರ ಕೊರಿಯಾವು ಪಾಶ್ಚಿಮಾತ್ಯ ಉದಾರವಾದಿ ಕ್ರಮದ ವಿರುದ್ಧ ಒಟ್ಟಾಗಿ ಈಗಲೂ ನಿಂತಿವೆ. ಇದನ್ನೂ ಓದಿ: ಕುರಾನ್‌ಗೆ ಅಪಮಾನ – ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದ ಉದ್ರಿಕ್ತ ಗುಂಪು!
ಈಗಿನ ಒಪ್ಪಂದ ಏನು?
ರಷ್ಯಾ ಮತ್ತು ಉತ್ತರ ಕೊರಿಯಾ ನಡುವಿನ ಒಪ್ಪಂದವು ಪರಸ್ಪರ ಮಿಲಿಟರಿ ಬೆಂಬಲ ಮತ್ತು ತಾಂತ್ರಿಕ ನೆರವು ನೀಡುವುದು. ಪರಸ್ಪರ ರಕ್ಷಣಾ ನಿಬಂಧನೆಗಳು ಈ ಒಪ್ಪಂದದಲ್ಲಿ ನಿರ್ಣಾಯಕವಾಗಿದೆ. ಉದಾಹರಣೆಗೆ, ಉತ್ತರ ಕೊರಿಯಾ ಮೇಲೆ ಬೇರೊಂದು ರಾಷ್ಟ್ರ ಸಶಸ್ತ್ರ ಆಕ್ರಮಣ ನಡೆಸಿದರೆ ರಷ್ಯಾ ತಕ್ಷಣ ಕೊರಿಯಾಗೆ ಮಿಲಿಟರಿ ರಕ್ಷಣೆ ನೀಡುತ್ತದೆ. ಅದೇ ರೀತಿ, ರಷ್ಯಾ ಮೇಲೆ ಬೇರೊಂದು ರಾಷ್ಟ್ರ ಆಕ್ರಮಣ ಮಾಡಿದರೆ ಉತ್ತರ ಕೊರಿಯಾ ತಕ್ಷಣದ ಮಿಲಿಟರಿ ನೆರವು ನೀಡಬೇಕು. ಇದು ಉಭಯ ರಾಷ್ಟ್ರಗಳ ನಡುವೆ ಆಗಿರುವ ಪ್ರಮುಖ ಒಪ್ಪಂದ. ಇಬ್ಬರ ಈ ಒಪ್ಪಂದವು ಎರಡು ರಾಷ್ಟ್ರಗಳ ನಡುವಿನ 1961 ರ ಒಪ್ಪಂದವನ್ನು ಪ್ರತಿಧ್ವನಿಸುತ್ತದೆ ಎಂದು ಕೌನ್ಸಿಲ್ ಫಾರ್ ಫಾರಿನ್ ರಿಲೇಶನ್ಸ್‌ನಲ್ಲಿ ಕೊರಿಯಾ ಅಧ್ಯಯನಕಾರ ಫೆಲೋ ಸ್ಯೂ ಮಿ ಟೆರ್ರಿ ತಿಳಿಸಿದ್ದಾರೆ.
ಜಪಾನ್-ದಕ್ಷಿಣ ಕೊರಿಯಾಗೆ ನಡುಕ
ರಷ್ಯಾ ಮತ್ತು ಉತ್ತರ ಕೊರಿಯಾ ಮಿಲಿಟರಿ ಒಪ್ಪಂದದಿಂದ ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ನಡುಕ ಹುಟ್ಟಿದೆ. ಈ ಒಪ್ಪಂದವು ತಮಗೆ ನೇರ ಭದ್ರತಾ ಬೆದರಿಕೆ ಎಂದು ಎರಡೂ ರಾಷ್ಟ್ರಗಳು ಭಾವಿಸಿದಂತಿದೆ. ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮ ಮತ್ತು ಮಿಲಿಟರಿ ಸಾಮರ್ಥ್ಯದ ಬಗ್ಗೆ ಎರಡೂ ದೇಶಗಳು ಬಹಳ ಹಿಂದಿನಿಂದಲೂ ಆತಂಕ ವ್ಯಕ್ತಪಡಿಸಿವೆ. ಹೀಗಾಗಿ ಜಪಾನ್ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳು ತಮ್ಮ ರಕ್ಷಣಾ ವ್ಯವಸ್ಥೆ ಬಲಪಡಿಸುವ ಮತ್ತು ಭದ್ರತಾ ನೀತಿಗಳನ್ನು ಪರಾಮರ್ಶಿಸುವ ಕಡೆಗೆ ಮತ್ತೆ ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ. ಜಪಾನ್ ಈಗಾಗಲೇ ತನ್ನ ದೀರ್ಘಕಾಲದ ಶಾಂತಿವಾದಿ ವಿದೇಶಾಂಗ ನೀತಿಯಿಂದ ದೂರ ಸರಿದಿದೆ. ತನ್ನ ಮಿಲಿಟರಿ ಶಕ್ತಿಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದೆ. ಇತ್ತ ದಕ್ಷಿಣ ಕೊರಿಯಾ ತನ್ನ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದೆ. ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ವಿಚಾರವನ್ನು ಈಗ ಪರಿಗಣಿಸುವುದಾಗಿ ಹೇಳಿದೆ. ಇದು ಇಲ್ಲಿಯವರೆಗೆ ಅದನ್ನು ವಿರೋಧಿಸಿತ್ತು. ಇದನ್ನೂ ಓದಿ: ಸಮುದ್ರದ ಮಧ್ಯೆ ಚೀನಾ-ಫಿಲಿಪ್ಪೈನ್ಸ್ ಸೇನೆಗಳ ನಡುವೆ ಜಟಾಪಟಿ
ರಷ್ಯಾ-ಉತ್ತರ ಕೊರಿಯಾ ಒಪ್ಪಂದವು ಇತರೆಡೆಗಳಲ್ಲಿ, ವಿಶೇಷವಾಗಿ ಇರಾನ್‌ನೊಂದಿಗೆ ಇದೇ ರೀತಿಯ ಪಾಲುದಾರಿಕೆಯನ್ನು ಪ್ರೋತ್ಸಾಹಿಸಬಹುದು. ಪಾಶ್ಚಿಮಾತ್ಯರಿಗೆ ಇವುಗಳು ದೊಡ್ಡ ಬೆದರಿಕೆ ನೀಡುವುದು ಗ್ಯಾರಂಟಿ. ಉತ್ತರ ಕೊರಿಯಾದ ಸಾಂಪ್ರದಾಯಿಕ ಮಿತ್ರ ಚೀನಾ. ಒಪ್ಪಂದವು ಏಷ್ಯಾದಲ್ಲಿ ಪಾಶ್ಚಿಮಾತ್ಯ ವಿರೋಧಿ ಭದ್ರಕೋಟೆಯನ್ನು ಬಲಪಡಿಸುತ್ತದೆ. ಆದರೆ, ಉತ್ತರ ಕೊರಿಯಾದೊಂದಿಗೆ ರಷ್ಯಾದ ಮಿಲಿಟರಿ ಸಹಯೋಗದ ಬಗ್ಗೆ ಚೀನಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ಈ ಒಪ್ಪಂದವು ಉತ್ತರ ಕೊರಿಯಾದ ಪ್ಯೊಂಗ್ಯಾಂಗ್ ಮೇಲೆ ಚೀನಾದ ಭೌಗೋಳಿಕ ರಾಜಕೀಯ ಪ್ರಭಾವವನ್ನು ದುರ್ಬಲಗೊಳಿಸಬಹುದು.
ನ್ಯಾಟೊ ಎದೆಯಲ್ಲಿ ಢವಢವ
ದಕ್ಷಿಣ ಕೊರಿಯಾ ಮತ್ತು ಜಪಾನ್ ಈಗ ಯುನೈಟೆಡ್ ಸ್ಟೇಟ್ಸ್ ಜೊತೆಗಿನ ತಮ್ಮ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಲಿವೆ. ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಈಗಾಗಲೇ ತನ್ನ ಮಿತ್ರರಾಷ್ಟ್ರಗಳಿಗೆ ಬದ್ಧವಾಗಿರುವುದಾಗಿ ಪುನರುಚ್ಚರಿಸಿದೆ. NATO ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಕೂಡ, ರಷ್ಯಾ-ಉತ್ತರ ಕೊರಿಯಾ ಒಪ್ಪಂದದ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದ್ದಾರೆ. ‘ಈ ಒಪ್ಪಂದ ಜಾಗತಿಕ ಭದ್ರತೆಗೆ ಅಪಾಯಕಾರಿ ಮತ್ತು ಹೆಚ್ಚಿದ ಪರಮಾಣು ಬಳಕೆಯ ಸಾಧ್ಯತೆಯನ್ನು ಎತ್ತಿ ತೋರುತ್ತಿದೆ. ನಾವು ಹಿಂದೆಂದೂ ನೋಡಿರದ ರೀತಿಯಲ್ಲಿ ಸರ್ವಾಧಿಕಾರಿ ಶಕ್ತಿಗಳು ಹೆಚ್ಚೆಚ್ಚು ಪಡೆಗಳನ್ನು ಸೇರುತ್ತಿವೆ. ಪರಸ್ಪರ ಬೆಂಬಲಿಸುತ್ತಿವೆ’ ಎಂದಿದ್ದಾರೆ. ಇದನ್ನೂ ಓದಿ: ಹಜ್ ಯಾತ್ರೆಗೆ ತೆರಳಿದ್ದ ಬೆಂಗ್ಳೂರಿನ ಇಬ್ಬರು ಸಾವು – ಕರ್ನಾಟಕದ 10,000ಕ್ಕೂ ಹೆಚ್ಚು ಮಂದಿ ಸೇಫ್!
