ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಪುನೀತ್ ರಾಜ್‍ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಕೊನೆಯದಾಗಿ ಪೋಸ್ಟ್ ಮಾಡಿದ್ದರು.
ಉತ್ತರ ಕನ್ನಡ ಜಿಲ್ಲೆಗೂ ನಟ ಪುನೀತ್ ರಾಜ್‍ಕುಮಾರ್ ಅವರಿಗೂ ಅವಿನಾಭಾವ ಸಂಬಂಧವಿದ್ದು, ಫೆಬ್ರವರಿ ತಿಂಗಳಲ್ಲಿ ಜಿಲ್ಲೆಯಲ್ಲಿ ಡಾಕ್ಯುಮೆಂಟರಿ ಚಿತ್ರೀಕರಣಕ್ಕೆ ಈ ಭಾಗಕ್ಕೆ ಬಂದು ಇಲ್ಲಿನ ಸೌಂದರ್ಯದ ಬಗ್ಗೆ ಮೂಕ ವಿಸ್ಮಿತರಾಗಿದ್ದರು.
ಬುಧವಾರ ಮುರುಡೇಶ್ವರದಲ್ಲಿ ತಾವು ಸ್ಕೂಬಾ ಡೈ ಮಾಡಿದ ಹಾಗೂ ಡಾಕ್ಯುಮೆಂಟರಿ ಚಿತ್ರೀಕರಣದ ಜಿಲ್ಲೆಯ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿತ್ರೀಕರಿಸಿದ್ದ ಡಾಕ್ಯುಮೆಂಟರಿಯ ಬಿಡುಗಡೆಗೆ ಎರಡೇ ದಿನ ಇರುವಾಗ ಅವರ ಅಗಲಿಕೆ ದೊಡ್ಡ ನೋವು ತಂದಿದೆ.
ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು.
ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು.
ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು.
ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.
ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. @amoghavarsha @AJANEESHB @PRK_Productions @PRKAudio #mudskipper pic.twitter.com/ncE6CxOQrg
— Puneeth Rajkumar (@PuneethRajkumar) October 27, 2021
ಹಸಿರಿನ ನೆಲದಲ್ಲಿ ಪುನೀತ್ ಸಂಬಂಧ
ಪುನೀತ್ ರಾಜ್‍ಕುಮಾರ್‌ಗೆ ಉತ್ತರ ಕನ್ನಡವೆಂದರೆ ಬಹಳ ಪ್ರೀತಿ. ಇಲ್ಲಿನ ನಿಸರ್ಗ ಸೌಂದರ್ಯ, ಕಡಲತೀರ, ಜಲಪಾತಗಳ ಸೊಬಗನ್ನು ಇಷ್ಟಪಡುತಿದ್ದ ಅವರು ಕುಟುಂಬ ಸಮೇತರಾಗಿ ಆಗಮಿಸಿ ಇಲ್ಲಿ ಸಮಯ ಕಳೆದಿದ್ದರು. ಹೀಗಾಗಿ ಈ ವರ್ಷದ ಜನವರಿ, ಫೆಬ್ರವರಿಯಲ್ಲಿ ಪುನೀತ್ ಹೆಚ್ಚಿನ ಸಮಯ ಉತ್ತರ ಕನ್ನಡದಲ್ಲೇ ಕಳೆದಿದ್ದರು.
ಜಿಲ್ಲೆಗೆ ಭೇಟಿ ನೀಡಿದ್ದ ಅವರು ಕುಮಟಾ, ಗೋಕರ್ಣ, ಮುರುಡೇಶ್ವರ, ಜೊಯಿಡಾ ತಾಲೂಕಿನಲ್ಲಿ ತಮ್ಮ ತಂಡದೊಂದಿಗೆ ತಿರುಗಾಡಿ ಡಾಕ್ಯುಮೆಂಟರಿಗಾಗಿ ಚಿತ್ರೀಕರಣ ನಡೆಸಿದ್ದರು. ಕಡಲತೀರಗಳಲ್ಲಿ ಓಡಾಡಿ, ಸ್ಟಂಟ್‍ಗಳನ್ನೂ ಮಾಡಿದ್ದರು. ಗೋಕರ್ಣಕ್ಕೆ ಡಾಕ್ಯುಮೆಂಟರಿ ಚಿತ್ರೀಕರಣಕ್ಕಾಗಿ ಭೇಟಿ ನೀಡಿದ್ದ ಪುನೀತ್ ಸಾಮಾನ್ಯರಂತೆ ಕಡಲತೀರದಲ್ಲಿ ಅಡ್ಡಾಡಿದ್ದರು. ತೀರದ ಹೋಟೆಲ್‍ಗಳಲ್ಲಿ ಖಾದ್ಯಗಳನ್ನು ಸವಿಯುತ್ತಾ ಕಾಲ ಕಳೆದಿದ್ದರು. ಗೋಕರ್ಣದ ಪುರಾಣ ಪ್ರಸಿದ್ಧ ಶ್ರೀಮಹಾಬಲೇಶ್ವರ ದೇವಾಲಯಕ್ಕೂ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ್ದರು.
Advertisement
ಮುರುಡೇಶ್ವರಕ್ಕೆ ಭೇಟಿ ನೀಡಿದ್ದ ಅವರು ನೇತ್ರಾಣಿ ದ್ವೀಪ ಪ್ರದೇಶದಲ್ಲಿ ಡಾಕ್ಯುಮೆಂಟರಿಗಾಗಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಿ, ಮುರುಡೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ತೆರಳಿದ್ದರು. ನೇತ್ರಾಣಿಯಲ್ಲಿ ನಡೆದ ಚಿತ್ರೀಕರಣದ ಒಂದು ತುಣುಕನ್ನು ಪುನೀತ್ ಹತ್ತು ದಿನಗಳ ಬಳಿಕ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಗೋಕರ್ಣ ಕಡಲತೀರದಲ್ಲಿ ಮಾಡಿದ್ದ ಬ್ಯಾಕ್ ಫ್ಲಿಪ್ ಸ್ಟಂಟ್‍ಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು.
ನ.1ಕ್ಕೆ ಬಿಡುಗಡೆಯಾಗಬೇಕಿದ್ದ ಡಾಕ್ಯುಮೆಂಟರಿ
ಫೆಬ್ರವರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿತ್ರೀಕರಣ ಮಾಡಿದ್ದ ಡಾಕ್ಯುಮೆಂಟರಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗಬೇಕಿತ್ತು. ಈ ಬಗ್ಗೆ ಪುನೀತ್, ‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಎಂಬ ಸಾಲುಗಳನ್ನು ನೇತ್ರಾಣಿಯಲ್ಲಿ ಮಾಡಿದ ಸ್ಕೂಬಾ ಡೈವಿಂಗ್‍ನ ಫೋಟೋವೊಂದನ್ನು ಹಂಚಿ ಡಾಕ್ಯುಮೆಂಟರಿ ಬಿಡುಗಡೆಯ ಸಮಯ ತಿಳಿಸಿದ್ದರು.
Advertisement
ಈ ಡಾಕ್ಯುಮೆಂಟರಿ ಪಿಆರ್‌ಕೆ ಪ್ರೊಡಕ್ಷನ್ ಹಾಗೂ ಮಡ್ ಸ್ಕಿಪ್ಪರ್ಸ್ ಮೀಡಿಯಾ ಹೌಸ್‍ನಿಂದ ತಯಾರಾಗಿತ್ತು. ಆದರೆ ಡಾಕ್ಯುಮೆಂಟರಿಯಲ್ಲಿ ಏನಿತ್ತು? ಯಾಕಾಗಿ ಮಾಡಲಾಗಿತ್ತು ಎಂಬ ಬಗ್ಗೆ ಪುನೀತ್ ಆಗಲಿ, ಅವರ ತಂಡವಾಗಲಿ ಎಲ್ಲಿಯೂ ಮಾಹಿತಿ ಹಂಚಿಕೊಂಡಿರಲಿಲ್ಲ. ದುರಂತ ಎನ್ನುವಂತೆ ಡಾಕ್ಯುಮೆಂಟರಿ ಬಿಡುಗಡೆಗೂ ಮುನ್ನ ಪುನೀತ್ ಅಗಲಿದ್ದಾರೆ. ಅವರು ಇಷ್ಟಪಡುವ ಉತ್ತರ ಕನ್ನಡ ಜಿಲ್ಲೆಯ ಸೊಬಗು ಅವರ ಜೀವನದ ಕೊನೆಯ ಕ್ಷಣದ ಪೋಸ್ಟ್ ಆಗಿದ್ದು, ಅಭಿಮಾನಿಗಳಿಗೆ ನೋವು ತಂದಿದೆ.