ಹೈದರಾಬಾದ್: ಭಾರತೀಯ ಮುಸ್ಲಿಮರನ್ನು ಯಾರಾದ್ರು ಪಾಕಿಸ್ತಾನಿ ಅಂತ ಕರೆದ್ರೆ ಅವರನ್ನು ಜೈಲು ಶಿಕ್ಷೆಗೆ ಒಳಪಡಿಸಿ ಅಂತ ಅಖಿಲ ಭಾರತ ಮಜ್ಲಿಸ್ ಇ ಇಥೆಹಾದುಲ್ ಮುಸಲ್ಮಿನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸುವ ವೇಳೆ ಮಾತನಾಡಿದ ಓವೈಸಿ, ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಅಂತ ಕರೆಯುವವರನ್ನು ಶಿಕ್ಷೆಗೆ ಒಳಪಡಿಸಬೇಕು. ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಬೇಕು ಅಂತ ಹೇಳಿದ್ರು.
ಅಂತಹ ಹೇಳಿಕೆ ನೀಡುವವರನ್ನು ಕೂಡಲೇ ಜೈಲಿಗಟ್ಟುವ ಕಾನೂನು ತರಬೇಕು. ಆದ್ರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂತಹ ಕಾನೂನು ತರುವುದಿಲ್ಲ. ಭಾರತದಲ್ಲಿರುವ ಮುಸ್ಲಿಮರು ಮೊಹಮ್ಮದ್ ಅಲಿ ಜಿನ್ನಾರವರ ಎರಡು ರಾಷ್ಟ್ರಗಳ ನೀತಿಯನ್ನು ತಿರಸ್ಕರಿಸಿದ್ದರು ಎಂದು ಹೇಳಿದ್ರು.
ಇದೇ ವೇಳೆ ತ್ರಿವಳಿ ತಲಾಖ್ ಕುರಿತಂತೆ ಮಾತನಾಡಿದ ಅವರು, ಸರ್ಕಾರದ ನಿರ್ಧಾರ ಮಹಿಳಾ ವಿರೋಧಿಯಾಗಿದೆ ಎಂದರು. ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿರುವ ಮಸೂದೆಯಿಂದ ತ್ವರಿತ ತ್ರಿವಳಿ ತಲಾಖ್ ಕಾನೂನು ಬಾಹಿರವಾಗುತ್ತದೆ. ಪತಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತಾದರೂ, ರಾಜ್ಯಸಭೆಯಲ್ಲಿ ವಿರೋಧಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
ಫೆ 9 ಮತ್ತು 10ರಂದು ಹೈದರಾಬಾದ್ ನಲ್ಲಿರೋ ಓವೈಸಿ ಆಸ್ಪತ್ರೆಯಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್(ಎಐಎಂಪಿಎಲ್‍ಬಿ) ವತಿಯಿಂದ ಸಮಗ್ರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಗಣ್ಯರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದು, ಮುಸ್ಲಿಂ ವೈಯಕ್ತಿಕ ಕಾನೂನು ಕಾಪಾಡಲು ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ವರದಿಯಾಗಿದೆ.