ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ತೀವ್ರ ಅಸಮಾಧಾನವನ್ನು ಹೊಂದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ಇಂದು ರಾಜನಹಳ್ಳಿ ಗುರುಪೀಠಾಧಿಪತಿಗಳಾದ ಪುಣ್ಯಾನಂದ ಶ್ರೀ ಭೇಟಿ ನೀಡಿದ್ದರು.
ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಳಿಕ ನಾಯಕರ ಹಾಗೂ ಪಕ್ಷದ ವಿರುದ್ಧ ರಮೇಶ್ ಜಾರಕಿಹೊಳಿ ತೀವ್ರ ಅಸಮಾಧಾನ ಹೊರ ಹಾಕಿದ್ದರು. ಅಲ್ಲದೇ ಲೋಕಸಭಾ ಚುನಾವಣೆ ಬಳಿಕ ಬಹಿರಂಗವಾಗಿಯೇ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದರು. ಅದರೆ ಬಿಜೆಪಿ ಪಳಯದಲ್ಲಿ ಆಪರೇಷನ್ ಕಮಲಕ್ಕೆ ಹಿನ್ನಡೆಯಾದ ಪರಿಣಾಮ ಒಬ್ಬೊಂಟಿಯಾಗಿದ್ದಾರೆ ಎನ್ನಲಾಗಿತ್ತು. ಈ ವೇಳೆಯೆ ಶ್ರೀಗಳು ನಗರದ ಮಿನಿಸ್ಟರ್ ಕ್ವಾಟ್ರಸ್ ನಿವಾಸಕ್ಕೆ ಭೇಟಿ ನೀಡಿ ಸಲಹೆ ನೀಡಿದ್ದಾರೆ.
Advertisement
Advertisement
ಸದ್ಯದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಾಜಿ ಸಚಿವರಿಗೆ ತಟಸ್ಥರಾಗಿರುವಂತೆ ಹಾಗೂ ದುಡುಕಿ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ವಾಲ್ಮೀಕಿ ಸಮುದಾಯದ ಹಿರಿಯ ಶ್ರೀಗಳಾಗಿರುವ ಇವರು ಈ ಹಿಂದೆ ಜಾರಕಿಹೊಳಿ ಸಹೋದರರನ್ನು ಒಂದುಗೂಡಿಸಿದ್ದರು.
Advertisement
ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ರಾಜಕಾರಣದ ಬಗ್ಗೆ ಮಾತನಾಡಿಲ್ಲ. ನಮ್ಮ ಸಮುದಾಯದ ಮೀಸಲಾತಿ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಮುದಾಯದ ಪರ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದ್ದೇವೆ. ಹೀಗಾಗಿ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಈ ಹಿಂದೆ ಜಾರಕಿಹೊಳಿ ಸಹೋದರರ ನಡುವೆ ಕುಟುಂಬದ ವೈಯಕ್ತಿಕ ಕಾರಣವಾಗಿದ್ದರಿಂದ ಮಧ್ಯ ಪ್ರವೇಶಿಸಿದ್ದೆ. ಆಗ ಇಬ್ಬರು ಸಹೋದರರನ್ನ ಒಟ್ಟು ಮಾಡಿದ್ದೆವು. ಆದರೆ ಈಗ ರಾಜಕಾರಣದ ವಿಚಾರದಲ್ಲಿ ಮಧ್ಯಪ್ರವೇಶವಿಲ್ಲ, ಅವರ ಜೊತೆ ಅದರ ಬಗ್ಗೆ ಚರ್ಚೆಯನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.