ಬೆಂಗಳೂರು: ಇತ್ತೀಚೆಗೆ ತೆರೆ ಕಂಡ ತೆಲುಗು ಭಾಷೆಯ ಪುಷ್ಪ ಸಿನಿಮಾದ ಮಾದರಿಯಲ್ಲೇ ಸ್ಮಗ್ಲರ್ ಗಳಿಂದಲೇ ಪೊಲೀಸರು ದರೋಡೆ ಮಾಡಿಸಿರುವ ಘಟನೆ ನಗರದಲ್ಲಿ ನಡೆದಿದೆ. ದರೋಡೆ ಮಾಡಿಸಿ ಸಿಕ್ಕಿಬಿದ್ದ ಇಬ್ಬರು ಹೆಡ್ ಕಾನ್‍ಸ್ಟೇಬಲ್‍ಗಳನ್ನು ಅಮಾನತು ಮಾಡಲಾಗಿದೆ.
ಗಿರಿನಗರ ಹೆಡ್ ಕಾನ್‍ಸ್ಟೇಬಲ್ ಮೋಹನ್, ಮಹದೇವಪುರ ಹೆಡ್ ಕಾನ್‍ಸ್ಟೇಬಲ್ ಮಮತೇಶ್ ಗೌಡ ಅಮಾನತುಗೊಂಡಿದ್ದಾರೆ. ಇವರಿಬ್ಬರು 2018 ರಿಂದ ಸಿಸಿಬಿಯಲ್ಲಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೇ ಸಿಸಿಬಿಯಿಂದ ಗಿರಿನಗರ ಹಾಗೂ ಮಹಾದೇವಪುರ ಠಾಣೆಗೆ ವರ್ಗಾವಣೆಯಾಗಿದ್ದರು. ಸಿಸಿಬಿಯಲ್ಲಿ ಇದ್ದ ವೇಳೆ ರಕ್ತ ಚಂದನದ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದರು. ಹೀಗಾಗಿ ಅವರಿಬ್ಬರಿಗೆ ರಕ್ತಚಂದನ ದರೋಡೆ ಅಡ್ಡೆ ಹಾಗೂ ಗ್ಯಾಂಗ್‍ಗಳ ಬಗ್ಗೆ ತಿಳಿದಿತ್ತು. ಇದನ್ನೂ ಓದಿ: ವೊಡಾಫೋನ್ ಐಡಿಯಾದಲ್ಲಿ ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ
ಮೋಹನ್, ಮಮತೇಶ್ ಡಿಸೆಂಬರ್ 15 ರಂದು ಕಾರಿನಲ್ಲಿ ಹೊಸಕೋಟೆ ಸಂತೆ ಸರ್ಕಲ್ ಬಳಿ ದಾಳಿ ಮಾಡಿದ್ದರು. ಈ ವೇಳೆ ಟಾಟಾ ಏಸ್‍ನಲ್ಲಿ ತರುತ್ತಿದ್ದ ರಕ್ತ ಚಂದನವನ್ನು ಸೀಜ್ ಮಾಡಿದ್ದರು. ಅವರು ಸೀಜ್ ಮಾಡಿದ ರಕ್ತಚಂದನದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಆದರೆ 5 ದಿನಗಳ ನಂತರ ಸ್ಥಳೀಯರು ಹೊಸಕೋಟೆ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಹೊಸಕೋಟೆ ಪೊಲೀಸರು ಎಫ್‍ಐಆರ್ ಹಾಕಿ, ಹುಡುಕುತ್ತಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಇಬ್ಬರೂ ಪರಾರಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್, ಮಮತೇಶ್ ಅವರನ್ನು ಅಮಾನತು ಮಾಡಲಾಗಿದೆ. ಐಜಿಪಿ ಚಂದ್ರಶೇಖರ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಅಮಾನತುಗೊಂಡು 20 ದಿನ ಕಳೆದರೂ ಹೆಡ್ ಕಾನ್‍ಸ್ಟೇಬಲ್‍ಗಳ ಬಂಧನವಾಗಿಲ್ಲ.
ಕೃತ್ಯ ಹೇಗೆ ಎಸಗುತ್ತಿದ್ದರು?
ಮೋಹನ್, ಮಮತೇಶ್‍ಗೆ ಸಿಸಿಬಿಯಲ್ಲಿದ್ದ ವೇಳೆ ರಕ್ತ ಚಂದನದ ಸ್ಮಗ್ಲಿಂಗ್ ಅಡ್ಡೆಗಳ ಪರಿಚಯ ಆಗುತ್ತದೆ. ಅಲ್ಲದೇ ಆಂಧ್ರದಲ್ಲಿ ರಕ್ತಚಂದನದ ಮರಕಡಿಯಲು ಬೆಂಗಳೂರಿನಿಂದ ಕೂಲಿಗೆ ಜನ ಹೋಗುತ್ತಿರುತ್ತಾರೆ. ಅಂತಹವರನ್ನು ಮೋಹನ್, ಮಮತೇಶ್ ಪೊಲೀಸ್ ಬಾತ್ಮೀದಾರರಾಗಿ ಬಳಸಿಕೊಳ್ಳುತ್ತಿರುತ್ತಾರೆ. ರಕ್ತಚಂದನದ ಮರ ಕಡಿಯಲು ಬೆಂಗಳೂರಿನಿಂದ ಹೋದವರು ಮರ ಕಡಿದು ಲಾರಿಗೆ ತುಂಬಿಸುತ್ತಿದ್ದಂತೆ, ಲಾರಿಯ ನಂಬರ್ ಹಾಗೂ ಲಾರಿಯಲ್ಲಿ ಎಷ್ಟು ಲೋಡ್ ಇದೆ? ವಾಹನ ಎಲ್ಲಿಗೆ ಹೋಗುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ಸ್ಮಗ್ಲರ್ ಗಳು ಈ ಇಬ್ಬರು ಪೊಲೀಸರಿಗೆ ನೀಡುತ್ತಿದ್ದರು. ಇದನ್ನೂ ಓದಿ: ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್ ಖಾತೆ ಹ್ಯಾಕ್
ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ರಕ್ತ ಚಂದನ ವಶಕ್ಕೆ ಪಡೆಯುತ್ತಿದ್ದರು. ನಂತರ ಅದನ್ನು ಯಾರಿಗೂ ತೋರಿಸದೇ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ರೀತಿ ಹಣಗಳಿಸಿರುವ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ.