ಚಂಡೀಘಡ: ಪ್ರೇಮಿಯಿಂದ ಮೋಸ ಹೋದ ಬಳಿಕ 18 ವರ್ಷದ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಪಂಜಾಬ್‍ನ ಸತ್ನಂಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಾಶಿಯಾರ್ಪುರ್ ಜಿಲ್ಲೆಯ ನಿವಾಸಿ ಮನಿಷಾ(18) ಮೃತ ಯುವತಿ. ಈಕೆ ಫಾಗ್ವಾರಾದಲ್ಲಿ ಮಾನ್ಸಾ ದೇವಿ ನಗರ್ ಮೋಹಲ್ಲಾದಲ್ಲಿ ವಸತಿಯಲ್ಲಿ ಬಾಡಿಗೆ ಇದ್ದಳು. ಮನಿಷಾ ಕೆಲಸ ಹುಡುಕಿಕೊಂಡು ಪಂಜಾಬಿಗೆ ಬಂದಿದ್ದಳು. ಎಂದು ಸತ್ನಾಂಪುರಾ ಪೊಲೀಸ್ ಠಾಣೆಯ ಎಸ್.ಎಸ್. ಪಟ್ಟಾರ್ ತಿಳಿಸಿದ್ದಾರೆ.
ಗುರುವಾರ ರಾತ್ರಿ ಮನಿಷಾ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅದನ್ನು ಇನ್ ಸ್ಟಾಗ್ರಾಂನಲ್ಲಿ ಲೈವ್ ಮಾಡಿದ್ದಾಳೆ ಎಂದು ಪಟ್ಟಾರ್ ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ರೂಮಿನಲ್ಲಿ ಒಂದು ಪತ್ರ ಸಿಕ್ಕಿದ್ದು, ಅದರಲ್ಲಿ ಪ್ರಿಯಕರನ ಹೆಸರು ಮತ್ತು ಪ್ರೀತಿಯಿಂದ ಮೋಸ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾಳೆ. ಆತನ ಹೆಸರು ಇಂದರ್ ಎಂದು ಉಲ್ಲೇಖಿಸಿದ್ದಾಳೆ. ಅಷ್ಟು ಬಿಟ್ಟು ಆತನ ವಿಳಾಸವನ್ನು ತಿಳಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಮನಿಷಾ ತಂದೆ ಫ್ರಾನ್ಸ್ ನಲ್ಲಿದ್ದು, ತಾಯಿ ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ತಂದೆಗೆ ತಿಳಿಸಲಾಗಿದೆ. ಸದ್ಯಕ್ಕೆ ಮನಿಷಾ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮನಿಷಾ ಪ್ರಿಯಕರ ಇಂದರ್ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆಕೆಯ ಮೊಬೈಲ್ ಕರೆಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬರುತ್ತದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಟ್ಟಾರ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv