ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿದ್ದು, ಅವರ ಅಂತಿಮ ದರ್ಶನ ಪಡೆಯಲು ಗಣ್ಯಾತಿಗಣ್ಯರು ಆಗಮಿಸುತ್ತಿದ್ದಾರೆ. ಸೋಮವಾರ ಸಂಜೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಇಂದು ನಟ ಜಗ್ಗೇಶ್, ಪ್ರಕಾಶ್ ರೈ ಮತ್ತಿತರರು ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪುನೀತ್ ರಾಜ್‍ಕುಮಾರ್, ಶ್ರೀ ಸಿದ್ದಗಂಗಾ ಸ್ವಾಮೀಜಿ ಅವರು ಲಕ್ಷಾಂತರ ಮಂದಿಗೆ ವಿದ್ಯಾದಾನ ಮತ್ತು ಅನ್ನದಾನ ಮಾಡಿದ ದೇವರು ಅವರು. ಅವರನ್ನು ನಡೆದಾಡುವ ದೇವರು ಎಂದೇ ಕರೆಯುತ್ತಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದರು. ಇದೇ ವೇಳೆ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಶ್ರೀಗಳಿಗೆ ಯಾವುದೇ ಪ್ರಶಸ್ತಿ ನೀಡಿದರೂ ಅದು ಕಡಿಮೆಯೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು
ಭಕ್ತರಿಗೆ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ನನ್ನ ಕೆಲ ಸಿನಿಮಾಗಳ ಆಡಿಯೋಗಳು ಈ ಮಠದಲ್ಲಿಯೇ ರಿಲೀಸ್ ಆಗಿದೆ. ಆ ಕ್ಷಣಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ಮತ್ತು ನನ್ನ ಕುಟುಂಬದವರು ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇವೆ. ಶ್ರೀಗಳ ಆಶೀರ್ವಾದ ಎಲ್ಲರ ಮೇಲೂ ಹೀಗೆ ಇರಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ:ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ
ನಟ ಜಗ್ಗೇಶ್ ಕೂಡ ಶ್ರೀಗಳ ಅಂತಿಮ ದರ್ಶನ ಪಡೆದು, “ಶ್ರೀಗಳು ನಮ್ಮೊಂದಿಗೆ ಇಲ್ಲ. ದೇವರು ದೇವರ ಬಳಿ ಹೋಗಿದ್ದಾರೆ. ನಡೆದಾಡುವ ದೇವರಿಗೆ ವಿಶ್ವದ ಮೂಲೆ ಮೂಲೆಗಳಲ್ಲಿ ಶಿಷ್ಯವೃಂದ ಇದ್ದಾರೆ. ಸ್ವಾಮೀಜಿಗೆ ನನ್ನ ಕಡೆಯ ನಮಸ್ಕಾರ ಮಾಡಲು ಬಂದಿದ್ದೇನೆ. ಭಾಗಮಾಸ ಆರಂಭದಲ್ಲಿ ಸೋಮವಾರ ಒಳ್ಳೆಯದು. ಶ್ರೀಗಳು ಸೋಮವಾರ ಐಕ್ಯರಾಗಿದ್ದಾರೆ. ಅವರು ಶರಣರಾಗಿದ್ದಕ್ಕೆ ಸೋಮವಾರ ಐಕ್ಯರಾದರು. ಶ್ರೀಗಳು ಆಧುನಿಕ ಕೃಷ್ಣ, ಆಧುನಿಕ ಶಿವ ಆಗಿದ್ದಾರೆ” ಎಂದು ಬಣ್ಣಿಸಿದರು.
https://www.youtube.com/watch?v=qTT9kbHS20M
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv