ವ್ಯಕ್ತಿತ್ವ ಎನ್ನುವುದು ವ್ಯಕ್ತಿಯ ಸಂಪಾದನೆ. ವ್ಯಕ್ತಿತ್ವದಿಂದ, ನಗುವಿನಿಂದ, ಅಹಂಕಾರವಿಲ್ಲದೇ ಯಾರಾದರೂ ಈ ರಾಜ್ಯದ ಸಕಲ ಹೃದಯವನ್ನು ಗೆದ್ದಿದ್ದಾರೆ ಅಂದರೆ, ಅದು ಪುನೀತ್ ರಾಜ್ ಕುಮಾರ್ ಎಂದು ಅಪ್ಪುನನ್ನು ಗುಣಗಾನ ಮಾಡಿದರು ಗೆಳೆಯ, ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ಹೇಳುತ್ತಾ, ಅವರು ಕನ್ನಡದಲ್ಲೇ ಮಾತು ಶುರು ಮಾಡಿದರು.
ಇಂದು ಬೆಂಗಳೂರಿನಲ್ಲಿ ನಡೆದ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಅತಿಥಿಯಾಗಿ ಭಾಗಿಯಾಗಿದ್ದ ಜ್ಯೂನಿಯರ್ ಎನ್.ಟಿ.ಆರ್ ‘ಪುನೀತ್ ಒಬ್ಬ ಸೂಪರ್ ಸ್ಟಾರ್, ಗ್ರೇಟ್ ಸ್ಟಾರ್, ಅದ್ಭುತ ಪತಿ, ಹೃದಯ ಶ್ರೀಮಂತ. ಅವರ ನಗುವಿನಲ್ಲಿದ್ದ ಶ್ರೀಮಂತಿಕೆ ನಾವು ಎಲ್ಲಿ ಹುಡುಕೋನ? ಅವರು ನಗುವಿನ ಒಡೆಯರಾಗಿದ್ದರು’ ಎಂದು ಗೆಳೆಯನ ಕುರಿತು ಮಾತನಾಡಿದರು. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ
ಪುನೀತ್ ರಾಜ್ ಕುಮಾರ್ ಅವರಿಗೆ ಸಿಕ್ಕಿರುವುದು ಕರ್ನಾಟಕ ರತ್ನ, ಆದರೆ, ಯಾರೂ ತಪ್ಪಾಗಿ ಭಾವಿಸಬಾರದು. ನನ್ನ ಪ್ರಕಾರ ಕರ್ನಾಟಕ ರತ್ನದ ಅರ್ಥನೇ ಪುನೀತ್ ರಾಜ್ ಕುಮಾರ್. ನಾನು ಇಲ್ಲಿಗೆ ಬಂದಿದ್ದು, ಹೆಮ್ಮೆಯ ಗೆಳೆಯನಾಗಿ. ಅವನಿಗಾಗಿ ನಾನು ಇಲ್ಲಿ ನಿಂತಿದ್ದೇನೆ. ಈ ಗೆಳೆತನ ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತದೆ ಎಂದು ಮಾತು ಮುಗಿಸಿದರು ಜ್ಯೂನಿಯರ್ ಎನ್.ಟಿ.ಆರ್.
ಕರ್ನಾಟಕ ರತ್ನ ಪ್ರಶಸ್ತಿ ಪ್ರಾರಂಭವಾದಾಗ ಮೊದಲ ಪ್ರಶಸ್ತಿಯನ್ನು ರಾಷ್ಟ್ರಕವಿ ಕುವೆಂಪು ಮತ್ತು ಡಾ.ರಾಜ್ ಕುಮಾರ್ ಅವರಿಗೆ ದೊರೆತಿತ್ತು. ಮೂವತ್ತು ವರ್ಷಗಳ ನಂತರ ಮತ್ತೆ ಸಿನಿಮಾ ರಂಗಕ್ಕೆ ಅದರಲ್ಲೂ ಡಾ.ರಾಜ್ ಕುಟುಂಬಕ್ಕೆ ಈ ಗೌರವ ದೊರೆತಿದೆ. ಹಾಗಾಗಿಯೇ ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಈ ಸಮಾರಂಭದಲ್ಲಿ ಹಾಜರಿದ್ದರು. ಡಾ.ರಾಜ್ ಕುಮಾರ್ ಅವರ ಅಷ್ಟೂ ಮಕ್ಕಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ವಿಶೇಷ.
ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪುನೀತ್ ಅವರ ನೆಚ್ಚಿನ ನಟರಾಗಿದ್ದ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) , ಹಾಗೂ ಗೆಳೆಯ ಮತ್ತು ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ (Jr.NTR), ಸುಧಾಮೂರ್ತಿ ಅವರು ಅತಿಥಿಗಳಾಗಿ ಆಗಮಿಸಿದ್ದರು. ಸಚಿವರಾದ ವಿ.ಸುನೀಲ್ ಕುಮಾರ್, ಆರ್.ಅಶೋಕ್, ಮುನಿರತ್ನ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.