ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಮಾರ್ಚ್ 17ರಂದು 44ನೇ ವಸಂತಕ್ಕೆ ಕಾಲಿಡಲಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್‍ಗೆ ಮೊದಲ ಬಲಿ ಹಿನ್ನೆಲೆಯಲ್ಲಿ ಈ ವರ್ಷ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.
ತಾವು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದ ಬಗ್ಗೆ ಟ್ವಿಟ್ಟರಿನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ತಿಳಿಸಿದ್ದಾರೆ. “ಎಲ್ಲಾ ಸಮಸ್ತ ಅಭಿಮಾನಿ ದೇವರುಗಳಿಗೆ ನಮಸ್ಕಾರ. ಈ ವರ್ಷ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಯಾರೂ 17 ರಂದು ತಮ್ಮ ತಮ್ಮ ಊರುಗಳಿಂದ ಮನೆಯ ಹತ್ತಿರ ಬರಬೇಡಿ. ನಾನು ಮನೆಯಲ್ಲೂ ಇರುವುದಿಲ್ಲ” ಎಂದು ಮನವಿ ಮಾಡಿಕೊಂಡಿದ್ದಾರೆ.
“ಯಾಕೆಂದರೆ ಇಡೀ ದೇಶದಲ್ಲಿ ಕೊರೊನಾ ವೈರಸ್ ಸಮಸ್ಯೆ ಇದೆ. ಇದಕ್ಕಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವೆಲ್ಲರೂ ಸೇರಿ ಕೈ ಜೋಡಿಸಬೇಕು. ಹಾಗಾಗಿ ಬೇರೆ ಬೇರೆ ಊರುಗಳಿಂದ ಬಂದು ನಿಮ್ಮ ಪ್ರೀತಿ, ವಿಶ್ವಾಸ ತೋರಿಸುತ್ತಿದ್ರಿ. ಖಂಡಿತವಾಗಿ ನಿಮ್ಮ ಪ್ರೀತಿ ಮತ್ತು ವಿಶ್ವಾಸ ನನ್ನ ಮೇಲೆ ಇರುತ್ತದೆ ಎಂದು ನಾನು ಭಾವಿಸಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ, ಹುಷಾರಾಗಿರಿ” ಎಂದು ವಿಡಿಯೋದಲ್ಲಿ ತಿಳಿದರು.
ಪ್ರತಿ ವರ್ಷ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ಮನೆ ಮುಂದೆ ಸೇರುತ್ತಿದ್ದರು. ಹೆಚ್ಚಿನ ಜನ ಸೇರುವ ಹಿನ್ನೆಲೆಯಲ್ಲಿ ಪುನೀತ್ ಈ ವರ್ಷ ಹುಟ್ಟುಹಬ್ಬ ಮಾಡಿಕೊಳ್ಳದಿರಲು ತೀರ್ಮಾನಿಸಿದ್ದಾರೆ.
ಪುನೀತ್ ರಾಜ್‍ಕುಮಾರ್ ನಟಿಸುತ್ತಿರುವ ‘ಯುವರತ್ನ’ ಸಿನಿಮಾ ಬಾರೀ ನಿರೀಕ್ಷೆ ಹುಟ್ಟುಹಾಕಿದೆ. ಯುವರತ್ನ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಹಾಡೊಂದರ ಚಿತ್ರೀಕರಣಕ್ಕಾಗಿ ಚಿತ್ರತಂಡ ಯುರೋಪ್‍ಗೆ ತೆರಳಲು ಪ್ಲಾನ್ ಮಾಡಿಕೊಂಡಿತ್ತು. ಯುರೋಪ್‍ನ ಸ್ಲೋವೇನಿಯಾದಲ್ಲಿ ಹಾಡಿನ ಚಿತ್ರೀಕರಣ ಮಾಡಲು ಚಿತ್ರತಂಡ ಮುಂದಾಗಿತ್ತು.
https://twitter.com/PuneethRajkumar/status/1238672777072095245
3-4 ದಿನಗಳ ಕಾಲ ಯುರೋಪಿನಲ್ಲೇ ಚಿತ್ರತಂಡ ತಂಗಲು ಪ್ಲಾನ್ ಮಾಡಿದ್ದ ಹಿನ್ನೆಲೆ ಟಿಕೆಟ್, ಹೋಟೆಲ್ ಎಲ್ಲವೂ ಬುಕ್ ಮಾಡಲಾಗಿತ್ತು. ಆದರೆ ಮಹಾಮಾರಿ ಕೊರೊನಾ ಭೀತಿಯಿಂದ ‘ಯುವರತ್ನ’ ಚಿತ್ರತಂಡ ಯುರೋಪ್ ಪ್ರವಾಸ ರದ್ದು ಮಾಡಿತ್ತು.