ನವದೆಹಲಿ: ರಾಜಕೀಯ ಪಕ್ಷಗಳ ಮನವಿಯ ಮೇರೆಗೆ ಪಂಜಾಬ್ ಚುನಾವಣಾ ದಿನಾಂಕವನ್ನು ಮುಂದೂಡಲಾಗಿದೆ.
ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಒಟ್ಟಾಗಿ ಚುನಾವಣಾ ದಿನಾಂಕವನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಆಯೋಗ ದಿನಾಂಕವನ್ನು 6 ದಿನ ಮುಂದಕ್ಕೆ ಹಾಕಿದೆ.
Advertisement
Advertisement
ಫೆಬ್ರವರಿ 14 ರಂದು ವಿಧಾನಸಭಾ ಚುನಾವಣೆ ನಡೆಯಬೇಕಿತ್ತು. ಇದೀಗ ಈ ಚುನಾವಣೆಯನ್ನು ಆಯೋಗವು ಫೆ.20ಕ್ಕೆ ಮುಂದೂಡಿದೆ. ಹೀಗಾಗಿ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?: ಬಿಜೆಪಿ
Advertisement
ಬರುವ ತಿಂಗಳು ಚುನಾವಣೆ ಇರುವ ಹಿನ್ನೆಲೆಯಲ್ಲಿ ಹಲವು ರಾಜಕೀಯ ಪಕ್ಷಗಳು ಇಂದು ಬೆಳಗ್ಗೆ ಸಭೆ ಕರೆದಿದ್ದವು. ಈ ವೇಳೆ ಚುನಾವಣಾ ದಿನಾಂಕ ಮುಂದೂಡುವಂತೆ ಒಮ್ಮತದ ಅಭಿಪ್ರಾಯ ಪಡೆದು ಅದನ್ನು ಆಯೋಗದ ಮುಂದಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಚುನಾವಣಾ ದಿನಾಂಕವನ್ನು ಮುಂದಕ್ಕೆ ಹಾಕಿದ್ದು, ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ.
Advertisement
ಪಂಜಾಬ್ ನಲ್ಲಿ ಫೆ.16 ರಂದು ಗುರು ರವಿದಾಸ್ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಶೇ.32 ಮತದಾರರಿರುವ ಪರಿಶಿಷ್ಟ ಜಾತಿಯ ಸಮುದಾಯ ಈ ಜನ್ಮದಿನವನ್ನು ವಿಶೇಷ ಆಚರಿಸುತ್ತದೆ. ಇದಕ್ಕಾಗಿ ಅವರು ಫೆಬ್ರವರಿ 10ರಿಂದ 16 ವರೆಗೂ ಉತ್ತರಪ್ರದೇಶದ ವಾರಣಾಸಿಗೆ ತೆರಳುತ್ತಾರೆ. ಫೆಬ್ರವರಿ 14 ರಂದು ಮತದಾನಕ್ಕೆ ದಿನಾಂಕ ನಿಗದಿಯಾಗಿದ್ದು, ಈ ಅವಧಿಯಲ್ಲಿ ಪಂಜಾಬ್‍ನಲ್ಲಿ ಪರಿಶಿಷ್ಠ ಜಾತಿಯ ಜನರು ಅನುಪಸ್ಥಿತಿಯಲ್ಲಿರಲಿದ್ದಾರೆ. ದೊಡ್ಡ ಪ್ರಮಾಣದ ಮತದಾರರ ಅನುಪಸ್ಥಿತಿಯಲ್ಲಿ ಮತದಾನ ನಡೆಸುವುದು ಸೂಕ್ತವಲ್ಲ ಎಂದು ಮುಖ್ಯಮಂತ್ರಿ ಚನ್ನಿ ಅವರು ಆಯೋಗಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದರು.