ಚಂಡೀಗಢ: ಪಂಜಾಬ್‍ನ ಬಾಥಿಂಡಾ ಖಾಸಗಿ ವಿಶ್ವವಿದ್ಯಾಲಯದ ಹಾಸ್ಟೆಲ್ ವಾರ್ಡನ್ ವಿರುದ್ಧ ಸುಮಾರು 500 ವಿದ್ಯಾರ್ಥಿನಿಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಬಳಕೆ ಮಾಡಿದ ಸ್ಯಾನಿಟರಿ ಪ್ಯಾಡನ್ನು ಶೌಚಾಲಯದಲ್ಲಿ ಹಾಕಿದ್ದಾರೆಂದು ಆರೋಪಿಸಿ ಚೆಕ್ ಮಾಡಲು ಎಲ್ಲರ ಮುಂದೆಯೇ ಬಟ್ಟೆ ಬಿಚ್ಚುವಂತೆ ಹೇಳಿದ್ದಾರೆ ಎಂದು ಪ್ರತಿಭಟನೆಯ ವೇಳೆ ವಿದ್ಯಾರ್ಥಿನಿಯರು ವಾರ್ಡನ್ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಇದೊಂದು ಸಣ್ಣ ಘಟನೆ ಆಗಿದೆ. ಆದರೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವ ಮೂಲಕ ದೊಡ್ಡದಾಗಿ ಬಿಂಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಆದರೆ ಈ ಬಗ್ಗೆ ಆಡಳಿತ ಮಂಡಳಿ ನಾಲ್ವರು ಸಿಬ್ಬಂದಿ ವಿರುದ್ಧ ಕಾನೂನಾತ್ಮಕವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮೂಲಕ ಇಬ್ಬರು ಮಹಿಳಾ ವಾರ್ಡನ್ ಹಾಗೂ ಇಬ್ಬರು ಮಹಿಳಾ ಸೆಕ್ಯೂರಿಟಿ ಗಾರ್ಡ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದೀಗ ಯುನಿವರ್ಸಿಟಿಯ ಅಧಿಕಾರಿಗಳು ಈ ನಾಲ್ವರು ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ. ಅಲ್ಲದೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಪರಸ್ಪರ ಮಾತನಾಡಿಕೊಳ್ಳಲು ಕೂಡ ಅವಕಾಶ ಕೊಡುವುದಿಲ್ಲ ಎಂದು ಪ್ರತಿಭಟನೆಯ ವೇಳೆ ವಿದ್ಯಾರ್ಥಿನಿಯರು ದೂರಿದ್ದಾರೆ.
ಘಟನೆಯಿಂದ ನೊಂದು ಇದೀಗ ಕಾಲೇಜಿನ ಅಧಿಕಾರಿಗಳು ಹಾಗೂ ವಾರ್ಡನ್ ವಿರುದ್ಧ ಧೈರ್ಯವಾಗಿ ಪ್ರತಿಭಟನೆಗೆ ಇಳಿದಿದ್ದೇವೆ. ಹೀಗಾಗಿ ವಾರ್ಡನ್ ಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ವಿದ್ಯಾರ್ಥಿನಿಯರು ಎಚ್ಚರಿಕೆ ನೀಡಿದ್ದಾರೆ.
2018ರ ನವೆಂಬರ್ ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿತ್ತು. ಎರಡು ದಿನಗಳ ಹಿಂದೆ ವಾರ್ಡನ್ ಬಳಸಿದ ಸ್ಯಾನಿಟರಿ ಪ್ಯಾಡನ್ನು ಶೌಚಾಲಯದೊಳಗೆ ಹಾಕಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಶಾಲೆಯ ಶಿಕ್ಷಕರು ಸುಮಾರು 15 ಮಂದಿ ವಿದ್ಯಾರ್ಥಿನಿಯರಲ್ಲಿ ಯೂನಿಫಾರಂ ಬಿಚ್ಚುವಂತೆ ಹೇಳಿದ್ದರು.