– ನೀರು ಕೇಳೋ ನೆಪದಲ್ಲಿ ಲೈಂಗಿಕ ದೌರ್ಜನ್ಯ
ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗಳಿಬ್ಬರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಒಂದನೇ ಅಧಿಕ ಹಾವೇರಿ ಜಿಲ್ಲಾ ಸತ್ರ (ಪೋಕ್ಸೋ) ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಅಪರಾಧಿಗಳನ್ನು ಫಕ್ಕೀರೇಶ ಈರಪ್ಪ ಕಾಮನಹಳ್ಳಿ ವಾಲಿಕಾರ ಮತ್ತು ಬಸವರಾಜ್ ರಾಮಪ್ಪ ಸಣ್ಣಪ್ಪನವರ್ ಎಂದು ಗುರುತಿಸಲಾಗಿದೆ. ಫಕ್ಕೀರೇಶನಿಗೆ 10 ವರ್ಷಗಳ ಸಜೆ, ಎರಡನೇ ಆರೋಪಿ ಬಸವರಾಜ್ ರಾಮಪ್ಪ ಸಣ್ಣಪ್ಪನವರ ಈತನಿಗೆ 7 ವರ್ಷಗಳ ಶಿಕ್ಷೆ ಹಾಗೂ ದಂಡ ವಿಧಿಸಿ ಒಂದನೇ ಅಧಿಕ ಹಾವೇರಿ ಜಿಲ್ಲಾ ಸತ್ರ (ಪೋಕ್ಸೋ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಅಪರಾಧಿಗಳಿಬ್ಬರೂ ಅಪ್ರಾಪ್ತ ಬಾಲಕಿಯನ್ನು ನಿತ್ಯ ಶಾಲೆಗೆ ವಾಹನದಲ್ಲಿ ಬಿಡುವುದು ಹಾಗೂ ಕರೆತರುವುದು ಮಾಡಿ ಪರಿಚಯ ಮಾಡಿಕೊಂಡಿದ್ದರು. ಒಂದು ದಿನ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೀರು ಕೇಳುವ ನೆಪದಲ್ಲಿ ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಕುರಿತಂತೆ ದೂರು ದಾಖಲಾಗಿತ್ತು. ಈ ಸಂಬಂಧ ಶಿಗ್ಗಾಂವ ವೃತ್ತ ನಿರೀಕ್ಷಕರು ಅಪರಾಧಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
Advertisement
ಸದರಿ ಪ್ರಕರಣದ ಸುಧೀರ್ಘ ವಿಚಾರಣೆ ಬಳಿಕ ಒಂದನೇ ಅಧಿಕ ಜಿಲ್ಲಾ ಸತ್ರ (ಪೋಕ್ಸೋ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಅಪರಾಧಿಗಳ ಮೇಲಿನ ಆರೋಪಗಳು ರುಜುವಾತಾಗಿದೆ. ಆದ್ದರಿಂದ ಪ್ರಕರಣದ ಒಂದನೇ ಅಪರಾಧಿಗೆ ಫಕ್ಕೀರೇಶ ಈರಪ್ಪ ಕಾಮನಹಳ್ಳಿ ವಾಲಿಕಾರನಿಗೆ ಕಲಂ 376 ಐಪಿಸಿ ಮತ್ತು ಕಲಂ 4 ಮತ್ತು 6 ಪೋಕ್ಸೋ ಕಾಯ್ದೆಯಡಿ 10 ವರ್ಷಗಳ ಸಜೆ ಮತ್ತು 10 ಸಾವಿರ ದಂಡ ವಿಧಿಸಲಾಗಿದೆ.
Advertisement
ಎರಡನೇ ಆರೋಪಿ ಬಸವರಾಜನಿಗೆ ಏಳು ವರ್ಷ ಸಜೆ ಮತ್ತು 10 ಸಾವಿರ ದಂಡವಿಧಿಸಲಾಗಿದೆ. ಅಲ್ಲದೇ ಸಂತ್ರಸ್ತೆಗೆ 15 ಸಾವಿರ ರೂ. ನೀಡಲು ಕೋರ್ಟ್ ಆದೇಶಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ (ಪೋಕ್ಸೋ) ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ವಿನಾಯಕ ಎಸ್.ಪಾಟೀಲ್ ಅವರು ವಾದ ಮಂಡಿಸಿದ್ದರು.