ಸತ್ಯನಾರಾಯಣ ಮನ್ನೆ ನಿರ್ಮಾಣ ಮಾಡಿರೋ ಪುಣ್ಯಾತ್ಗಿತ್ತೀರು ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ರಾಮಾನುಜಂ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ನಾಲ್ಕು ಹಾಡುಗಳೂ ಇದೀಗ ಮೆಲ್ಲಗೆ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಿವೆ. ಡಾ. ವಿ ನಾಗೇಂದ್ರಪ್ರಸಾದ್ ಬರೆದಿರೋ ಟೈಟಲ್ ಸಾಂಗ್ ಅಂತೂ ಆರಂಭಿಕವಾಗಿಯೇ ಹಿಟ್ ಆಗೋ ಸೂಚನೆಗಳನ್ನ ರವಾನಿಸಿದೆ.
ಪುಣ್ಯಾತ್ಗಿತ್ತೀರು ಚಿತ್ರದ ಆಡಿಯೋ ಸಮಾರಂಭವನ್ನು ಅರ್ಥಪೂರ್ಣವಾಗಿ, ಸಾರ್ಥಕವಾಗಿ ಮಾಡಲು ಚಿತ್ರತಂಡ ಬಹು ಹಿಂದಿನಿಂದಲೇ ಪ್ರಯತ್ನ ಶುರು ಮಾಡಿತ್ತು. ಈ ಚಿತ್ರದಲ್ಲಿ ನಾಲ್ವರು ಹುಡುಗಿಯರು ಕೂಡಾ ಅನಾಥರೇ. ಹಾಗಿರೋದರಿಂದ ಅನಾಥ ಹೆಣ್ಣುಮಗಳೊಬ್ಬಳಿಂದ ಆಡಿಯೋ ರಿಲೀಸ್ ಕಾರ್ಯಕ್ರಮ ಮಾಡಿಸಲೂ ಯೋಜನೆ ಹಾಕಿಕೊಳ್ಳಲಾಗಿತ್ತು. ಅನಾಥಾಶ್ರಮವೊಂದರಿಂದ ಓರ್ವ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡು ಅದರ ಶೈಕ್ಷಣಿಕ ಜವಾಬ್ದಾರಿಯನ್ನೂ ಹೊತ್ತುಕೊಳ್ಳಲಾಗಿತ್ತು.
ಆದರೆ ಇತ್ತೀಚೆಗೆ ಆ ಮಗು ಅನಾರೋಗ್ಯಕ್ಕೀಡಾಗಿತ್ತಂತೆ. ಇನ್ನೇನು ಬಿಡುಗಡೆಯ ಕ್ಷಣಗಳು ಹತ್ತಿರದಲ್ಲಿರೋದರಿಂದ ಈ ಚಿತ್ರದ ನಾಲ್ವರು ನಾಯಕಿಯರೇ ಆಡಿಯೋ ರಿಲೀಸ್ ಮಾಡಿದ್ದಾರೆ. ರಾಮಾನುಜಂ ಸಂಗೀತ ನೀಡಿರೋ ನಾಲಕ್ಕು ಹಾಡುಗಳು ಇಲ್ಲಿವೆ. ಪುಣ್ಯಾತ್ಗಿತ್ತೀರು ಎಂಬ ಟೈಟಲ್ ಸಾಂಗನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ರಾಜಣ್ಣನ ಬೆನ್ನ ಹಿಂದೆ ಎಂಬ ಹಾಡನ್ನು ನಿರ್ದೇಶಕ ರಾಜ್ ಬಿ ಎನ್ ಅವರೇ ಬರೆದಿದ್ದಾರೆ. ಇನ್ನು ಸ್ವರಾಜ್ ಅಣ್ಣಮ್ಮ ಕಣ್ಣು ಬಿಟ್ಟು ಎಂಬ ಟಪ್ಪಾಂಗುಚ್ಚಿ ಹಾಡು ಹೊಸೆದಿದ್ದಾರೆ. ಕುಣಿದಿದೆ ಮನವು ಖುಷಿಯಲ್ಲಿ ಎಂಬ ಮೆಲೋಡಿ ಹಾಡಿಗೆ ಮೋಹನ್ ಸಾಹಿತ್ಯ ನೀಡಿದ್ದಾರೆ.
ಇದು ಯಾವ ದಿಕ್ಕೂ ಇಲ್ಲದೆ ಪಿಜಿಯಲ್ಲಿ ಬದುಕುತ್ತಾ ಥರ ಥರದ ಮೋಸವನ್ನೇ ಬದುಕಾಗಿಸಿಕೊಂಡ ಬಜಾರಿಯರ ಕಥೆ. ಫಸ್ಟ್ ಹಾಫ್‍ನ ತುಂಬಾ ಇವರ ಬಜಾರಿ ವೃತ್ತಾಂತವೇ ಸಾಗುತ್ತೆ. ಅದು ಯಾವ ಪರಿಯದ್ದೆಂದರೆ, ಪ್ರೇಕ್ಷಕರೂ ಪುಣ್ಯಾತ್ಗಿತ್ತೀರಿಗೆ ಬೈದುಕೊಳ್ಳುತ್ತಾರೆ. ಆದರೆ ಮೋಸ ಮಾಡಿಯೇ ಬದುಕೋ ಈ ಬಜಾರಿಯರಿಗೆ ಕಡೆಗೂ ಜ್ಞಾನೋದಯವಾಗಿ ಸೆಕೆಂಡ್ ಹಾಫಲ್ಲಿ ಎಲ್ಲರ ಮನಸನ್ನೂ ಸೆಳೆಯುವ ಎಮೋಷನಲ್ ವೃತ್ತಾಂತ ತೆರೆದುಕೊಳ್ಳುತ್ತೆ. ಒಟಾರೆಯಾಗಿ ಈ ಚಿತ್ರ ಎರಡು ಘಂಟೆಗಳ ಕಾಲ ಪ್ರೇಕ್ಷಕರನ್ನು ಕದಲದಂತೆ ಹಿಡಿದಿಡುತ್ತೆ. ಒಂದು ಸಂದೇಶವನ್ನು ರಚವಾನಿಸುತ್ತೆ.
ಇನ್ನು ನಿರ್ಮಾಪಕರಾದ ಸತ್ಯನಾರಾಯಣ ಮನ್ನೆಯವರಿಗೆ ಇದು ಮೊದಲ ಅನುಭವ. ಉದ್ಯೋಗವನ್ನರಸಿ ಈಗ್ಗೆ ಇಪ್ಪತ್ತೊಂದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅವರೀಗ ಸ್ವಂತದ ಬ್ಯುಸಿನೆಸ್ ನಡೆಸುತ್ತಿದ್ದಾರಂತೆ. ಆದರೆ ಸಿನಿಮಾ ನಿರ್ಮಾಣ ಮಾಡಬೇಕೆಂಬುದು ಅವರ ಹಳೇಯ ಕನಸಾಗಿತ್ತು. ಹಾಗೆಯೇ ಚಿತ್ರವನ್ನು ಮಾಡಿ ಮುಗಿಸಿದ ಖುಷಿಯನ್ನೂ ಅವರು ಹಂಚಿಕೊಂಡಿದ್ದಾರೆ.
ಪುಣ್ಯಾತ್ಗಿತ್ತೀರು ಈಗ ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿಕೊಂಡು ಥೇಟರಿನತ್ತ ಮುಖ ಮಾಡಿದ್ದಾರೆ. ಇದೇ ಏಪ್ರಿಲ್ ನಲ್ಲಿ ಈ ಚಿತ್ರವನ್ನು ತೆರೆಗಾಣಿಸಲು ತಯಾರಿ ಆರಂಭಿಸಲಾಗಿದೆ.