CinemaKarnatakaLatestLeading NewsMain PostSandalwood

‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಅಪ್ಪುಗೆ ಅರ್ಪಿಸಿದ ಪುನೀತ್ ಪತ್ನಿ ಅಶ್ವಿನಿ

ನಿನ್ನೆಯಷ್ಟೇ ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು. ಪುನೀತ್ ಪತ್ನಿ ಅಶ್ವಿನಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿ, ಸರಕಾರಕ್ಕೆ ಧನ್ಯವಾಗಳನ್ನು ತಿಳಿಸಿದರು. ಮಳೆಯ ನಡುವೆಯೂ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಪ್ರಶಸ್ತಿ ಪ್ರದಾನ ಮಾಡಿದರೆ, ತಮಿಳು ನಟ ರಜನಿಕಾಂತ್, ತೆಲುಗು ನಟ ಜ್ಯೂನಿಯರ್ ಎನ್.ಟಿ.ಆರ್, ನಟ ಶಿವರಾಜ್ ಕುಮಾರ್, ಸುಧಾಮೂರ್ತಿ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಮನೆಗೆ ಆಗಮಿಸಿದ ಪುನೀತ್ ಪತ್ನಿ ಅಶ್ವಿನಿ (Ashwini Rajkumar) ಹಾಗೂ ಪುತ್ರಿ ಪ್ರಶಸ್ತಿಯ ಮೆಡಲ್ ಅನ್ನು ಪುನೀತ್ ಅವರ ಫೋಟೋಗೆ ಅರ್ಪಿಸಿದರು. ಈ ಮೂಲಕ ಕರ್ನಾಟಕ ರತ್ನ ಪ್ರಶಸ್ತಿಯನ್ನು ಅಪ್ಪುಗೆ ತಲುಪಿಸಿದ್ದು ಭಾವುಕ ಕ್ಷಣಕ್ಕೆ ಸಾಕ್ಷಿ ಆಯಿತು. ಪುನೀತ್ ಅವರ ಫೋಟೋ ಮೇಲೆಯೆ ಅವರ ತಂದೆ ಮತ್ತು ತಾಯಿಯ ಫೋಟೋ ಕೂಡ ಇದ್ದ ಕಾರಣಕ್ಕಾಗಿ ಇಬ್ಬರು ಕರ್ನಾಟಕ ರತ್ನಗಳಿಗೆ ಒಂದು ರೀತಿಯಲ್ಲಿ ಗೌರವ ಸೂಚಿಸುವ ಕ್ಷಣವೂ ಅದಾಗಿತ್ತು. ಸಿನಿಮಾ ರಂಗ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಪುನೀತ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿದ್ದು, ಸಿನಿಮಾ ರಂಗದಿಂದ ಇಂಥದ್ದೊಂದು ಗೌರವಕ್ಕೆ ಪಾತ್ರರಾದ ಎರಡನೇ ಗಣ್ಯವ್ಯಕ್ತಿ ಇವರಾಗಿದ್ದಾರೆ. ಇದನ್ನೂ ಓದಿ:ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ: ಅತಿಥಿಯಾಗಿ ಬೆಂಗಳೂರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್

ಕರ್ನಾಟಕ ರತ್ನ ಪ್ರಶಸ್ತಿ ಪ್ರಾರಂಭವಾದಾಗ ಮೊದಲ ಪ್ರಶಸ್ತಿಯನ್ನು ರಾಷ್ಟ್ರಕವಿ ಕುವೆಂಪು ಮತ್ತು ಡಾ.ರಾಜ್ ಕುಮಾರ್ ಅವರಿಗೆ ದೊರೆತಿತ್ತು. ಮೂವತ್ತು ವರ್ಷಗಳ ನಂತರ ಮತ್ತೆ ಸಿನಿಮಾ ರಂಗಕ್ಕೆ ಅದರಲ್ಲೂ ಡಾ.ರಾಜ್ ಕುಟುಂಬಕ್ಕೆ ಈ ಗೌರವ ದೊರೆತಿದೆ. ಹಾಗಾಗಿಯೇ ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಈ ಸಮಾರಂಭದಲ್ಲಿ ಹಾಜರಿದ್ದರು. ಡಾ.ರಾಜ್ ಕುಮಾರ್ ಅವರ ಅಷ್ಟೂ ಮಕ್ಕಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ವಿಶೇಷ.

ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪುನೀತ್ ಅವರ ನೆಚ್ಚಿನ ನಟರಾಗಿದ್ದ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) , ಹಾಗೂ ಗೆಳೆಯ ಮತ್ತು ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ (Jr.NTR), ಸುಧಾಮೂರ್ತಿ ಅವರು ಅತಿಥಿಗಳಾಗಿ ಆಗಮಿಸಿದ್ದರು. ಸಚಿವರಾದ ವಿ.ಸುನೀಲ್ ಕುಮಾರ್, ಆರ್.ಅಶೋಕ್, ಮುನಿರತ್ನ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಶಸ್ತಿ ಪ್ರದಾನಕ್ಕೂ ಮುನ್ನ ಕನ್ನಡದ ಖ್ಯಾತ ಗಾಯಕ ವಿಜಯ ಪ್ರಕಾಶ್ ಮತ್ತು ತಂಡದಿಂದ ಕನ್ನಡದ ಗೀತೆಗಳು ಮತ್ತು ಪುನೀತ್ ರಾಜ್ ಕುಮಾರ್ ನಟನೆಯ ಹಾಡುಗಳನ್ನು ಹೇಳಲಾಯಿತು. ಪುನೀತ್ ಹಾಡಿದ ಹಾಡುಗಳಿಗೂ ಕಲಾವಿದರು ದನಿಯಾಗಿದ್ದು ವಿಶೇಷವಾಗಿತ್ತು.

Live Tv

Leave a Reply

Your email address will not be published. Required fields are marked *

Back to top button