ಯುವರತ್ನ ನಂತರ ‘ಜೇಮ್ಸ್’ ಬಾಂಡ್ ಆಗಲಿದ್ದಾರಂತೆ ಪುನೀತ್!

Public TV
1 Min Read
puneeth rajkumar james 2

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇದೀಗ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಪುನೀತ್ ಅಭಿನಯದ ಸೂಪರ್ ಹಿಟ್ ಚಿತ್ರ ರಾಜಕುಮಾರವನ್ನು ನಿರ್ದೇಶನ ಮಾಡಿದ್ದ ಸಂತೋಷ್ ಆನಂದ್‍ರಾಮ್ ಅವರೇ ಈ ಚಿತ್ರದ ಸಾರಥ್ಯವನ್ನೂ ವಹಿಸಿಕೊಂಡಿದ್ದಾರೆ. ಈ ಕಾರಣದಿಂದಲೇ ಭಾರೀ ನಿರೀಕ್ಷೆ ಮೂಡಿಸಿರೋ ಯುವರತ್ನ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಪುನೀತ್ ಜೇಮ್ಸ್ ಆಗಲು ರೆಡಿಯಾಗಿ ಬಿಟ್ಟಿದ್ದಾರೆ.

puneeth rajkumar james 3

ಪುನೀತ್ ರಾಜ್‍ಕುಮಾರ್ ಜೇಮ್ಸ್ ಅನ್ನೋ ಚಿತ್ರದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಕೇಳಿ ಬಂದಿದ್ದು ಬಹು ಹಿಂದೆಯೇ. ಆಗಿನ್ನೂ ಯುವರತ್ನ ಚಿತ್ರ ಶುರುವಾಗಿರಲೇ ಇಲ್ಲ. ಭರ್ಜರಿ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರಕ್ಕೆ ಪುನೀತ್ ಒಪ್ಪಿಗೆ ಕೊಟ್ಟು ಅದರ ಮೋಷನ್ ಪೋಸ್ಟರ್ ಕೂಡಾ ಬಿಡುಗಡೆಯಾಗಿತ್ತು. ಅದನ್ನು ಕಂಡು ಪುನೀತ್ ಅಭಿಮಾನಿಗಳೆಲ್ಲ ಖುಷಿಗೊಂಡಿದ್ದರು. ಆದರೆ ಆ ನಂತರ ಅದೇಕೋ ಈ ಸಿನಿಮಾ ಸುದ್ದಿಯೇ ಇಲ್ಲದಂತೆ ಮರೆಯಾಗಿತ್ತು.

ಆ ಹಂತದಲ್ಲಿ ಸ್ಕ್ರಿಪ್ಟ್ ಕೆಲಸ ಕಾರ್ಯ ತಡವಾದದ್ದರಿಂದಾಗಿ ಜೇಮ್ಸ್ ಚಿತ್ರ ಮುಂದಕ್ಕೆ ಹೋಗಿತ್ತಂತೆ. ಈ ಸಮಯದಲ್ಲಿ ಪುನೀತ್ ಯುವರತ್ನ ಚಿತ್ರದತ್ತ ಗಮನಹರಿಸಿದ್ದರು. ಚೇತನ್ ಮತ್ತೊಂದು ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಯುವರತ್ನ ಕೂಡಾ ಅಂತಿಮ ಘಟ್ಟ ತಲುಪಿಕೊಳ್ಳುತ್ತಿದೆ. ಪುನೀತ್ ಮುಂದೆ ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆಂಬ ಕುತೂಹಲವೂ ಪ್ರೇಕ್ಷಕರಲ್ಲಿದೆ. ಈ ಪ್ರಶ್ನೆಗೆ ಉತ್ತರವಾಗಿ ಎದುರುಗೊಳ್ಳೋದು ಮತ್ತದೇ ಜೇಮ್ಸ್ ಚಿತ್ರ!

puneeth rajkumar james 1

ಪುನೀತ್ ರಾಜ್ ಕುಮಾರ್ ಕೂಡಾ ಯುವರತ್ನ ನಂತರದಲ್ಲಿ ಜೇಮ್ಸ್ ಆಗಲು ಹಸಿರು ನಿಶಾನೆ ತೋರಿಸಿದ್ದಾರಂತೆ. ಚೇತನ್ ಕೂಡಾ ಬಾಕಿ ಉಳಿದಿದ್ದ ಜೇಮ್ಸ್ ಕೆಲಸ ಕಾರ್ಯಗಳನ್ನೆಲ್ಲ ಬೇಗ ಬೇಗನೆ ಮಾಡಿ ಮುಗಿಸಿಕೊಳ್ಳುತ್ತಿದ್ದಾರಂತೆ. ಅವರು ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರ ತೆರೆಗಂಡ ಬಳಿಕ ಈ ಸಿನಿಮಾ ಆರಂಭಿಸೋ ತಯಾರಿಯಲ್ಲಿದ್ದಾರೆ. ಪುನೀತ್ ಯುವರತ್ನ ಚಿತ್ರೀಕರಣ ಮುಗಿಸಿಕೊಂಡ ತಕ್ಷಣವೇ ಜೇಮ್ಸ್ ಆಗಲು ಉತ್ಸುಕರಾಗಿದ್ದಾರೆ. ಅಲ್ಲಿಗೆ ವರ್ಷಗಳ ಹಿಂದೆ ಸದ್ದು ಮಾಡಿ ಸೈಲೆಂಟಾಗಿದ್ದ ಜೇಮ್ಸ್ ಮತ್ತೆ ಆಕ್ಟಿವ್ ಆದಂತಾಗಿದೆ.

Share This Article