ರಷ್ಯಾ-ಉಕ್ರೇನ್ ಯುದ್ಧದ ಮೆಲುಕು
ಉತ್ತರ ಕೊರಿಯಾ ಜೊತೆಗಿನ ರಷ್ಯಾ ಒಪ್ಪಂದಕ್ಕೆ ಉಕ್ರೇನ್ ಮೇಲಿನ ಯುದ್ಧವೂ ಒಂದು ಕಾರಣ. ರಷ್ಯಾ ಮತ್ತು ಉಕ್ರೇನ್ ನಡುವಿನ ಪ್ರಸ್ತುತ ಬಿಕ್ಕಟ್ಟಿಗೆ ಮುಖ್ಯ ಕಾರಣ ನ್ಯಾಟೊ (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ). ಇದು ಯುಎಸ್, ಯುಕೆ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ 30 ದೇಶಗಳ ಗುಂಪುಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಉಕ್ರೇನ್ ನ್ಯಾಟೊ ಸಂಸ್ಥೆಗೆ ಸೇರಲು ಬಯಸಿತ್ತು. NATO ಕೂಡ ಉಕ್ರೇನ್ ಅನ್ನು ತನ್ನ ಸದಸ್ಯರನ್ನಾಗಿ ಮಾಡಿಕೊಳ್ಳುವ ಬಗ್ಗೆ ಮುಕ್ತವಾಗಿತ್ತು. ಆದರೆ ಉಕ್ರೇನ್ ನಿರ್ಧಾರಕ್ಕೆ ರಷ್ಯಾ ವಿರೋಧ ವ್ಯಕ್ತಪಡಿಸಿತ್ತು. ನ್ಯಾಟೊ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಒಕ್ಕೂಟಕ್ಕೆ ಉಕ್ರೇನ್ ಸೇರಬಾರದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಸಿದ್ದರು. ಆದರೆ ಅವರ ಮಾತನ್ನು ಉಕ್ರೇನ್ ಕೇಳದೇ ನ್ಯಾಟೊ ಸೇರಲು ಮುಂದಾಯಿತು. ಇದರ ಪರಿಣಾಮದಿಂದ ರಷ್ಯಾ ಯುದ್ಧವನ್ನು ಎದುರಿಸಬೇಕಾಯಿತು.
ಉಕ್ರೇನ್ ನ್ಯಾಟೊ ಸೇರಲು ಪುಟಿನ್ ವಿರೋಧ ಯಾಕೆ?
ಉಕ್ರೇನ್ NATOದಲ್ಲಿ ತನ್ನ ಸದಸ್ಯ ಸ್ಥಾನ ಪಡೆಯಲು ರಷ್ಯಾ ಬಯಸುವುದಿಲ್ಲ. ಏಕೆಂದರೆ NATO ಸದಸ್ಯ ರಾಷ್ಟ್ರವು ಯಾವುದೇ ಬಾಹ್ಯ ದಾಳಿಯ ಸಂದರ್ಭದಲ್ಲಿ ಎಲ್ಲಾ ಸದಸ್ಯರ ಸಾಮೂಹಿಕ ಬೆಂಬಲಕ್ಕೆ ಅರ್ಹವಾಗಿರುತ್ತದೆ. ಹೀಗಾಗಿ ಉಕ್ರೇನ್ ಅನ್ನು NATOದಲ್ಲಿ ಸದಸ್ಯನಾಗಲು ರಷ್ಯಾ ಒಪ್ಪುತ್ತಿಲ್ಲ. ಉಕ್ರೇನ್ ನ್ಯಾಟೊ ಸೇರಿದರೆ ಅದರ ಒಕ್ಕೂಟ ರಾಷ್ಟ್ರಗಳ ಸೇನೆಯು, ಉಕ್ರೇನ್‌ನ ಗಡಿಯಲ್ಲಿ ಪಡೆಗಳನ್ನು ನಿಯೋಜಿಸುತ್ತವೆ. ಉಕ್ರೇನ್ ಮತ್ತು ರಷ್ಯಾ ಗಡಿಗೆ ನ್ಯಾಟೊ ಒಕ್ಕೂಟ ರಾಷ್ಟ್ರಗಳ ಸೇನೆ ನಿಯೋಜನೆ ಸಾಧ್ಯವಾಗಬಾರದು ಎಂಬುದು ಪುಟಿನ್ ನಿಲುವು. ಹೀಗಾಗಿ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೆಕ್ಕಾದಲ್ಲಿ ಮೃತಪಟ್ಟ 645 ಹಜ್ ಯಾತ್ರಿಕರ ಪೈಕಿ 68 ಮಂದಿ ಭಾರತೀಯರು!