– ಶಿಕ್ಷಕರ ಎತ್ತಂಗಡಿಗೆ ಸಿಎಂ ಆದೇಶ
ಚಂಢಿಗಡ್: ಶಾಲೆಯ ಶೌಚಾಲಯದೊಳಗೆ ಸ್ಯಾನಿಟರಿ ಪ್ಯಾಡ್ ಹಾಕಿದ್ದ ಮಕ್ಕಳ ಬಟ್ಟೆಯನ್ನ ಕಳಚಿದ್ದ ಶಿಕ್ಷಕರನ್ನ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಎತ್ತಗಂಡಿ ಮಾಡಲು ಆದೇಶ ನೀಡಿದ್ದಾರೆ.
ಶಾಲೆಯ ಟಾಯ್ಲೆಟ್ ನಲ್ಲಿ ವಿದ್ಯಾರ್ಥಿನಿಯೊಬ್ಬಳು ಸ್ಯಾನಿಟರಿ ಪ್ಯಾಡ್ ಹಾಕಿದ್ದ ಕಾರಣ ಅಲ್ಲಿನ ಶಿಕ್ಷಕರು ಶಾಲಾ ಆವರಣದಲ್ಲಿಯೇ ಎಲ್ಲಾ ವಿದ್ಯಾರ್ಥಿನಿಯರ ಬಟ್ಟೆ ಕಳಚಿದ ಘಟನೆ ಫಝಿಲ್ಕಾ ಜಿಲ್ಲೆಯ ಕುಂದಾಲ್ ಹಳ್ಳಿಯ ಶಾಲೆಯಲ್ಲಿ ಗುರುವಾರ ನಡೆದಿತ್ತು.
ಈ ಘಟನೆ ಪಂಜಾಬ್ ಮುಖ್ಯಮಂತ್ರಿಯ ಗಮನಕ್ಕೆ ಬಂದಿದ್ದು, ಸೋಮವಾರದಂದು ಈ ವಿಷಯದ ಸಂಪೂರ್ಣ ತನಿಖೆ ನಡೆಸಿ ಹಾಗೂ ಸೂಕ್ತ ನಿರ್ಧಾರವನ್ನ ತೆಗೆದುಕೊಳ್ಳಬೇಕೆಂದು ರಾಜ್ಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕ್ರಿಶನ್ ಕುಮಾರ್ ಅವರಿಗೆ ಆದೇಶ ನೀಡಿದ್ದಾರೆ.
ಶಾಲೆಯ ಟಾಯ್ಲೆಟ್ ನಲ್ಲಿ ಯಾರು ಸ್ಯಾನಿಟರಿ ಪ್ಯಾಡ್ ಹಾಕಿದ್ದಾರೆ ಎಂಬುದನ್ನ ಕಂಡು ಹಿಡಿಯಲು ಆ ಶಾಲೆಯ ವಿದ್ಯಾರ್ಥಿನಿಯರನ್ನ ಎಲ್ಲರ ಮುಂದೆ ಬಟ್ಟೆ ಕಳಚಿರುವ ವಿಡಿಯೋ ದೊರಕಿದ್ದು, ಈ ವಿಡಿಯೋದಲ್ಲಿ ಕೆಲವು ವಿದ್ಯಾರ್ಥಿನಿಯರು ನಮ್ಮನ್ನ ಶಾಲೆಯ ಆವರಣದಲ್ಲಿ ನಿಲ್ಲಿಸಿ ಬಟ್ಟೆಯನ್ನ ಕಳಚಿದ್ದಾರೆ ಎಂದು ಜೋರಾಗಿ ಅಳುತ್ತಿದ್ದರು. ಶಿಕ್ಷಕರು ಸ್ಯಾನಿಟರಿ ಪ್ಯಾಡ್ ಸರಿಯಾಗಿ ವಿಲೇವಾರಿ ಮಾಡುವುದರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಬದಲು ಈ ರೀತಿ ಬಟ್ಟೆ ಕಳಚಿರುವುದು ಅಮಾನವೀಯವಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.
ಈ ಸಂಬಂಧ ತನಿಖಾ ವರದಿ ಬಂದ ನಂತರ ಆ ಶಿಕ್ಷಕರ ವಿರುದ್ಧ ಕಠಿಣ ಶಿಸ್ತಿನ ಕ್ರಮವನ್ನ ತೆಗೆದುಕೊಳ್ಳುವುದಾಗಿ ಪಂಜಾಬ್ ಸರ್ಕಾರ ತಿಳಿಸಿದ್ದು, ಅಂತಿಮ ವಿಚಾರಣೆಯ ವರದಿಯನ್ನ ವೈಯಕ್ತಿಕವಾಗಿ ತಿಳಿಸಲು ಕ್ರಿಶನ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಅವರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv